More

    ರೋಗ ಲಕ್ಷಣ ಇಲ್ಲದ ಗರ್ಭಿಣಿಯರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಲ್ಲ

    ಕಾರವಾರ: ಕಂಟೇನ್ಮೆಂಟ್ ವಲಯದಿಂದ ಬಂದವರು ಅಥವಾ ರೋಗ ಲಕ್ಷಣ ಇಲ್ಲದ ಗರ್ಭಿಣಿಯರಿಗೆ ಕೋವಿಡ್-19 ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮಲು ಹೇಳಿದರು.

    ಕ್ರಿಮ್್ಸ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಆರೋಗ್ಯವಾಗಿರುವ ಗರ್ಭಿಣಿಯರಿಗೆ ನೇರವಾಗಿ ಹೆರಿಗೆಗೆ ಅವಕಾಶ ಮಾಡಿಕೊಡಿ ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ರಾಜ್ಯದಲ್ಲಿ ಇಂದು ಕರೊನಾ ನಿಯಂತ್ರಣದಲ್ಲಿ ಇದೆ ಎಂದರೆ ಅದಕ್ಕೆ ಲಾಕ್​ಡೌನ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ವಿವಿಧ ಇಲಾಖೆ ಅಧಿಕಾರಿಗಳ, ಆರೋಗ್ಯ ಕಾರ್ಯಕರ್ತರ, ಪೊಲೀಸರು ಕಾರಣ ಅದಕ್ಕೆ ಅಭಿನಂದನೆಗಳು ಎಂದರು.

    ಇನ್ನು ಮುಂದೆ ನಮಗೆ ದೊಡ್ಡ ಸವಾಲಿದೆ, ಅದಕ್ಕೆ ಸನ್ನದ್ಧರಾಗಿ ಎಂದರು. ಮುಂದೆ ಕರೊನಾ ನಿಯಂತ್ರಣಕ್ಕೆ ಜನ ಜಾಗೃತರಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

    ಎಸ್​ಎಸ್​ಎಲ್​ಸಿ ಪರೀಕ್ಷೆಯ ಸಮಯದಲ್ಲಿ ಎಲ್ಲ ಕೇಂದ್ರಗಳಿಗೆ ಇಬ್ಬರು ಆರೋಗ್ಯ ಕಾರ್ಯಕರ್ತೆಯರನ್ನು ನೇಮಿಸಿ. ಶಾಲೆ ಪ್ರಾರಂಭಿಸುವ ಸಂಬಂಧ ಲಿಖಿತವಾಗಿ ಅಭಿಪ್ರಾಯ ತಿಳಿಸಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

    ಕರೊನಾ ಮುಗಿಯುತ್ತಿದ್ದಂತೆ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರ ಹಾಗೂ ನರ್ಸ್ ಹುದ್ದೆ ತುಂಬಲು ಕ್ರಮ ವಹಿಸಲಾಗುವುದು. ಎಲ್ಲ ಜಿಲ್ಲಾ ಆಸ್ಪತ್ರೆಗಳ ವಾರ್ಡ್​ಗಳಿಗೆ ಕೇಂದ್ರೀಕೃತ ಆಮ್ಲಜನಕ ವ್ಯವಸ್ಥೆ ಮಾಡಲು ಈಗಾಗಲೇ ಆದೇಶಿಸಲಾಗಿದೆ ಎಂದು ವಿವರಿಸಿದರು. ಅಂಕೋಲಾ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರು ಇಲ್ಲದ ಕಾರಣ ಅವರನ್ನು ನೇಮಕ ಮಾಡಲು ಅಥವಾ ಬೇರೆ ತಾಲೂಕಿನಿಂದ ಮೂರು ದಿನ ಅಂಕೋಲಾದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಿ ಎಂದು ಡಿಎಚ್​ಇ ಡಾ. ಶರದ್ ನಾಯಕ ಅವರಿಗೆ ಸೂಚನೆ ನೀಡಿದರು.

    ಮಂಗನ ಕಾಯಿಲೆಗೆ ಹಳೆಯ ಪದ್ಧತಿಯಂತೆ ಚಿಕಿತ್ಸೆ ನೀಡಲಾಗುತ್ತಿದೆ. ಅದರ ನಿಯಂತ್ರಣಕ್ಕೆ ಹೊಸ ಅಧ್ಯಯನ ನಡೆಯಬೇಕು ಎಂಬುದು ಹಲವರ ಅಭಿಪ್ರಾಯ. ಈ ಕುರಿತು ಇಲಾಖೆ ಗಂಭೀರವಾಗಿ ಕ್ರಮ ವಹಿಸಲಿದೆ ಎಂದರು.

    ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೇವೆ ಇನ್ನಷ್ಟು ಬಲಗೊಳ್ಳಬೇಕು. ಇನ್ನೂ ಹೆಚ್ಚಿನ ಜನರಿಗೆ ಈ ಸೇವೆ ಸಿಗುವಂತಾಗಬೇಕು ಎಂದರು.

    2 ಸಾವಿರ ಜನರ ಚಿಕಿತ್ಸಾ ಸಾಮರ್ಥ್ಯ: ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಲ್ಲೆಯ ಪರಿಸ್ಥಿತಿ ಕುರಿತು ಮಾಹಿತಿ ನೀಡಿ, ಜಿಲ್ಲಾ ಆಸ್ಪತ್ರೆಯಲ್ಲಿ 250 ಹಾಸಿಗೆಗಳ ಕರೊನಾ ವಾರ್ಡ್ ಸಿದ್ಧಪಡಿಸಲಾಗಿದೆ. ಅಲ್ಲದೆ, ವಿವಿಧ ತಾಲೂಕುಗಳಲ್ಲಿ ವಿಶೇಷ ವಾರ್ಡ್ ಪ್ರಾರಂಭಿಸಲಾಗುತ್ತಿದೆ. ಪಟ್ಟಾರೆ 2 ಸಾವಿರ ಕರೊನಾ ರೋಗಿಗಳಿದ್ದರೂ ಒಮ್ಮೆಲೇ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ನಾವು ಬೆಳೆಸಿದ್ದು, ಅದಕ್ಕೆ ಸಿದ್ಧರಾಗಿದ್ದೇವೆ. ಇದುವರೆಗೆ 6109 ಜನರ ಗಂಟಲ ದ್ರವದ ಮಾದರಿ ಪರೀಕ್ಷಿಸಲಾಗಿದೆ. ಹೊರ ರಾಜ್ಯದಿಂದ 4 ಸಾವಿರದಲ್ಲಿ 40 ಜನರಿಗೆ ರೋಗ ಕಂಡುಬಂದಿದೆ. ಎಲ್ಲರೂ ಕ್ವಾರಂಟೈನ್​ನಲ್ಲಿ ಇರುವುದರಿಂದ ಯಾವುದೇ ಆತಂಕ ಇಲ್ಲ ಎಂದರು. ಜಿಪಂ ಸಿಇಒ ಎಂ.ರೋಶನ್, ಎಸ್​ಪಿ ಶಿವಪ್ರಕಾಶ ದೇವರಾಜು ಇದ್ದರು. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಸ್ವಾಗತಿಸಿದರು.

    ಅಶೋಕ ಗಸ್ತಿ, ಈರಣ್ಣ ಕರಡಿ ಅವರು ಕೆಳಮಟ್ಟದಿಂದ ಬಿಜೆಪಿ ಕಟ್ಟಿ, ಪಕ್ಷಕ್ಕೆ ದುಡಿದವರು. ಹಿಂದುಳಿದ ಸಮಾಜಕ್ಕೆ ಹಾಗೂ ಕಲ್ಯಾಣ ಕರ್ನಾಟಕದವರಿಗೆ ರಾಜ್ಯಸಭೆ ಟಿಕೆಟ್ ನೀಡಿರುವುದು ಸ್ವಾಗತಾರ್ಹ. ಎಲ್ಲರಿಗೂ ನಿರೀಕ್ಷೆ ಇರುವುದು ಸಾಮಾನ್ಯ. ಹಿರಿಯನ್ನು ಬಿಟ್ಟು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಂಡಿದ್ದು, ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು. | ಬಿ. ಶ್ರೀರಾಮಲು ಆರೋಗ್ಯ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts