More

    ಲಾಕ್​ಡೌನ್​ನಲ್ಲೂ ಕಾಮಗಾರಿ ಸ್ಲೋಡೌನ್!

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅವಳಿ ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ ಮಾರುಕಟ್ಟೆ ಪ್ರದೇಶಗಳಲ್ಲಿನ ಗಟಾರ್ ಹಾಗೂ ರಸ್ತೆ ಕಾಮಗಾರಿ ಪ್ರಮುಖವಾದುದು. ಜನನಿಬಿಡ ಹಾಗೂ ವಾಹನ ದಟ್ಟಣೆ ಇರುವ ಮಾರುಕಟ್ಟೆ ಪ್ರದೇಶದಲ್ಲಿ ಸಾಕಷ್ಟು ಯೋಜನಾಬದ್ಧವಾಗಿ ಈ ಕಾಮಗಾರಿ ಕೈಗೊಳ್ಳಬೇಕಾದುದು ಅಪೇಕ್ಷಣೀಯ. ಆದರೆ, ಸದ್ಯ ಸಾಗಿರುವ ಕೆಲಸವು ಅವ್ಯವಸ್ಥೆಯ ಆಗರವೇ ಆಗಿರುವಂತೆ ಗೋಚರಿಸುತ್ತದೆ. ಅಲ್ಲದೆ, ಮಳೆಗಾಲದಲ್ಲಿ ಕಾಮಗಾರಿ ಕೈಗೊಂಡಿರುವುದು ಸಂಚಾರಕ್ಕೆ ಸಂಚಕಾರವನ್ನೇ ತಂದಿದೆ.

    ‘ಸ್ಮಾರ್ಟ್ ರೋಡ್ ಪ್ಯಾಕೇಜ್-3’ ರಲ್ಲಿ 44.44 ಕೋಟಿ ರೂಪಾಯಿ ವೆಚ್ಚದಲ್ಲಿ 5.07 ಕಿ.ಮೀ. ನಷ್ಟು ಮುಖ್ಯ ರಸ್ತೆ ಹಾಗೂ 3.8 ಕಿ.ಮೀ. ನಷ್ಟು ಒಳರಸ್ತೆಗಳ ಸುಧಾರಣೆ ಕಾಮಗಾರಿ ನಡೆದಿದೆ. ಈ ಕಾಮಗಾರಿಯ ಗುತ್ತಿಗೆಯನ್ನು ದಾವಣಗೆರೆಯ ಕೆವಿಆರ್ ಕನ್​ಸ್ಟ್ರಕ್ಷನ್ಸ್ ಸಂಸ್ಥೆಯು ಪಡೆದಿದೆ.

    ಕಾಮಗಾರಿಯು ಕಳೆದ ಫೆಬ್ರವರಿಯಲ್ಲಿ ಆರಂಭವಾಗಿದ್ದು, ಪೂರ್ಣಗೊಳಿಸಲು ಒಂದು ವರ್ಷ ಕಾಲಾವಕಾಶ ನೀಡಲಾಗಿದೆ. ಮುಂದಿನ 5 ವರ್ಷಗಳ ಕಾಲ ನಿರ್ವಹಣೆ ಇವರದ್ದೇ ಆಗಿದೆ. ದಾಜಿಬಾನಪೇಟೆ ರಸ್ತೆಯಿಂದ ಘಂಟಿಕೇರಿ ಪೊಲೀಸ್ ಠಾಣೆ – ಬಂಕಾಪುರ ಚೌಕವರೆಗೆ; ಬಂಕಾಪುರ ಚೌಕದಿಂದ – ಭೂಸಪೇಟೆ – ಮೂರುಸಾವಿರಮಠ- ರಾಣಿ ಚನ್ನಮ್ಮ ವೃತ್ತದವರೆಗೆ; ಇಂದಿರಾ ಗಾಜಿನ ಮನೆಯಿಂದ ಬಾಸೆಲ್ ಮಿಷನ್ ಶಾಲೆ- ರಾಣಿ ಚನ್ನಮ್ಮ ವೃತ್ತದವರೆಗೆ ಹಾಗೂ ಕಮರಿಪೇಟೆಯಿಂದ ಪೊಲೀಸ್ ಠಾಣೆಯಿಂದ ತುಳಜಾ ಭವಾನಿ ದೇವಸ್ಥಾನದವರೆಗೆ ಕಾಮಗಾರಿ ನಡೆಯುತ್ತಿದೆ. ಕಂಚಗಾರ ಗಲ್ಲಿ, ಕುಬಸದ ಗಲ್ಲಿ, ಮಹಾವೀರ ಗಲ್ಲಿ, ಮೂರುಸಾವಿರ ಮಠ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿ ಕೂಡ ಈ ಪ್ಯಾಕೇಜ್​ನಡಿ ಬರುತ್ತದೆ.

    ಆದರೆ, ಈ ಕಾಮಗಾರಿಯನ್ನು ಜಾರಿಗೊಳಿಸುವಲ್ಲಿ ಯಾವುದೇ ರೀತಿಯ ‘ಸ್ಮಾರ್ಟ್’ನೆಸ್ ಕಂಡುಬರುತ್ತಿಲ್ಲ. ಸದ್ಯ ರಸ್ತೆ ಬದಿಯಲ್ಲಿ ಗಟಾರ್​ಗಳನ್ನು ನಿರ್ವಿುಸಲಾಗುತ್ತಿದೆ. ರಸ್ತೆಯ ಅಗಲವನ್ನು ಅಳೆದು ಗುರುತು ಹಾಕಿ ಗಟಾರ್​ಗಳನ್ನು ನಿರ್ವಿುಸುತ್ತಿರುವುದು ಕಂಡು ಬರುತ್ತಿಲ್ಲ. ಗಟಾರ್​ಗಳ ಗಾತ್ರದಲ್ಲಿ ಹೆಚ್ಚು-ಕಡಿಮೆ ಇರುವುದು, ಸೊಟ್ಟಗೆ ಸಾಗಿರುವುದನ್ನು ನೋಡಿದರೆ, ಮನತೋಚಿದಂತೆ ಕಾಮಗಾರಿ ನಡೆಸುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ.

    ಫೆಬ್ರವರಿಯಲ್ಲೇ ತ್ವರಿತವಾಗಿ ಕೆಲಸ ಕೈಗೊಳ್ಳದೆ ಮಳೆಗಾಲದಲ್ಲಿ ಕಾಮಗಾರಿಗೆ ವೇಗ ನೀಡಿರುವುದು ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ರಸ್ತೆ ಬದಿಯಲ್ಲಿ ಗಟಾರ್ ನಿರ್ವಣಕ್ಕಾಗಿ ತಗ್ಗು ತೆಗೆದು ಅದರ ಮಣ್ಣನ್ನು ರಸ್ತೆಯ ಮೇಲೆಯೇ ಸುರಿಯಲಾಗಿದೆ. ಇದರಿಂದಾಗಿ ಟಾರ್ ರಸ್ತೆಗಳು ಮಾಯವಾಗಿ ಮಣ್ಣು ಆವರಿಸಿಕೊಂಡಿದೆ. ಸದ್ಯ ಮಳೆ ಸುರಿಯುತ್ತಿರುವುದು ಈ ರಸ್ತೆಗಳೆಲ್ಲ ರಾಡಿಮಯವಾಗಿ ಸಂಚಾರ ದುಸ್ತರವಾಗಿದೆ. ಕಾಮಗಾರಿಯ ವಿಳಂಬಕ್ಕೆ ಲಾಕ್​ಡೌನ್ ಎಂಬ ನೆಪ ಸಿಕ್ಕಿದೆ. ಲಾಕ್​ಡೌನ್​ನಿಂದಾಗಿ ಕೆಲಸಗಾರರು ಸಿಗುತ್ತಿಲ್ಲ ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಹೇಳಿಕೊಂಡು ನಿಧಾನಗತಿ ಅನುಸರಿಸುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ವಾಹನ ಹಾಗೂ ಜನ ಸಂಚಾರ ತೀರ ವಿರಳವಾಗಿತ್ತು. ಈ ಸಂದರ್ಭದಲ್ಲಿ ಕಾಮಗಾರಿಯನ್ನು ಯೋಜನಾಬದ್ಧವಾಗಿ ಜಾರಿಗೊಳಿಸಲು ಉತ್ತಮ ಅವಕಾಶ ದೊರೆತಿತ್ತು. ಆದರೆ, ಈ ಸುಸಂದರ್ಭವನ್ನು ಸಂಬಂಧಪಟ್ಟವರು ಬಳಸಿಕೊಂಡಿಲ್ಲ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.

    ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಕಳೆದ 2 ವರ್ಷಗಳ ಹಿಂದೆ ನಿರ್ವಿುಸಲಾದ ಗಟಾರವನ್ನು ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಗಟಾರದ ವೆಚ್ಚವನ್ನು ಕಡಿತ ಮಾಡಿಯೇ ಗುತ್ತಿಗೆದಾರರಿಗೆ ಬಿಲ್ ಮಾಡಲಾಗುತ್ತದೆ. ಗುತ್ತಿಗೆದಾರರು ಹೊಸದಾಗಿ ಗಟಾರ್- ರಸ್ತೆ ನಿರ್ಮಾಣ ಮಾಡಿದ್ದಾರೆಂದು ಬಿಲ್ ಪಾವತಿಸಲಾಗುವುದಿಲ್ಲ.

    | ಎಸ್.ಎಚ್. ನರೇಗಲ್ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಯ ವಿಶೇಷಾಧಿಕಾರಿ

    ಹಳೆಯ ಚರಂಡಿಗೇ ಸ್ಲ್ಯಾಬ್

    ಸ್ಮಾರ್ಟ್ ರೋಡ್ ಪ್ಯಾಕೇಜ್-3ರ ಅಡಿ ಕಂಚಗಾರ ಗಲ್ಲಿ ಮತ್ತು ಶ್ರೀ ಶಂಕರ ಮಠ ಪ್ರದೇಶದಲ್ಲಿ ರಸ್ತೆ ಮತ್ತು ಗಟಾರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಎರಡೂ ಭಾಗಗಳಲ್ಲಿ ಗಟಾರ್ ನಿರ್ಮಾಣ ಪೂರ್ಣಗೊಂಡಿದೆ. ಒಂದು ಕಡೆಯ ಗಟಾರಕ್ಕೆ ಸ್ಲ್ಯಾಬ್ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಹೊಸದಾಗಿ ಗಟಾರ್ ನಿರ್ವಿುಸಿಲ್ಲ. ಹಳೆಯ ಗಟಾರವನ್ನು ಹಾಗೆಯೇ ಉಳಿಸಿಕೊಂಡು ಮೇಲ್ಭಾಗಕ್ಕೆ 4 ಇಂಚು ಕಾಂಕ್ರೀಟ್ ಹಾಕಿ ಎತ್ತರಗೊಳಿಸಲಾಗಿದೆ. ಇದರ ಮೇಲೆ ಆರ್​ಸಿಸಿ ಸ್ಲ್ಯಾಬ್ ಹಾಕಿ ಮೇಲೆ ಪೇವರ್ಸ್ ಅಳವಡಿಸುವ ಕೆಲಸ ಮಾಡಲು ಉದ್ದೇಶಿಸಲಾಗಿದೆ. ಗಟಾರ್ ನಿರ್ವಣವು ವಕ್ರ-ವಕ್ರವಾಗಿದೆ. ಮುಂದೆ ಸ್ಲ್ಯಾಬ್ ಹಾಕಿ ಪೇವರ್ಸ್ ಅಳವಡಿಸುವುದರಿಂದ ಗಟಾರದ ವಕ್ರತೆ ಗೋಚರಿಸುವುದಿಲ್ಲ. ಹಳೇ ಗಟಾರಕ್ಕೆ ಸ್ಲ್ಯಾಬ್ ಹಾಕಲಾಗಿದೆ ಎಂಬುದು ಸಹ ಗೊತ್ತಾಗದಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts