More

    ರೈತರಿಗಿಲ್ಲ ಬೆಂಬಲ ಬೆಲೆ ಪ್ರಯೋಜನ

    ಕುಂದಗೋಳ: ಹಿಂಗಾರು ಬೆಳೆ ಬರುವ ಹೊತ್ತಿಗೆ ಮುಂಗಾರು ಹಂಗಾಮಿನ ಶೇಂಗಾ ಬೆಳೆಗೆ ಸರ್ಕಾರ ಖರೀದಿ ಕೇಂದ್ರ ಆರಂಭಿಸಿರುವುದು ವ್ಯಾಪಾರಸ್ಥರಿಗೆ ಮಹಾಲಾಭ ಮಾಡಿಕೊಡುವಂತಿದೆ.

    2019-20ನೇ ಸಾಲಿನ ಮುಂಗಾರು ಶೇಂಗಾ ಸೆಪ್ಟೆಂಬರ್ ವೇಳೆಗೆ ರೈತನ ಕೈ ಸೇರುತ್ತದೆ. ಹೆಚ್ಚೆಂದರೆ ನವೆಂಬರ್- ಡಿಸೆಂಬರ್ ಹೊತ್ತಿಗೆ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು. ಮಾರುಕಟ್ಟೆಯಲ್ಲಿ ಬೆಲೆ ಇಳಿದಿದ್ದರಿಂದ ಖರೀದಿ ಕೇಂದ್ರ ಆರಂಭಿಸುವುದು ಅನಿವಾರ್ಯವೂ ಆಗಿತ್ತು. ಆದರೆ, ಶೇ. 80ರಷ್ಟು ಶೇಂಗಾ ಬೆಳೆಗಾರರು ಎಪಿಎಂಸಿ, ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ನಂತರ ಸರ್ಕಾರ ಈಗ ಪ್ರೋತ್ಸಾಹ ಧನ ಘೋಷಿಸಿ ಖರೀದಿ ಕೇಂದ್ರ ಆರಂಭಿಸಿದೆ.

    ಕೆಲವೇ ರೈತರು, ದೊಡ್ಡ ಬೆಳೆಗಾರರು ಮಾತ್ರ ಒಂದಿಷ್ಟು ಶೇಂಗಾ ಉಳಿಸಿಕೊಂಡಿದ್ದಾರೆ. ಅಂಥವರಿಗಷ್ಟೇ ಸರ್ಕಾರದ ಲಾಭ. ಅಲ್ಲದೆ, ವ್ಯಾಪಾರಸ್ಥರು ವಾಮಮಾರ್ಗದ ಮೂಲಕ ರೈತರ ದಾಖಲೆಗಳನ್ನು ಪಡೆದು ಖರೀದಿ ಕೇಂದ್ರದ ದುರ್ಲಾಭ ಪಡೆಯಲು ಎಲ್ಲ ಅವಕಾಶಗಳನ್ನು ಒದಗಿಸಿಕೊಟ್ಟಂತಾಗಿದೆ.

    ಹೇಗೆ ದುರ್ಲಾಭ: ಬಹುತೇಕ ರೈತರಿಂದ ಪ್ರತಿ ಕ್ವಿಂಟಾಲ್​ಗೆ 3500 ರೂ. ವರೆಗೆ ಶೇಂಗಾ ಖರೀದಿ ಮಾಡಿರುವ ವ್ಯಾಪಾರಸ್ಥರು ಈಗ ಅದೇ ಶೇಂಗಾವನ್ನು ಗೋದಾಮಿನಲ್ಲಿ ಇಟ್ಟುಕೊಂಡು ರೈತರ ಹೆಸರಲ್ಲಿ ಬೆಂಬಲ ಬೆಲೆಯಡಿ 5090 ರೂ.ಗೆ ಮಾರಾಟ ಮಾಡಲು ನೋಂದಣಿ ಭರ್ಜರಿಯಾಗಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 28 ಸಾವಿರ ಹೆಕ್ಟೇರ್ ಶೇಂಗಾ ಬಿತ್ತನೆಯಾಗಿತ್ತು. ಆದರೆ, ಪ್ರಕೃತಿ ವಿಕೋಪಕ್ಕೆ ಸಿಲುಕಿ ಇಳುವರಿ ಕಡಿಮೆಯಾಗಿದೆ. ಆವಕ ಕಡಿಮೆ ಇದ್ದರೂ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ ಹೆಚ್ಚೆಂದರೆ 3500 ರೂ. ವರೆಗೆ ಬೆಲೆ ಇತ್ತು. ಆಗಲೇ ಬಹುತೇಕ ಉತ್ಪನ್ನ ಮಾರಾಟವಾಗಿ ಹೋಗಿದೆ. ಇನ್ನೇನಿದ್ದರೂ ಖರೀದಿ ಕೇಂದ್ರದಲ್ಲಿ ದುರ್ಲಾಭದ ದರ್ಬಾರ್. ಗದಗ, ಹಾವೇರಿ ಜಿಲ್ಲೆಯಲ್ಲೂ ಇದೇ ಸ್ಥಿತಿ ಇದೆ.

    ತಂತ್ರಾಂಶ ಸಮಸ್ಯೆ: ಇಷ್ಟು ಮಾತ್ರವಲ್ಲ, ಅಳಿದುಳಿದ ರೈತರು ಖರೀದಿ ಕೇಂದ್ರದ ಪ್ರಯೋಜನ ಪಡೆಯೋಣವೆಂದರೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಅದೂ ಕೂಡ ಕೈಗೆ ಸಿಗದಂತಾಗಿದೆ.

    ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಎಫ್​ಐಡಿ ತಂತ್ರಾಂಶದಲ್ಲಿ ಹೊಲದಲ್ಲಿದ್ದ ಬೆಳೆಯ ಬದಲಾಗಿ ಬೇರೆ ಬೆಳೆ ತಪ್ಪಾಗಿ ನಮೂದಿಸಲಾಗಿದೆ. ಇದು ಕೂಡ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

    ಫೆ. 3ರಿಂದ ಕರ್ನಾಟಕ ಆಯಿಲ್ ಫೆಡರೇಷನ್ (ಕೆಒಎಫ್)ನವರು ಹುಬ್ಬಳ್ಳಿ ಶಿರಗುಪ್ಪಿ, ಕುಂದಗೋಳ ಹಾಗೂ ತಾಲೂಕಿನ ಸಂಶಿ, ಕಮಡೊಳ್ಳಿ, ಯರಗುಪ್ಪಿ, ಯಲಿವಾಳ ಗ್ರಾಮದಲ್ಲಿ ಖರೀದಿ ಕೇಂದ್ರ ಆರಂಭಿಸಿದ್ದಾರೆ. ರೈತರು ಹೆಸರು ನೋಂದಾಯಿಸಲು ಬಂದರೆ ಅಲ್ಲಿನ ಸಿಬ್ಬಂದಿ ನಿಮ್ಮ ಸರ್ವೆ ನಂಬರ್​ನಲ್ಲಿ ಹತ್ತಿ, ಮೆಣಸಿನಗಿಡ ತೋರಿಸುತ್ತಿದೆ. ನಿಮ್ಮ ಹೆಸರು ನೋಂದಣಿ ಆಗುವುದಿಲ್ಲ ಎಂದು ವಾಪಸ್ ಕಳಿಸುತ್ತಿದ್ದಾರೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

    4 ಎಕರೆ ಹೊಲದಲ್ಲಿ ಶೇಂಗಾ ಬೆಳೆದಿದ್ದೇನೆ. ಆದರೆ, ಬೆಳೆದರ್ಶಕದಲ್ಲಿ ಹತ್ತಿ ಎಂದು ತೋರಿಸುತ್ತಿದೆ. ಮೊದಲೇ ಸಾಲ ಮಾಡಿ ಬೆಳೆ ಕಟಾವು ಮಾಡಿದ್ದೇನೆ, ಬಡ್ಡಿ ಏರುತ್ತಿರುವುದು ಆತಂಕ ತಂದಿದೆ. ಇಂತಹದ್ದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಬೆಂಬಲ ಬೆಲೆಯಿಂದ ವಂಚಿತವಾಗಿದ್ದೇವೆ ಎಂದು ರೈತರಾದ ಚನ್ನಬಸಪ್ಪ ಕುಡವಕ್ಕಲ, ಗಂಗಾಧರ ಇಂಗಳಳ್ಳಿ ಅಳಲು ತೋಡಿಕೊಂಡರು.

    ಶಿರಗುಪ್ಪಿಯಲ್ಲಿ 300 ನೋಂದಣಿ

    ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯಲ್ಲಿ ಖರೀದಿ ಕೇಂದ್ರದಲ್ಲಿ 14 ಗ್ರಾಮಗಳ ಅಂದಾಜು 300 ರೈತರು ಈ ವರೆಗೆ ನೋಂದಣಿ ಮಾಡಿದ್ದಾರೆ. ಹೆಸರು ನೋಂದಣಿಗೆ ಫೆ. 15 ಕೊನೇ ದಿನವಾಗಿದೆ.

    ಕೃಷಿ ಇಲಾಖೆಯವರು ಬೆಳೆ ಸಮೀಕ್ಷೆ ಮಾಡಿದ್ದಾರೆ. ಬೆಳೆದರ್ಶಕದಲ್ಲಿ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಜನವರಿ 31ರ ವರೆಗೆ ಕಾಲಾವಕಾಶವಿತ್ತು. ಅಷ್ಟರಲ್ಲಿ ಆಕ್ಷೇಪಣೆ ಸಲ್ಲಿಸಿದ್ದರೆ ಸರಿಪಡಿಸಬಹುದಿತ್ತು. ಈಗ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ.

    | ಸದಾಶಿವ ಖಾನೂರೆ

    ಕೃಷಿ ಇಲಾಖೆ ಸಹಾಯಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts