More

    ರೈತರ ಪರ ಎಚ್‌ಡಿಡಿ, ಎಚ್‌ಡಿಕೆ ನಿರಂತರ ಹೋರಾಟ

    ಪಾಂಡವಪುರ: ರೈತರ ಸಾಲ ಮನ್ನಾ, ರಸಗೊಬ್ಬರ ಹಾಗೂ ಕೃಷಿ ಉಪಕರಣಗಳ ಖರೀದಿಗೆ ಸಬ್ಸಿಡಿ ನೀಡುವುದರ ಜತೆಗೆ ಜಿಲ್ಲೆಯ ರೈತರ ಪರವಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದು ಶಾಸಕ ಸಿ.ಎಸ್ ಪುಟ್ಟರಾಜು ಹೇಳಿದರು.

    ತಾಲೂಕಿನ ಚಿಕ್ಕಾಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೈಕ್ ರ‌್ಯಾಲಿ ಮೂಲಕ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಚಿಕ್ಕಾಡೆ ನನಗೆ ರಾಜಕೀಯವಾಗಿ ಶಕ್ತಿ ತುಂಬಿದ ಗ್ರಾಮವಾಗಿದೆ. ಮೇಲುಕೋಟೆ ಕ್ಷೇತ್ರದ ಜನತೆ ಲೋಕಸಭಾ, ವಿಧಾನಸಭೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸಹಕಾರ ಸಂಘಗಳ ಚುನಾವಣೆಗಳಲ್ಲಿ ನನಗೆ ರಾಜಕೀಯ ಶಕ್ತಿ ತುಂಬಿದ್ದಾರೆ. ಮೂರು ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಜನರೇ ಸಾಕ್ಷಿ. ನನ್ನ ಶಾಸಕತ್ವದ ಅವಧಿಯಲ್ಲಿ ಬಸ್ ನಿಲ್ದಾಣ, ಬಸ್ ಡಿಪೋ, ಮಿನಿವಿಧಾನ ಸೌಧ, ಸರ್ಕಾರಿ ಆಸ್ಪತ್ರೆ, ಉದ್ಯಾನ, ಟಿಎಸ್ ಛತ್ರದಲ್ಲಿ ನಿವೃತ್ತ ನ್ಯಾಯಮೂರ್ತಿ ಇ.ಎಸ್.ವೆಂಕಟರಾಮಯ್ಯ ಅವರ ಸ್ಮರಣಾರ್ಥ 2 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದ್ದೇನೆ ಎಂದು ವಿವರಿಸಿದರು.

    ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಸಣ್ಣ ನೀರಾವರಿ ಸಚಿವರಾಗಿ 700 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ತಂದು ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಗಿದೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಜನರ ಮಧ್ಯೆ ನಿಂತು ಕೆಲಸ ಮಾಡಿದ್ದೇನೆ. ಆದ್ದರಿಂದ ಜನರ ಕಷ್ಟಸುಖಗಳಿಗೆ ಜತೆಯಾಗಿರುವ ನಿಮ್ಮ ಮನೆ ಮಗ ಪುಟ್ಟರಾಜು ಬೇಕಾ? ಇಲ್ಲ ವಿದೇಶಕ್ಕೆ ತೆರಳುವ ನಾಯಕ ಬೇಕಾ ಆಲೋಚಿಸಿ ಮತ ಹಾಕಿ ಎಂದರು.

    ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಹೈಟೆಕ್ ಸರ್ಕಾರಿ ಶಾಲೆಗಳು, 100 ಬೆಡ್ ಹೈಟೆಕ್ ಸರ್ಕಾರಿ ಆಸ್ಪತ್ರೆ, ವೃದ್ಧಾಪ್ಯ ವೇತನ, ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಾಲ ಮನ್ನಾ ಸೇರಿದಂತೆ ರೈತಪರ ಹಲವಾರು ಯೋಜನೆ ಜಾರಿಗೆ ತರಲು ಕುಮಾರಸ್ವಾಮಿ ನಿರ್ಧಾರಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಕುಮಾರಸ್ವಾಮಿ ಹಾಗೂ ದೇವೇಗೌಡರ ಕೈ ಬಲ ಪಡಿಸಬೇಕಿದೆ ಎಂದರು.
    ಪ್ರಚಾರಕ್ಕೆ ಆಗಮಿಸಿದ ಶಾಸಕ ಸಿ.ಎಸ್ ಪುಟ್ಟರಾಜು ಅವರನ್ನು ಗ್ರಾಮಸ್ಥರು ಎತ್ತಿನಗಾಡಿ ಮೆರವಣಿಗೆ ಮೂಲಕ ಅದ್ದೂರಿ ಸ್ವಾಗತ ಕೋರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts