More

    ರೈತರ ಸಾಲ ಮನ್ನಾ ಯೋಜನೆಗೆ ಭಾರಿ ಹಿನ್ನಡೆ

    ನರಗುಂದ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲಿನ ಸಾಲ ಮನ್ನಾ ಯೋಜನೆ ರಾಜ್ಯದ ರೈತರಿಗೆ ಸಮರ್ಪಕವಾಗಿ ದೊರೆತಿಲ್ಲ. ಕೆಲವೊಂದು ರಾಜಕೀಯ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ರೈತರಿಗೆ ಸಾಕಷ್ಟು ವಂಚನೆಯಾಗಿದೆ ಎಂದು ರೈತಸೇನಾ ಕರ್ನಾಟಕ ಸಂಘಟನೆಯ ವಕ್ತಾರ ಗುರು ರಾಯನಗೌಡ್ರ ಆರೋಪಿಸಿದರು.

    ಮಹದಾಯಿ, ಕಳಸಾ-ಬಂಡೂರಿ ನದಿ ಜೋಡಣೆಗೆ ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ನಡೆದ 1926 ನೇ ದಿನದ ನಿರಂತರ ಹೋರಾಟ ವೇದಿಕೆಯಲ್ಲಿ ಅವರು ಮಾತನಾಡಿದರು. ರಾಜ್ಯದ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕಳೆದ 2018ರಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಾಜ್ಯದ ರೈತರು ವಿವಿಧ ಬ್ಯಾಂಕ್​ಗಳಲ್ಲಿ ಪಡೆದಿರುವ 2 ಲಕ್ಷ ರೂ. ಸುಸ್ತಿ ಬೆಳೆಸಾಲ ಮನ್ನಾ ಹಾಗೂ ಬೆಳೆ ಸಾಲಗಳನ್ನು ಸಕಾಲದಲ್ಲಿ ಮರು ಪಾವತಿಸಿದ ರೈತರಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿತ್ತು. ಆದರೆ, ಕೆಲವೊಂದು ಅನವಶ್ಯಕ ದಾಖಲಾತಿಗಳನ್ನು ಕೇಳಿದ್ದರಿಂದಾಗಿ ಅವುಗಳಲ್ಲಿನ ಹೆಸರು ಮತ್ತು ವಿಳಾಸ ಒಂದಕ್ಕೊಂದು ಹೊಂದಾಣಿಕೆಯಾಗದೆ ಈ ಮಹತ್ವದ ಯೋಜನೆಗೆ ಭಾರಿ ಹಿನ್ನ್ನೆ ಉಂಟಾಗಿದೆ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಾಲಮನ್ನಾ ಅವಧಿ ವಿಸ್ತರಿಸಿತಾದರೂ ರೈತರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಈ ಯೋಜನೆಯ ಅವಧಿ ಇದೇ ತಿಂಗಳು 20 ರಂದು ಮುಕ್ತಾಯಗೊಂಡಿದ್ದು, ಲಕ್ಷಾಂತರ ರೈತರಿಗೆ ಸಾಲಮನ್ನಾ ಯೋಜನೆಯಿಂದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಾಲಮನ್ನಾ ಯೋಜನೆ ಅವಧಿಯನ್ನು ರಾಜ್ಯದ ಪ್ರತಿಯೊಬ್ಬ ರೈತರಿಗೆ ದೊರೆಯುವವರೆಗೂ ಮುಂದುವರಿಸುವಂತೆ ಈಗಾಗಲೇ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹಾಗೂ ಜಿಲ್ಲಾಧಿಕಾರಿ, ತಹಸೀಲ್ದಾರ್ ಮತ್ತು ಲೀಡ್ ಬ್ಯಾಂಕ್ ಮ್ಯಾನೇಜರ್​ಗಳಿಗೆ ಮನವಿ ಸಲ್ಲಿಸಲಾಗಿದೆ. ಅ. 26ರೊಳಗೆ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆಯ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

    ವೇದಿಕೆಯಲ್ಲಿ ಎಸ್.ಬಿ. ಜೋಗಣ್ಣವರ, ಮಲ್ಲಣ್ಣ ಅಲೇಕಾರ, ಶಂಕರಗೌಡ ಪಾಟೀಲ, ಅಂದಾನಿಗೌಡ ಪಾಟೀಲ, ಮಹೇಶ ನಾವಳ್ಳಿ, ಅರ್ಜುನ ಮಾನೆ, ಸೋಮು ಬೆಂಗೇರಿ, ಲಕ್ಷ್ಮಣ ಗಾಳಿ, ಚನ್ನಪ್ಪಗೌಡ ಪಾಟೀಲ, ಹನುಮಂತ ಸರನಾಯ್ಕರ, ಚನ್ನಬಸು ಹುಲಜೋಗಿ, ವಾಸು ಚವ್ಹಾಣ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts