More

    ರೈಲು ಟಿಕೆಟ್ ಶುಲ್ಕದಲ್ಲಿ ಇಲ್ಲ ವ್ಯತ್ಯಯ

    ಶಿವಮೊಗ್ಗ: ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಿವಮೊಗ್ಗ-ಬೆಂಗಳೂರು ನಡುವಿನ ರೈಲು ಸಂಚಾರ ಜೂ.1ರಿಂದ ಆರಂಭವಾಗಲಿದ್ದು, ಟಿಕೆಟ್ ಶುಲ್ಕದಲ್ಲಿ ಯಾವುದೇ ವ್ಯತ್ಯಯವಿಲ್ಲ. ಆದರೆ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ 90 ನಿಮಿಷ ಮುಂಚಿತವಾಗಿಯೇ ಬರುವುದು ಕಡ್ಡಾಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

    ನಗರದ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಕೇವಲ ಒಂದು ರೈಲು ಮಾತ್ರ ಸೇವೆ ಆರಂಭವಾಗಲಿದೆ. ಜೂ.1ರಂದು ಸಂಜೆ 5.30ಕ್ಕೆ ಬೆಂಗಳೂರಿನಿಂದ ಹಾಗೂ 2ರಂದು ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ರೈಲು ಹೊರಡಲಿದೆ ಎಂದು ತಿಳಿಸಿದರು.

    ಕೇವಲ ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಕಲ್ಪಿಸಿದ್ದು, ಪ್ರತಿ ಬೋಗಿಯಲ್ಲಿ ಕೇವಲ 54 ಮಂದಿ ಪ್ರಯಾಣಕ್ಕೆ ಅವಕಾಶವಿದೆ. ಒಟ್ಟು 648 ಸೀಟು ಕಾಯ್ದಿರಿಸಲಾಗುತ್ತಿದೆ. ಹವಾ ನಿಯಂತ್ರಿತ ಬೋಗಿಯಲ್ಲಿ ಪ್ರಯಾಣಕ್ಕೆ ಅವಕಾಶವಿಲ್ಲ ಎಂದರು.

    ರೈಲು ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಶಿವಮೊಗ್ಗ, ಭದ್ರಾವತಿ, ಕಡೂರು, ತುಮಕೂರು, ಬೆಂಗಳೂರು ಮಾರ್ಗದಲ್ಲಿ ಸಂಚರಿಸಲಿದೆ. ರೈಲು ಹತ್ತುವುದಕ್ಕಿಂತ ಪೂರ್ವದಲ್ಲಿ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುವುದು. ರೋಗ ಲಕ್ಷಣವಿರುವವರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ. ಜಿಲ್ಲಾಡಳಿತದಿಂದಲೂ ಪ್ರತಿ ಪ್ರಯಾಣಿಕರಿಗೂ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುವುದು ಎಂದರು.

    ಕರೊನಾ ಸಂದರ್ಭದಲ್ಲಿ ದೂರದ ಪ್ರಯಾಣ ಒಳ್ಳೆಯದಲ್ಲ. ರೈಲಿನಲ್ಲಿ ಅನಿವಾರ್ಯವಾದರೆ ಮಾತ್ರ ಪ್ರಯಾಣಿಸುವುದು ಉತ್ತಮ ಎಂದು ಸಚಿವರು ಮನವಿ ಮಾಡಿದರು. ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಡಿಸಿ ಕೆ.ಬಿ.ಶಿವಕುಮಾರ್, ಮುಖಂಡರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ರೈಲ್ವೆ ಸ್ಟೇಷನ್ ಮಾಸ್ಟರ್ ಕೆ.ವಿ.ಕೃಷ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts