More

    ಲಾಕ್​ಡೌನ್ ಕೊಂಚ ಸಡಿಲಿಕೆ

    ಶಿರಸಿ: ಕಿತ್ತಳೆ ವಲಯದಲ್ಲಿರುವ ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರ ಕೆಲ ಸಡಿಲಿಕೆ ನೀಡಿದ್ದು, ಭಟ್ಕಳ ತಾಲೂಕಿನ ಕಂಟೇನ್​ವೆುಂಟ್ ಪ್ರದೇಶ ಹೊರತುಪಡಿಸಿ ಉಳಿದ ನಗರ ಭಾಗಗಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಎಲ್ಲ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ ಎಲ್ಲ ಅಧಿಕಾರಿಗಳ ಜತೆ ರ್ಚಚಿಸಿ ಕೇಂದ್ರ ಸರ್ಕಾರದ ನಿಯಮದನ್ವಯ ಸಡಿಲಿಕೆ ಘೊಷಿಸಲಾಗಿದೆ. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಯಾವುದೇ ಅಂಗಡಿ ತೆರೆಯುವಂತಿಲ್ಲ. ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ನಗರ ಭಾಗದಲ್ಲಿ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಈ ನಿಯಮ ಮೇ 17ರವರೆಗೆ ಅನ್ವಯವಾಗುತ್ತದೆ. ಆಟೋ ನಿಲ್ದಾಣಗಳಲ್ಲಿ 10ಕ್ಕಿಂತ ಹೆಚ್ಚಿನ ಆಟೋ ನಿಲುಗಡೆಗೆ ಅವಕಾಶವಿಲ್ಲ. ಒಂದು ಆಟೋದಲ್ಲಿ ಒಬ್ಬ ಪ್ರಯಾಣಿಕನನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ ಎಂದರು.

    ಜಿಲ್ಲೆಯ ಕರಾವಳಿಯಲ್ಲಿ ಗ್ರಾಮೀಣ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಭಟ್ಕಳ ಹೊರತುಪಡಿಸಿ ಉಳಿದೆಡೆ ಮೇ 6ರಿಂದ ಜಾರಿಗೆ ಬರುವಂತೆ ಯಾಂತ್ರೀಕೃತ ದೋಣಿಗಳಿಗೆ ಅವಕಾಶ ನೀಡಲಾಗುವುದು. ಪರಸ್ಪರ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ನಿಯಮ ಉಲ್ಲಂಘಿಸಿದರೆ ಅನುಮತಿ ರದ್ದು ಮಾಡಲಾಗುವುದು ಎಂದು ಎಚ್ಚರಿಸಿದರು. ಹೋಟೆಲ್​ಗಳಲ್ಲಿ ಆಹಾರ ಸೇವನೆಗೆ ಅವಕಾಶವಿಲ್ಲ. ಈ ಹಿಂದಿನಂತೆ ಪಾರ್ಸಲ್ ವ್ಯವಸ್ಥೆ ಮುಂದುವರಿಯಲಿದೆ. ಮದ್ಯದಂಗಡಿಗಳು ಬೆಳಗ್ಗೆ 9ರಿಂದ ಸಂಜೆ 3ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಟೇಲರ್, ಧೋಬಿ, ಐಸ್ಕ್ರೀಂ ಶಾಪ್, ಕ್ಷೌರದ ಅಂಗಡಿ, ಬ್ಯೂಟಿ ಪಾರ್ಲ್​ರ್ ಸೇರಿ ಎಲ್ಲ ಅಂಗಡಿಗಳಿಗೂ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ನಿಯಮಾನುಸಾರ ಅವಕಾಶ ನೀಡಲಾಗಿದೆ. ಅವಕಾಶದ ದುರುಪಯೋಗ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

    ಜಿಲ್ಲೆಯ ಬೆಳಕೆ, ಮುಂಡಳ್ಳಿ, ತೆಂಗಿನಗುಂಡಿಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಕಾಮಗಾರಿಗಳಿಗೆ ಅನುಕೂಲವಾಗಲು ಮರಳು ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಮರಳು ಸಂಗ್ರಹಕ್ಕೆ ಯೋಗ್ಯವಾದ ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

    ಗೋವಾದಲ್ಲಿರುವ ಕನ್ನಡಿಗರು ರಾಜ್ಯಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಮೇ 5ರಂದು ಬೆಳಗ್ಗೆ ಗೋವಾ ಗಡಿಯವರೆಗೆ ಆ ರಾಜ್ಯದ ಅಧಿಕಾರಿಗಳು ಕನ್ನಡಿಗರನ್ನು ಕರೆತರಬೇಕು. ಅಲ್ಲಿಂದ ಮುಂದೆ ಅವರನ್ನು ಉತ್ತರ ಕನ್ನಡ ಜಿಲ್ಲಾಡಳಿತ ಆರೋಗ್ಯ ತಪಾಸಣೆ ನಡೆಸಿ ಅವರವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಿದೆ ಎಂದರು. ಗೋವಾ ಕಂಪನಿಗಳು ಇಲ್ಲವೆ ಇಲ್ಲಿನ ಕಾರ್ವಿುಕರು ತಾವು ತೆರಳುವ ಕಂಪನಿಯ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಿದರೆ ಕಾರವಾರದಿಂದ ಗೋವಾಗೆ ತೆರಳಲು ಅವಕಾಶ ನೀಡಲಾಗುವುದು ಎಂದರು.

    ಬೈಕ್ ಸವಾರರು ಅನಗತ್ಯ ಸಂಚರಿಸದೆ ನಿಯಂತ್ರಣದಲ್ಲಿರಬೇಕು. ಇಲ್ಲವಾದರೆ ಈಗ ಕೊಟ್ಟಿರುವ ಅವಕಾಶ ಸ್ಥಗಿತಗೊಳಿಸಿ ಮತ್ತಷ್ಟು ಬಿಗಿಗೊಳಿಸಲಾಗುವುದು ಎಂದೂ ಎಚ್ಚರಿಸಿದರು. ಜಿಲ್ಲಾಧಿಕಾರಿ ಕೆ. ಹರೀಶಕುಮಾರ, ಜಿಪಂ ಸಿಇಒ ಎಂ.ರೋಷನ್, ಎಸ್ಪಿ ಶಿವಪ್ರಕಾಶ ದೇವರಾಜ, ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಡಿಎಸ್ಪಿ ಜಿ.ಟಿ.ನಾಯಕ, ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಇತರರಿದ್ದರು.

    ಹಾವೇರಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿಗೆ ಹೊಂದಿಕೊಂಡಿರುವ ಹಾನಗಲ್ಲ, ಹಾವೇರಿ ರಸ್ತೆ, ದಾಸನಕೊಪ್ಪ ಭಾಗದ ಗಡಿಯನ್ನು ಸಂಪೂರ್ಣ ಸೀಲ್ ಮಾಡಲು ಸೂಚನೆ ನೀಡಲಾಗಿದೆ.
    | ಶಿವರಾಮ ಹೆಬ್ಬಾರ ಜಿಲ್ಲಾ ಉಸ್ತುವಾರಿ ಸಚಿವ

    ಸಚಿವರು ಹೇಳಿದ್ದು;
    ನಗರ, ಗ್ರಾಮೀಣ ಪ್ರದೇಶದ ಅಂಗಡಿಗಳಿಗೆ ಸಮಯ ನಿಗದಿ
    ಆಟೋ ನಿಲ್ದಾಣಗಳಲ್ಲಿ 10ಕ್ಕಿಂತ ಹೆಚ್ಚು ಆಟೋ ನಿಲ್ಲುವಂತಿಲ್ಲ
    ಹೋಟೆಲ್​ಗಳಲ್ಲಿ ಆಹಾರ ಸೇವನೆಗೆ ಅವಕಾಶವಿಲ್ಲ.
    ಆಟೋದಲ್ಲಿ ಒಬ್ಬರು ಪ್ರಯಾಣಿಸಲು ಅವಕಾಶ
    ಯಾಂತ್ರೀಕೃತ ದೋಣಿಗಳಿಗೆ ಅವಕಾಶ
    ಮದ್ಯದಂಗಡಿಗಳು ಬೆಳಗ್ಗೆ 9ರಿಂದ ಸಂಜೆ 3ರವರೆಗೆ ತೆರೆಯಲು ಅವಕಾಶ
    ಮರಳು ಸಾಗಾಟಕ್ಕೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts