More

    ರೈತನ ಕೈ ಹಿಡಿದ ಮಿಶ್ರ ಬೆಳೆ

    ಡಂಬಳ: ಸಾವಯವ ಪದ್ಧತಿ ಮೂಲಕ ತೋಟಗಾರಿಕೆ ಮಿಶ್ರ ಬೆಳೆ ಬೆಳೆಯುತ್ತಿರುವ ಗ್ರಾಮದ ರೈತನೊಬ್ಬ ಲಕ್ಷಾಂತರ ರೂಪಾಯಿ ಆದಾಯ ಪಡೆಯುವುದರೊಂದಿಗೆ ಯುವ ಕೃಷಿಕರಿಗೂ ಮಾದರಿಯಾಗಿದ್ದಾರೆ.

    ಡಂಬಳ ಗ್ರಾಮದ ರೈತ ಭೀಮಪ್ಪ ಪೂಜಾರ ಅವರು ಐದು ವರ್ಷಗಳ ಹಿಂದೆ ತಮ್ಮ 4 ಎಕರೆ ಜಮೀನಿನಲ್ಲಿ ಉಳ್ಳಾಗಡ್ಡಿ, ಮೆಕ್ಕೆಜೋಳ, ಹತ್ತಿ ಬೆಳೆಯುತ್ತಿದ್ದರು. ಮೂರ್ನಾಲ್ಕು ಬೆಳೆ ಸೇರಿ ವರ್ಷಕ್ಕೆ 40ರಿಂದ 50 ಸಾವಿರ ರೂಪಾಯಿ ಉಳಿಯುತ್ತಿತ್ತು. ಕೆಲವೊಮ್ಮೆ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಅದು ಕೂಡ ಬರುತ್ತಿರಲಿಲ್ಲ. ಇದರಿಂದ ಬೇಸತ್ತ ರೈತ ಕೃಷಿ ತೋಟಗಾರಿಕೆಯತ್ತ ಗಮನ ಹರಿಸಿ ಸಂತಸ ಜೀವನ ಸಾಗಿಸುತ್ತಿದ್ದಾರೆ.

    ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆಯ ಸಹಾಯಧನ ಪಡೆದುಕೊಂಡು ತೋಟಗಾರಿಕೆ ಮಿಶ್ರ ಬೆಳೆ ಬೆಳೆದಿದ್ದಾರೆ. ಹನಿ ನೀರಾವರಿ ಮೂಲಕ ನಾಲ್ಕು ಎಕರೆ ಜಮೀನಿನಲ್ಲಿ 30 ಮಾವು, 30 ಚಿಕ್ಕು, 300 ಪೇರಲ, 500 ಮಹಾಗನಿ, 20 ಜಂಬೂ ನೇರಳೆ, 50 ಅಂಜೂರಿ, 160 ಗೋಂಡಬಿ ಇವುಗಳ ಮಧ್ಯದಲ್ಲಿ 1 ಎಕರೆ ತುಳಸಿ ಬೆಳೆ ಹಾಗೂ 1 ಎಕರೆಯಲ್ಲಿ 1100 ಜಿ-9 ತಳಿಯ ಬಾಳೆ ಬೆಳೆದು ಉತ್ತಮ ಲಾಭ ಕಂಡುಕೊಂಡಿದ್ದಾರೆ.

    ಒಂದು ಪ್ಲಾಸ್ಟಿಕ್ ಟ್ರೇ ಪೇರಲಕ್ಕೆ 300 ರಿಂದ 400 ರೂಪಾಯಿ. ಬಾಳೆ, ತುಳಸಿ ಕೆ.ಜಿಗೆ 80 ರೂಪಾಯಿ, ಕ್ವಿಂಟಾಲ್​ಗೆ 8000 ಸಾವಿರ ರೂ.ನಂತೆ ವಿವಿಧ ನಗರ ಪ್ರದೇಶದಿಂದ ವ್ಯಾಪಾರಸ್ಥರು ತೋಟಕ್ಕೆ ಬಂದು ಖರೀದಿಸುತ್ತಾರೆ. ಒಂದೇ ಭೂಮಿಯಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯುವುದರ ಮೂಲಕ ವರ್ಷದ ನಿರ್ವಹಣೆಯ ಖರ್ಚು ವೆಚ್ಚ ಕೂಡ ಕಡಿಮೆ ಮಾಡಿ ಲಕ್ಷಾಂತರ ರೂಪಾಯಿ ಆದಾಯ ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿದ್ದಾರೆ.

    ಚಿಕ್ಕ ಹಿಡುವಳಿದಾರ ರೈತರು ಮಿಶ್ರ ಬೆಳೆ ಬೆಳೆಯುವುದರಿಂದ ಅದರಲ್ಲಿ ಅಧಿಕ ಲಾಭ ಗಳಿಸಬಹುದು. ಬೆಳೆಗಳಿಗೆ ಖರ್ಚು ಕೂಡ ಕಡಿಮೆ. ತೋಟಗಾರಿಕೆ ಇಲಾಖೆಯಿಂದಾಗಿ ಮಿಶ್ರ ಬೆಳೆಗಳನ್ನು ಬೆಳೆಯಲು ಮಾರ್ಗದರ್ಶನ ನೀಡಿ ಇಲಾಖೆಯಿಂದ ನರೇಗಾ ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ.

    | ಬಸವರಾಜ ಬಿನ್ನಾಳ

    ತೋಟಗಾರಿಕೆ ಸಹಾಯಕ ನಿರ್ದೇಶಕ ಮುಂಡರಗಿ

    ರೈತರು ಮಿಶ್ರ ಬೆಳೆಗೆ ಪ್ರಥಮ ಆದ್ಯತೆ ನೀಡಬೇಕು. ಕೃಷಿಯಲ್ಲಿ ಪ್ರಾಮಾಣಿಕತೆ, ಬೆಳೆದ ಬೆಳೆಗಳ ಬಗ್ಗೆ ನಂಬಿಕೆ ಮುಖ್ಯವಾಗಿದೆ. ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿದಾಗಿ ಲಾಭ ಗಳಿಸಲು ಸಾಧ್ಯವಿದೆ. ತೋಟಗಾರಿಕೆ ಬೆಳೆಯನ್ನು ಬೆಳೆಯುವುದರಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಕೆ ಮಾಡಬಹುದು. ರೈತರು ಸಾವಯವ ಗೊಬ್ಬರ ಬಳಕೆ ಮಾಡಲು ಮುಂದಾಗಬೇಕು.

    | ಭೀಮಪ್ಪ ಪೂಜಾರ

    ಮಿಶ್ರ ತೋಟಗಾರಿಕೆ ಬೆಳೆಗಾರ, ಡಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts