More

    ಲಂಬಾಣಿಗರಿಂದ ಪತ್ರ ಚಳವಳಿ

    ಅಕ್ಕಿಆಲೂರ: ಲಂಬಾಣಿ ಸಮುದಾಯವನ್ನು ಪರಿಶಿಷ್ಟ ಜಾತಿಯಲ್ಲೇ ಮುಂದುವರಿಸಬೇಕು ಎಂದು ಸಮುದಾಯದವರು ಬುಧವಾರ ಪತ್ರ ಚಳವಳಿ ನಡೆಸಿದರು.

    ಭೋವಿ, ಕೊರಚ, ಕೊರವ ಸೇರಿ ಇನ್ನಿತರ ಜಾತಿಗಳನ್ನು ಪರಿಶಿಷ್ಟ ಪಂಗಡಗಳಿಂದ ಕೈಬಿಡುವಂತೆ ಕೆಲವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಾಕಷ್ಟು ಹಿಂದುಳಿದ ಲಂಬಾಣಿ ಸಮಾಜಕ್ಕೆ ಪರಿಶಿಷ್ಟ ಜಾತಿ ಎಂದು ಪರಿಗಣಿಸಿ ಮೀಸಲಾತಿ, ಸೌಲಭ್ಯ ನೀಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಸಮಾಜದ ಯುವಕರು ಎಲ್ಲ ರಂಗಗಳಲ್ಲ್ಲೂ ವಿಶೇಷ ಸಾಧನೆ ತೋರುತ್ತಿದ್ದಾರೆ. ಆದರೆ, ಲಂಬಾಣಿ ಸೇರಿ ಕೆಲ ಜಾತಿಗಳನ್ನು ಪರಿಶಿಷ್ಟ ಪಂಗಡದಿಂದ ತೆಗೆದು ಹಾಕಿಸಲು ಕೆಲವರು ಕುತಂತ್ರ ನಡೆಸಿದ್ದು, ಅದಕ್ಕೆ ಸರ್ಕಾರ ಕಿವಿಗೊಡಬಾರದು ಎಂದು ಮುಖ್ಯಮಂತ್ರಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಲಂಬಾಣಿ ಸಮಾಜದ ಮುಖಂಡ ಚಂದ್ರು ಲಮಾಣಿ ತಿಳಿಸಿದರು.

    ಗುರುರಾಯಪಟ್ಟಣ, ಕಲಕೇರಿ, ಗುಂಡೂರ, ಬಾಳೂರ, ಜಂಗಿನಕೊಪ್ಪ ಸೇರಿ ಹಾನಗಲ್ಲ ತಾಲೂಕಿನ 14 ತಾಂಡಾಗಳಿಂದ 3500ಕ್ಕೂ ಹೆಚ್ಚು ಪತ್ರಗಳನ್ನು ಮುಖ್ಯಮಂತ್ರಿಗೆ ಕಳಿಸಲಾಯಿತು. ಚನ್ನಪ್ಪ ನಾಯಕ, ಹೊಳೆಯಪ್ಪ ಚವ್ಹಾಣ, ತುಕ್ಕಪ್ಪ ಕಾರಬಾರಿ, ಚಂದ್ರು ಲಮಾಣಿ, ಗೆಮಣ್ಣ ಲಮಾಣಿ, ಶಿವಾಜಿ ಲಮಾಣಿ, ಜಯಪ್ಪ ಲಮಾಣಿ, ಬಾಬಣ್ಣ ಲಮಾಣಿ, ಸುನೀಲ ಲಮಾಣಿ, ಈರಪ್ಪ ಲಮಾಣಿ, ರೇವಪ್ಪ ಲಮಾಣಿ ಪಾಲ್ಗೊಂಡಿದ್ದರು.

    ರಾಣೆಬೆನ್ನೂರ: ಪರಿಶಿಷ್ಟ ಜಾತಿ ಪಟ್ಟಿಯಿಂದ ಲಮಾಣಿ, ಭೋವಿ, ಕೊರಚ, ಕೊರಮ ಜಾತಿಯವರನ್ನು ಕೈ ಬಿಡಬಾರದು ಎಂದು ಒತ್ತಾಯಿಸಿ ರಾಜ್ಯ ತಾಂಡಾ ರಕ್ಷಣಾ ವೇದಿಕೆ ತಾಲೂಕು ಘಟಕದ ನೇತೃತ್ವದಲ್ಲಿ ವಿವಿಧ ಸಮಾಜದ ಕಾರ್ಯಕರ್ತರು ಬುಧವಾರ ಪತ್ರ ಚಳವಳಿ ನಡೆಸಿದರು.

    ತಾಲೂಕು ಅಧ್ಯಕ್ಷ ಭೀರಪ್ಪ ಲಮಾಣಿ ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಲಮಾಣಿ, ಭೋವಿ, ಕೊರಚ, ಕೊರಮ ಸಮಾಜದವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡಬಾರದು. ಈ ನಾಲ್ಕು ಸಮಾಜದವರು ಕಡು ಬಡವರಾಗಿದ್ದು, ನಿತ್ಯದ ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಸರ್ಕಾರ ಪರಿಶಿಷ್ಟ ಜಾತಿಯಿಂದ ಕೈ ಬಿಟ್ಟರೆ, ಸಮಾಜದಲ್ಲಿ ಬಹಳ ತುಳಿತಕ್ಕೆ ಒಳಗಾಗಲಿದ್ದಾರೆ.

    ಆದ್ದರಿಂದ ರಾಜ್ಯ ಸರ್ಕಾರ ಯಾರ ಒತ್ತಡಕ್ಕೂ ಮಣಿಯದೆ ಈಗಿರುವ ಮೀಸಲಾತಿಯನ್ನು ಮುಂದುವರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ವ್ಯವಸ್ಥೆ ಹೆಚ್ಚಿಸಬೇಕು. ಒಂದು ವೇಳೆ ಕೈ ಬಿಟ್ಟರೆ ರಾಜ್ಯಾದ್ಯಂತ ತೀತ್ರತರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ನಗರದ ಅಂಚೆ ಕಚೇರಿ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ 2 ಸಾವಿರಕ್ಕೂ ಅಧಿಕ ಪತ್ರಗಳನ್ನು ರವಾನಿಸಿದರು.

    ಪ್ರಮುಖರಾದ ಕೃಷ್ಣಮೂರ್ತಿ ಲಮಾಣಿ, ರಾಮಚಂದ್ರ ನಾಯಕ, ಮಂಜು ಲಮಾಣಿ, ಶಶಿಧರ ನಾಯಕ, ಅನಿಲ ಪೂಜಾರ, ಚೇತನ ಲಮಾಣಿ, ಮಾರುತಿ ಲಮಾಣಿ, ನಾಗೇಂದ್ರ ಲಮಾಣಿ, ಬಸವರಾಜ ಲಮಾಣಿ, ಮಾಲತೇಶ ಲಮಾಣಿ, ಅರವಿಂದ ಲಮಾಣಿ, ಆನಂದ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts