More

    ಲಾಕ್‌ಡೌನ್‌ಗೆ ಜನಜೀವನ ಸ್ತಬ್ಧ

    ಚಿಕ್ಕೋಡಿ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹೊರಡಿಸಿರುವ ವಾರಾಂತ್ಯದ ಲಾಕ್‌ಡೌನ್‌ಗೆ ಅವಿಭಜಿತ ಚಿಕ್ಕೋಡಿ ಜಿಲ್ಲಾದ್ಯಂತ ಎಲ್ಲ ಪಟ್ಟಣ ಹಾಗೂ ಗ್ರಾಮಗಳಲ್ಲಿ ಶನಿವಾರ ಜನ ಜೀವನ ಸ್ತಬ್ಧಗೊಂಡಿತ್ತು.

    ಆಸ್ಪತ್ರೆಗಳು ಮತ್ತು ಔಷಧ ಅಂಗಡಿ ಸೇರಿದಂತೆ ಅಗತ್ಯ ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲ ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ವಾಹನಗಳು ಮತ್ತು ಜನಸಾಮಾನ್ಯರ ಓಡಾಡವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಅನವಶ್ಯಕವಾಗಿ ಸಾರ್ವಜನಿಕರು ಹೊರಬರದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು.

    ಹುಕ್ಕೇರಿ, ಸಂಕೇಶ್ವರ, ಕುಡಚಿ, ರಾಯಬಾಗ, ನಿಪ್ಪಾಣಿ, ಕಾಗವಾಡ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಲ್ಲದೆ ಖಾಲಿ ಬಸ್‌ಗಳು ನಿಂತಿರುವುದು ಕಂಡು ಬಂದವು. ಗಸ್ತು ತಿರುಗುತ್ತ ಪೊಲೀಸ್ ಸಿಬ್ಬಂದಿ ಅನಗತ್ಯವಾಗಿ ಕೆಲವೆಡೆ ರಸ್ತೆಗಿಳಿದಿದ್ದವರಿಗೆ ಲಾಠಿ ರುಚಿ ತೋರಿಸಿದರೆ, ಇನ್ನು ಹಲವೆಡೆ ದಂಡ ಪವಾತಿಸಿಕೊಂಡು ಅರಿವು ಮೂಡಿಸುತ್ತಿದ್ದ ದೃಶ್ಯಸಾಮಾನ್ಯವಾಗಿತ್ತು.

    ರಾಯಬಾಗ ವರದಿ: ಜನದಟ್ಟನೆಯಿಂದ ತುಂಬಿರುತ್ತಿದ್ದ ಇಲ್ಲಿನ ಝೆಂಡಾಕಟ್ಟೆ ವೃತ್ತ, ಕಾಯಿಪಲ್ಲೆ ಮಾರುಕಟ್ಟೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಸಾರ್ವಜನಿಕರ ಓಡಾಟ ಅತ್ಯಂತ ವಿರಳವಾಗಿತ್ತು.

    ಕುಡಚಿ ವರದಿ: ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಅನಗತ್ಯವಾಗಿ ಶನಿವಾರ ಮನೆಯಿಂದ ಹೊರಬಂದವರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಕುಡಚಿ ಪುರಸಭೆ ಮುಖ್ಯಾಧಿಕಾರಿ ಎಸ್.ಎ.ಮಹಾಜನ ಅವರು, ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕರೆಯಿಸಿ ಶನಿವಾರ 50ಕ್ಕೂ ಹೆಚ್ಚು ಜನರ ಮೂಗು ಹಾಗೂ ಗಂಟಲು ದ್ರವ ಸಂಗ್ರಹಿಸಿ ತಪಾಸಿಸಲಾಗಿದೆ ಎಂದರು. ಮಾಸ್ಕ್ ಧರಿಸದೆ ದೈಹಿಕ ಅಂತರ ಕಾಪಾಡದೆ ನಿರ್ಲಕ್ಷವಹಿಸಿದ್ದ ಜನರಿಗೆ ಪಿಎಸ್‌ಐ ಶಿವರಾಜ ಧರೆಗೋಣ ಅವರು 100 ರೂ.ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ವೈದ್ಯಾಧಿಕಾರಿ ಡಾ.ಸತೀಶ ಕಲಟ್ಟಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಿದರು.

    ಉಳ್ಳಾಗಡ್ಡಿ ಖಾನಾಪುರ ವರದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಓಡಾಟ ವಿರಳವಾಗಿತ್ತು. ನಗರ ಪ್ರದೇಶಗಳಾದ ಸಂಕೇಶ್ವರ ಹಾಗೂ ಯಮಕನಮರಡಿ, ಬೆಳಗಾವಿಯತ್ತ ಹೊಗಲು ಯಾವುದೇ ವಾಹನಗಳಿರಲಿಲ್ಲ ಹೀಗಾಗಿ ಬಹುತೇಕ ಹಳ್ಳಿಗಳಲ್ಲಿ ಭಾಗಶಃ ಸ್ವಯಂ ಪ್ರೇರಿತ ಬಂದ್ ಕಂಡುಬಂತು.

    ಕಾಗವಾಡ ವರದಿ: ಶುಕ್ರವಾರ ರಾತ್ರಿ 9ರಿಂದಲೇ ತಾಲೂಕಿನ ಶೇಡಬಾಳ, ಶಿರಗುಪ್ಪಿ, ಉಗಾರ ಬುದ್ರುಕ, ಉಗಾರ ಖುರ್ದ, ಮಂಗಸೂಳಿ ಸೇರಿದಂತೆ ಎಲ್ಲ ಗ್ರಾಮಗಳ ವ್ಯಾಪಾರಸ್ಥರು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ವಿಕೇಂಡ್ ಲಾಕ್‌ಡೌನ್‌ಗೆ ಬೆಂಬಲ ವ್ಯಕ್ತಪಡಿಸಿದರು. ಸದಾ ಜನ ಜಂಗುಳಿಯಿಂದ ಕೂಡಿರುತ್ತಿದ್ದ ಕಾಗವಾಡ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಇದ್ದರೂ ಪ್ರಯಾಣಿಕರ ಕೊರತೆಯಿಂದ ಭಣಗುಡುತ್ತಿತ್ತು. ಕಾಗವಾಡ ದಂಡಾಧಿಕಾರಿ ಪ್ರಮೀಳಾ ದೇಶಪಾಂಡೆ, ಪಿಎಸ್‌ಐ ಹನುಮಂತ ಧರ್ಮಟ್ಟಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

    ಮಕ್ಕಳು ಮನೆಯಲ್ಲೇ ಇರುವಂತೆ ಪಾಲಕರು ನೋಡಿಕೊಳ್ಳಬೇಕು. ಅನಗತ್ಯವಾಗಿ ಔಷಧಿಗಳ ಹೆಸರು ಹೇಳಿಕೊಂಡು ರಸ್ತೆಗಿಳಿದರೆ ತೊಂದರೆ ಅನುಭವಿಸಬೇಕಾದೀತು. ಸುಳ್ಳು ಹೇಳಿ ಹೊರಬರುವವರಿಂದ ನಿಜವಾಗಿಯೂ ಅಗತ್ಯ ಇರುವವರನ್ನು ಅನುಮಾನಿಸಿ, ಕ್ರಮ ಜರುಗಿಸುವ ಪ್ರಸಂಗ ಸೃಷ್ಟಿಯಾಗುತ್ತದೆ. ಹೀಗಾಗಿ ಜನತೆ ಅನವಶ್ಯಕವಾಗಿ ಹೊರಬರದೇ ಸಹಕರಿಸಬೇಕು.
    | ಮೋಹನ ಜಾಧವ ಪುರಸಭೆ ಮುಖ್ಯಾಧಿಕಾರಿ, ಹುಕ್ಕೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts