More

    ರೈತ ಸಂಘಟನೆ ಕಾರ್ಯಕರ್ತರು ವಶಕ್ಕೆ

    ಬೆಳಗಾವಿ: ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರನ್ನು ಪೊಲೀಸರು ವಶಪಡಿಸಿಕೊಂಡು, ಬಿಡುಗಡೆಗೊಳಿಸಿದರು.

    ನಾಲ್ಕೈದು ತಿಂಗಳುಗಳಿಂದ ಟನ್ ಕಬ್ಬಿಗೆ 3,500 ದಿಂದ 5,000 ರೂ. ವರೆಗೆ ದರ ನಿಗದಿಪಡಿಸಬೇಕು. ತೂಕದಲ್ಲಿ ಪಾರದರ್ಶಕತೆ ಹಾಗೂ ಕಬ್ಬಿನ ಹಳೆಯ ಬಾಕಿ ಬಿಲ್ ವಸೂಲಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಿರಂತರ ಪ್ರತಿಭಟನೆ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಸಕ್ಕರೆ ಕಾರ್ಖಾನೆಗಳ ಮಾಲೀಕರು, ಸಕ್ಕರೆ ಸಚಿವರು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ನಿರ್ಲಕ್ಷೃ ಮಾಡಿಕೊಂಡು ಬರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿನ ದರ ಘೋಷಣೆ ಮಾಡಿದ ಬಳಿಕವೇ ಕಾರ್ಖಾನೆಗಳನ್ನು ಆರಂಭಿಸಬೇಕು. ಆದರೆ, ಜಿಲ್ಲೆಯಲ್ಲಿನ ಕೆಲ ಕಾರ್ಖಾನೆಗಳು ಕಬ್ಬಿನ ದರ ಘೋಷಣೆ ಮಾಡದೆ ಆರಂಭಿಸಿವೆ. ಇದರಿಂದಾಗಿ ಟನ್ ಕಬ್ಬಿಗೆ ಎಷ್ಟು ದರ ಎಂಬುದು ಗೊತ್ತಾಗದೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಸಕ್ಕರೆ ಆಯುಕ್ತ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ರೈತರು ಆಗ್ರಹಿಸಿದರು.

    ಹತ್ತು ವರ್ಷಗಳ ಅವಧಿಯಲ್ಲಿ ದಿನ ಬಳಕೆ ವಸ್ತುಗಳು, ತೈಲ ಉತ್ಪನ್ನ ದರಗಳು ಹಾಗೂ ಕೃಷಿ ಯಂತ್ರೋಪಕರಣಗಳ ಬಾಡಿಗೆ ದರ ದುಪ್ಪಟ್ಟಾಗಿದೆ. ಆದರೆ, ಕಬ್ಬಿನ ದರ ಮಾತ್ರ ಏರಿಕೆ ಕಂಡಿಲ್ಲ. ಪರಿಣಾಮ ಕಬ್ಬು ಬೆಳೆಗಾರರ ವಾರ್ಷಿಕ ಆದಾಯವೆಲ್ಲ್ಲ ಕೃಷಿ ಚಟುವಟಿಕೆಗಳಿಗೆ, ಕುಟುಂಬ ನಿರ್ವಹಣೆಗಾಗಿ ಮಾಡಿದ ಸಾಲಕ್ಕೆ ಜಮಾ ಆಗುತ್ತಿದೆ. ಮತ್ತೆ ರೈತರು ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರವು ಟನ್ ಕಬ್ಬಿಗೆ ಕನಿಷ್ಠ 3,500 ರಿಂದ 5,000 ರೂ. ವರೆಗೆ ಹೆಚ್ಚಿಸಬೇಕು ಎಂದು ರೈತರು ಒತ್ತಾಯಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ರಾಜ್ಯ ಉಪಾಧ್ಯಕ್ಷ ಶಿವಾನಂದ ಮುಗಳಿಹಾಳ, ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ, ರಾಜೀವ ಪವಾರ, ಸಂಜು ಹವಾನವರ, ಪ್ರಕಾಶ ನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts