More

    ರೈಲ್ವೆ ಭೂಸ್ವಾಧೀನಕ್ಕೆ ವಿರೋಧ

    ಶಿಕಾರಿಪುರ: ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.

    ಪಟ್ಟಣದ ಮಾಸೂರು ರಸ್ತೆ ಮೂಲಕ ಬಸ್‌ನಿಲ್ದಾಣ ಮಾರ್ಗವಾಗಿ ಆಗಮಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
    ಪುರಸಭೆ ಸದಸ್ಯ, ರೈತ ಮುಖಂಡ ನಾಗರಾಜ ಗೌಡ ಮಾತನಾಡಿ, ನಾವು ಎಂದಿಗೂ ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ರೈತರಿಗೆ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ಭೂಸ್ವಾಧೀನ ಮಾಡಿದ ರೈತರಿಗೆ ಸರಿಯಾದ ಪರಿಹಾರ ನೀಡಿಲ್ಲ. ರೈತರು ಲವತ್ತಾದ ಜಮೀನನ್ನೂ ಕಳೆದುಕೊಂಡು ಸರ್ಕಾರ ನೀಡಿದಷ್ಟು ಪರಿಹಾರ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
    ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷ ಡಿ.ಎಸ್.ಈಶ್ವರಪ್ಪ ಮಾತನಾಡಿ, ಈ ಯೋಜನೆ ಅವೈಜ್ಞಾನಿಕವಾಗಿದ್ದು ಇದರಿಂದ ನಮಗೆ ಉಪಯೋಗವಿಲ್ಲ. ಒತ್ತಾಯಪೂರ್ವಕವಾಗಿ ಸರ್ಕಾರ ರೈತರಿಗೆ ಅವೈಜ್ಞಾನಿಕ ಪರಿಹಾರ ನಿಗದಿ ಮಾಡಿದೆ. ಈ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಮಾರ್ಗಮಧ್ಯೆ ಸಿಗುವ ಅಪರೂಪದ ಔಷಧ ಸಸ್ಯಗಳ ಕಾಡು ಹಾಳಾಗುತ್ತದೆ. ವನ್ಯಜೀವಿಗಳಿಗೆ ತೊಂದರೆಯಾಗುವುದಲ್ಲದೇ ಅವುಗಳು ಗ್ರಾಮಗಳಿಗೆ ನುಗ್ಗಲು ಅವಕಾಶವಾಗುತ್ತದೆ. ಇಂತಹ ಜನವಿರೋಧಿ ಯೋಜನೆ ಬೇಡ. ನಮಗೆ ರೈತರ ಹಿತ ಮುಖ್ಯ ಎಂದು ಹೇಳಿದರು. ಶಿಕಾರಿಪುರದಿಂದ ಕೇವಲ 30 ಕಿಮೀ ದೂರದ ಆನಂದಪುರದಲ್ಲಿ ರೈಲು ಮಾರ್ಗವಿದೆ. ಸಾಗರ, ರಾಣೇಬೆನ್ನೂರಿನಲ್ಲೂ ಇದೆ. ಶಿಕಾರಿಪುರದಲ್ಲಿ ಹೊಸ ಕೆಎಸ್‌ಆರ್‌ಟಿಸಿ ಡಿಪೋ ಆಗಿದ್ದು ಎರಡು ಹೆದ್ದಾರಿಗಳು ಹಾದು ಹೋಗಿರುವುದರಿಂದ ಜನ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಹೀಗಾಗಿ ಈ ಅವೈಜ್ಞಾನಿಕ ರೈಲು ಯೋಜನೆಯ ಅಗತ್ಯವಿಲ್ಲ. ರೈತರಿಗೆ ತೊಂದರೆಯಾದರೆ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಪ್ರತಿಭಟನೆಯಲ್ಲಿ ಪ್ರಮುಖರಾದ ರಾಘವೇಂದ್ರ ನಾಯ್ಕ, ಶಿವರಾಜ್, ಲಿಂಗರಾಜ್, ಡಾ, ರಿಯಾಜ್ ಬಾಷಾ, ಬಗನಕಟ್ಟೆ ಸುರೇಶ್ ಮತ್ತು ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts