More

    ಲಾಕ್​ಡೌನ್ ಮುಂದುವರಿದರೂ ತರಕಾರಿಗೆ ಬರವಿಲ್ಲ

    ಹುಬ್ಬಳ್ಳಿ: ಒಂದು ವೇಳೆ ಲಾಕ್​ಡೌನ್ ಮುಂದುವರಿದರೂ ಧಾರವಾಡ ಜಿಲ್ಲೆಯಲ್ಲಿ ತರಕಾರಿಗೆ ಯಾವುದೇ ಕೊರತೆಯಾಗುವುದಿಲ್ಲ.

    ಈ ವರ್ಷ ಅತಿವೃಷ್ಟಿಯಾಗಿದೆ. ಮುಂಗಾರು ಕೈಕೊಟ್ಟರೂ ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗಿದೆ. ಹೆಚ್ಚು ಮಳೆಯಾದ್ದರಿಂದ ಎಲ್ಲ ಬೋರ್​ವೆಲ್​ಗಳು ರೀಚಾರ್ಜ್ ಆಗಿವೆ. ಅಧಿಕ ನೀರು ಕೊಡುತ್ತಿವೆ. ಹಾಗಾಗಿ ರೈತರು ತರಕಾರಿ ಬೆಳೆಯತ್ತ ಹೆಚ್ಚು ಒಲವು ತೋರಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಈಗ ತರಕಾರಿ ಮಾರುಕಟ್ಟೆಗೆ ಬರುತ್ತಿದೆ.

    ಹುಬ್ಬಳ್ಳಿ ಎಪಿಎಂಸಿಗೆ ಈ ಮೊದಲು ನಿತ್ಯ ಸುಮಾರು 150 ಗಾಡಿ ತರಕಾರಿ ಬರುತ್ತಿತ್ತು. ಈಗ ಇನ್ನೂ ಹೆಚ್ಚಾಗಿದೆ. ಕೆಲವೊಮ್ಮೆ 200 ಗಾಡಿ ತರಕಾರಿ ಬಂದಿರುವ ಉದಾಹರಣೆ ಇದೆ. ಲಾಕ್​ಡೌನ್ ಸಂದರ್ಭದಲ್ಲೂ ತರಕಾರಿ ದರ ಹೇಳಿಕೊಳ್ಳುವಂತಿಲ್ಲ. ಬೆಳೆದ ರೈತರಿಗೆ ಸಿಗುತ್ತಿರುವುದು ಪುಡಿಗಾಸು ಮಾತ್ರ. ಎಲ್ಲ ಲಾಭ ಮಧ್ಯವರ್ತಿಗಳ ಪಾಲೇ ಆಗುತ್ತಿರುವುದು ವಿಷಾದದ ಸಂಗತಿ.

    ಕೃಷಿ ಕಾರ್ಯ ನಿಂತಿಲ್ಲ:

    ದೇಶದಲ್ಲಿ ಏನೇ ಆದರೂ ರೈತ ಮಾತ್ರ ತನ್ನ ಕೆಲಸ ನಿಲ್ಲಿಸಿಲ್ಲ. ಎಂದಿನಂತೆ ಕೃಷಿ ಚಟುವಟಿಕೆ ನಡೆಸುತ್ತಿರುವುದರಿಂದಲೇ ಜನರಿಗೆ ಹಾಲು, ತರಕಾರಿ, ಕಾಳುಕಡಿ ಸೇರಿ ಎಲ್ಲ ಅಗತ್ಯ ವಸ್ತುಗಳು ಸಿಗುತ್ತಿವೆ.

    ಇದೀಗ ಕೊಯ್ಲಿಗೆ ಬಂದಿರುವ ತರಕಾರಿ ಮೇ ಅಂತ್ಯದವರೆಗೂ ಫಸಲು ನೀಡುತ್ತದೆ. ಹಾಗಾಗಿ ಲಾಕ್​ಡೌನ್ ಮುಂದುವರಿದರೂ ಯಾವುದೇ ಸಮಸ್ಯೆಯಾಗುವುದಿಲ್ಲ ಎಂಬುದು ಮಾರುಕಟ್ಟೆ ತಜ್ಞರ ಅಭಿಮತ.

    ಈ ವರ್ಷ ಕೊಳವೆ ಬಾವಿಯಲ್ಲಿ ಚೆನ್ನಾಗಿ ನೀರು ಬರುತ್ತಿದೆ. ಈ ಬಾರಿ ಎರಡು ಎಕರೆಯಲ್ಲಿ ಬದನೆ, ಟೊಮೆಟೊ ಹಾಗೂ ಸೊಪು್ಪ ಬೆಳೆದಿದ್ದೇನೆ. ಈಗಷ್ಟೇ ಫಸಲು ಆರಂಭವಾಗಿದ್ದು, ಮೇ- ಜೂನ್ ವರೆಗೂ ಬರುತ್ತದೆ ಎಂದು ಗಾಮನಗಟ್ಟಿ ಗ್ರಾಮದ ರೈತ ಕರಿಯಪ್ಪ ಹೇಳುತ್ತಾರೆ.

    ಬೇರೆ ರಾಜ್ಯಕ್ಕೂ: ಧಾರವಾಡ ಜಿಲ್ಲೆಯಿಂದ ತರಕಾರಿ ಬೇರೆ ರಾಜ್ಯಗಳಿಗೂ ಹೋಗುತ್ತದೆ. ವಿಶೇಷವಾಗಿ ಗೋವಾ, ಹೈದರಾಬಾದ್ ಮುಂತಾದೆಡೆ ಇಲ್ಲಿಂದಲೂ ತರಕಾರಿ ಕಳಿಸಲಾಗುತ್ತದೆ. ತರಕಾರಿ ಬೆಳೆಗಾರರಿಗೆ ಬೆಲೆ ಒಂದಿಷ್ಟು ಕೈ ಹಿಡಿದರೆ ಅವರ ಬದುಕು ಸಹ ಉಜ್ವಲವಾಗುತ್ತದೆ.

    ದರಗಳು: ಹುಬ್ಬಳ್ಳಿಯಲ್ಲಿ ಎಪಿಎಂಸಿಯಲ್ಲಿ ಸದ್ಯದ ತರಕಾರಿ ಸಗಟು ದರ ಪ್ರತಿ ಕೆಜಿಗೆ ಇಂತಿದೆ.

    ಬದನೆಕಾಯಿ- 15 ರೂ, ಹಾಗಲಕಾಯಿ- 14, ಎಲೆಕೋಸು- 10, ಗಜ್ಜರಿ- 14, ಹೂಕೋಸು- 10, ಸೌತೆಕಾಯಿ- 10, ಮೆಣಸಿನಕಾಯಿ- 20, ಬೆಂಡೆಕಾಯಿ- 12, ಹಿರೇಕಾಯಿ- 15, ಟೊಮ್ಯಾಟೊ- 5 ರೂ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts