More

    ರೈತನ ಮೇಲೆ ಸಲಗ ದಾಳಿ

    ಹಲಗೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಳವಾಯಿ ಕೋಡಿಹಳ್ಳಿ ಗ್ರಾಮದ ರೈತರೊಬ್ಬರ ಮೇಲೆ ಸೋಮವಾರ ಸಲಗ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ.
    ಗ್ರಾಮದ ಮಾದೇಗೌಡ ಗಾಯಗೊಂಡವರು. ಅವರು ತಮ್ಮ ಮನೆ ಹಿಂಭಾಗದ ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ವೇಳೆ ದಿಢೀರ್ ಪ್ರತ್ಯಕ್ಷವಾದ ಕಾಡಾನೆ ಸೊಂಡಿಲಿನಿಂದ ತಿವಿದು ಕೆಳಗೆ ಬೀಳಿಸಿ ಅವರನ್ನು ಸೊಂಡಿಲಿನಿಂದ ಮೂರು ಸುತ್ತು ಉರುಳಿಸಿದೆ. ಅವರ ಚೀರಾಟ ಕೇಳಿ ಧಾವಿಸಿದ ಗ್ರಾಮಸ್ಥರು ಜೋರಾಗಿ ಕೂಗಿ ಆನೆಯನ್ನು ಓಡಿಸಲು ಯತ್ನಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಸಲಗ ಮಾದೇಗೌಡರನ್ನು ಬಿಟ್ಟು ಜನರ ಮೇಲೆ ದಾಳಿ ಮಾಡಲು ಮುಂದಾಯಿತು. ಈ ವೇಳೆ ಹೆದರಿ ಓಡಿ ಹೋಗುವ ಭರದಲ್ಲಿ ಹಲವರು ಬಿದ್ದು ಗಾಯಗೊಂಡರು. ಆನೆ ಅಲ್ಲಿಯೇ ಕಟ್ಟಿ ಹಾಕಿದ್ದ ಎತ್ತುಗಳ ಮೇಲೆಯೂ ದಾಳಿ ನಡೆಸಿ ಗಾಯಗೊಳಿಸಿತಲ್ಲದೇ, ಎತ್ತಿನ ಗಾಡಿ ಹಾಗೂ ಬೈಕ್ ಜಖಂಗೊಳಿಸಿದೆ.
    ಆನೆ ದಾಳಿಯಿಂದ ಮಾದೇಗೌಡ ಅವರ ತಲೆ, ಸೊಂಟದ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
    ಸ್ಥಳಕ್ಕೆ ಅರಣ್ಯಾಧಿಕಾರಿ ರವಿ ಬುರ್ಜಿ ಮತ್ತು ಸಿಬ್ಬಂದಿ ಆಗಮಿಸಿ ಸಲಗವನ್ನು ಹರಸಾಹಸಪಟ್ಟು ಕಬ್ಬಾಳು ಕಡೆಗೆ ಓಡಿಸುವಲ್ಲಿ ಯಶಸ್ವಿಯಾದರು. ಈ ಸಲಗ ದಿಕ್ಕು ತಪ್ಪಿ ಬಂದಿರಬಹುದು. ಕಬ್ಬಾಳು ಅರಣ್ಯ ಪ್ರದೇಶಕ್ಕೆ ಸೇರುವುದರಿಂದ ಅದನ್ನು ಅಲ್ಲಿಗೆ ಓಡಿಸಲಾಗಿದೆ. ಗಾಯಾಳುವನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದೇವೆ. ಆಸ್ಪತ್ರೆ ವೆಚ್ಚವನ್ನು ಇಲಾಖೆಯೇ ಭರಿಸುವ ಜತೆಗೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಅರಣ್ಯಾಧಿಕಾರಿ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts