More

    ರೋಗಿಗಳಿಗೆ ಗಗನ‘ಕುಸುಮ’ವಾದ ಔಷಧ

    ಕಾರವಾರ: ಹಿಮೋಫೀಲಿಯಾ ರೋಗಿಗಳು ಲಾಕ್​ಡೌನ್ ಕಾರಣದಿಂದ ತೀವ್ರ ಸಂಕಟ ಅನುಭವಿಸುತ್ತಿದ್ದಾರೆ. ಅವರು ಔಷಧಕ್ಕಾಗಿ ಜಿಲ್ಲಾ ಆಸ್ಪತ್ರೆಗೆ ಬರಬೇಕಿದ್ದು, ಈಗ ಕೆಲ ದಿನಗಳಿಂದ ಸಾರ್ವಜನಿಕ ವಾಹನ ಸಂಚಾರವಿಲ್ಲದೇ ಔಷಧಕ್ಕಾಗಿ ಅಂಗಲಾಚುವ ಪರಿಸ್ಥಿತಿ ನಿರ್ವಣವಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 40 ರಷ್ಟು ಹಿಮೊಫೀಲಿಯಾ ರೋಗಿಗಳಿದ್ದು, ಅವರು ತಮಗೆ ಆಯಾ ತಾಲೂಕು ಆಸ್ಪತ್ರೆಯಲ್ಲೇ ಔಷಧ ಪೂರೈಕೆಗೆ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
    ಎಲ್ಲರಂತಲ್ಲ ಇವರ ಬದುಕು:
    ಹಿಮೋಫೀಲಿಯಾ ಅಥವಾ ಕುಸುಮ ರೋಗ ತಾಯಿಯ ಕಡೆಯಿಂದ ಮಕ್ಕಳಿಗೆ ಬರುವ ರಕ್ತಸಂಬಂಧಿ ಕಾಯಿಲೆ. ಹುಟ್ಟಿದ 6 ತಿಂಗಳಲ್ಲೇ ಕಾಯಿಲೆ ಇರುವ ಬಗ್ಗೆ ಗುರುತಿಸಬಹುದು. ಆದರೆ, ಅಪರೂಪಕ್ಕೆ ಒಬ್ಬರಿಗೆ ಬರುವ ಕಾಯಿಲೆ ಇದಾಗಿದ್ದರಿಂದ ಹೆಚ್ಚು ಜನಜನಿತವಾಗಿಲ್ಲ. ಈ ರೋಗ ಇದ್ದವರ ರಕ್ತ ಹೆಪ್ಪುಗಟ್ಟುವುದಿಲ್ಲ. ರೋಗಿಗೆ ಯಾವುದೇ ಗಾಯವಾದಲ್ಲಿ ಅಂಥವಾ ದೇಹದೊಳಗೆ ರಕ್ತ ಸೋರಿಕೆಯಾದಲ್ಲಿ ರಕ್ತದ ಹರಿವು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ರಕ್ತಸ್ರಾವ ನಿಲ್ಲಿಸಲು ಜರ್ಮನಿಯಲ್ಲಿ ತಯಾರಾಗುವ ಫ್ಯಾಕ್ಟರ್ ಎಂಬ ಚುಚ್ಚುಮದ್ದು ನೀಡಬೇಕಾಗುತ್ತದೆ. ರೋಗಿಯ ರಕ್ತದ ಗುಂಪು ಹಾಗೂ ಆತನ ಸಮಸ್ಯೆಗೆ ಅನುಗುಣವಾಗಿ ಫ್ಯಾಕ್ಟರ್ 8, ಫ್ಯಾಕ್ಟರ್9 ಹೀಗೆ ವಿವಿಧ ಚುಚ್ಚುಮದ್ದುಗಳು ಲಭ್ಯವಿದೆ. ರಕ್ತಸ್ರಾವ ಉಂಟಾದಲ್ಲಿ ಆ ಚುಚ್ಚುಮದ್ದು ಪಡೆದ ನಂತರವೇ ಬೇರೆ ಚಿಕಿತ್ಸೆಯನ್ನು ನೀಡಬೇಕಿದೆ.
    ಓಡಾಟಕ್ಕೆ ತೊಂದರೆ:
    ಈ ಮೊದಲು ಕುಸುಮ ರೋಗಿಗಳು ಹಣ ನೀಡಿ ಫ್ಯಾಕ್ಟರ್ ಚುಚ್ಚುಮದ್ದು ಖರೀದಿಸುತ್ತಿದ್ದರು. ನಿರಂತರ ಹೋರಾಟದ ಬಳಿಕ ಕೆಲ ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಫ್ಯಾಕ್ಟರ್ ಚುಚ್ಚುಮದ್ದು ಸಂಗ್ರಹ ಇಡುವ ಮತ್ತು ರೋಗಿಗಳಿಗೆ ಬೇಕಾದಾಗ ಉಚಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಈಗ ಲಾಕ್​ಡೌನ್ ಆದಾಗಿನಿಂದ ಜಿಲ್ಲಾ ಆಸ್ಪತ್ರೆಗೆ ಓಡಾಡುವುದೂ ಹಿಮೊಫೀಲಿಯಾ ರೋಗಿಗಳಿಗೆ ಸಮಸ್ಯೆಯಾಗಿದೆ. ಕಾರವಾರಕ್ಕೆ ಪ್ರತ್ಯೇಕ ವಾಹನ ಮಾಡಿಕೊಂಡು ಬರಬೇಕಾದ ಪರಿಸ್ಥಿತಿ ಇದೆ.
    ನೂರೆಂಟು ಸಮಸ್ಯೆ:
    ಹಿಮೋಫೀಲಿಯಾ ರೋಗಿಗಳು ಕಠಿಣವಾದ ಕೆಲಸ ಮಾಡಲು ಸಾಧ್ಯವಾಗದು. ಅಪ್ಪಿತಪ್ಪಿ ಗಾಯವಾದರೆ ಶೀಘ್ರ ಫ್ಯಾಕ್ಟರ್ ಚುಚ್ಚುಮದ್ದು ಸಿಗದೇ ಹೋದರೆ ಸಾವೇ ಗತಿ. ಹೆಚ್ಚು ಹೊತ್ತು ಕುಳಿತು ಕೆಲಸ ಮಾಡಿದರೆ ದೇಹದೊಳಗೆ ಬ್ಲೀಡಿಂಗ್ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ನಾಜೂಕಾದ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಪರಿಸ್ಥಿತಿ ಇವರದ್ದು. ಹಾಗಾಗಿ ಹೆಚ್ಚಿನ ಹಿಮೊಫೀಲಿಯಾ ರೋಗಿಗಳು ಸ್ಥಿತಿವಂತರಲ್ಲ. ಕಷ್ಟಪಟ್ಟು ದುಡಿಯಲೂ ಅವರಿಗೆ ಸಾಧ್ಯವಾಗದು. ಅವರನ್ನು ಅಂಗವಿಕಲರ ಪಟ್ಟಿಗೆ ಸೇರಿಸಿ ಸರ್ಕಾರ ಆದೇಶಿಸಿದೆ. ಸರ್ಕಾರದಿಂದ ಮಾಸಾಶನ ಬರುತ್ತದೆ. ಆದರೆ, ಹೆಚ್ಚಿನ ಕುಸುಮ ರೋಗಿಗಳನ್ನು ಶೇ. 50 ಕ್ಕಿಂತ ಕಡಿಮೆ ಅಂಗವೈಕಲ್ಯ ಇರುವವರು ಎಂದು ಪರಿಗಣಿಸುವುದರಿಂದ ಬರುವ ಮಾಸಾಶನ ಜೀವನಕ್ಕೆ ಸಾಕಾಗದಾಗಿದೆ.

    ರೋಗಿಗಳೆಲ್ಲ ಸೇರಿ ಮಣಿಪಾಲ ಹಿಮೊಫೀಲಿಯಾ ರೋಗಿಗಳ ಸಂಘ ಕಟ್ಟಿಕೊಂಡಿದ್ದೇವೆ. ಮಣಿಪಾಲಕ್ಕೆ ಹೋದರೆ ಚಿಕಿತ್ಸೆ ಸಿಗುತ್ತದೆ. ಆದರೆ, ಈಗ ಲಾಕ್​ಡೌನ್​ನಿಂದ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಕಾರವಾರಕ್ಕೆ ಹೋಗಿ ಬರಲೂ ಕಷ್ಟವಾಗುತ್ತದೆ. ಇದರಿಂದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಫ್ಯಾಕ್ಟರ್ ಔಷಧ ಇಡುವ ವ್ಯವಸ್ಥೆ ಮಾಡಬೇಕು.
    ಪ್ರವೀಣಕುಮಾರ ಶೆಟ್ಟಿ, ಹಿಮೊಫೀಲಿಯಾ ರೋಗಿ, ಕುಮಟಾ

    ಫ್ಯಾಕ್ಟರ್ ಔಷಧವನ್ನು ರಕ್ತನಿಧಿ ಕೇಂದ್ರಗಳಿರುವಲ್ಲಿ ಇರಿಸುವ ಪದ್ಧತಿ ಇದೆ. ಜಿಲ್ಲೆಯ ಕಾರವಾರ ಹೊರತುಪಡಿಸಿ ಇತರೆಡೆಯೂ ಈ ಔಷಧ ಲಭ್ಯವಾಗುವಂತೆ ಮಾಡುವ ಯೋಜನೆ ಇದೆ. ಕೋವಿಡ್ ಕಾರಣ ಅದು ಜಾರಿಯಾಗಿಲ್ಲ. ಶೀಘ್ರದಲ್ಲಿ ಜಾರಿ ಮಾಡಲು ಪ್ರಯತ್ನಿಸಲಾಗುವುದು.
    | ಡಾ.ಶರದ್ ನಾಯಕ, ಡಿಎಚ್​ಒ, ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts