More

    ರೇಷ್ಮೆ ಗೂಡು ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ

    ಶಿರಹಟ್ಟಿ: ರೇಷ್ಮೆ ಗೂಡು ಖರೀದಿಸುವ ವ್ಯಾಪಾರಸ್ಥರು ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟದಿಂದಾಗಿ ರೇಷ್ಮೆ ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. ಪಟ್ಟಣದ ರೇಷ್ಮೆ ಗೂಡು ಮಾರಾಟ ಕೇಂದ್ರಕ್ಕೆ ವಿವಿಧ ಭಾಗಗಳಿಂದ ಶನಿವಾರ ಗೂಡು ಮಾರಾಟಕ್ಕೆ ಬಂದಿದ್ದ ರೈತರು, ವ್ಯಾಪಾರಸ್ಥರು ಗೂಡು ಖರೀದಿಸದ ಕಾರಣ ಆಕ್ರೋಶಗೊಂಡು ರಸ್ತೆ ಮೇಲೆ ಗೂಡುಗಳನ್ನು ಚೆಲ್ಲಿ ಪ್ರತಿಭಟನೆ ನಡೆಸಿದರು.

    ವ್ಯಾಪಾರಸ್ಥರು ಈಗಾಗಲೇ ರೈತರಿಂದ ಕ್ವಿಂಟಾಲ್​ಗಟ್ಟಲೆ ರೇಷ್ಮೆ ಗೂಡು ಖರೀದಿಸಿ ಅದನ್ನು ಸಂಸ್ಕರಣೆ ಮಾಡಿ ನೂಲು ತಯಾರಿಸಿಟ್ಟಿದ್ದಾರೆ. ಆದರೆ, ನೂಲು ಮಾರಾಟ ಮಾಡಲು ಬೆಂಗಳೂರು, ರಾಮನಗರಕ್ಕೆ ಹೋದರೆ ಅಲ್ಲಿನ ಮಾರುಕಟ್ಟೆಯಲ್ಲಿ ಯಾರೊಬ್ಬರೂ ಸ್ಪಂದಿಸುತ್ತಿ1ಲ್ಲ. ಹೀಗಾಗಿ ವ್ಯಾಪಾರಸ್ಥರು ರೈತರಿಂದ ಗೂಡು ಖರೀದಿಸುವುದನ್ನೇ ಸ್ಥಗಿತಗೊಳಿಸಿದ್ದಾರೆ. ಆದರೆ, ಈ ಕುರಿತು ಮಾಹಿತಿ ತಿಳಿಯದೇ ಮಾರುಕಟ್ಟೆಗೆ ಗೂಡು ತಂದಿದ್ದ ರೈತರು ತೊಂದರೆಗೆ ಸಿಲುಕಿದರು. ಕೆಲವರು ಗೂಡು ಖರೀದಿಗೆ ಮುಂದಾದರೂ ಪ್ರತಿ ಕೆ.ಜಿ.ಗೆ 120 ರೂ. ಬೆಲೆ ನಿಗದಿಪಡಿಸಿದರು. ‘ಬೇಕಿದ್ದರೆ ಕೊಡಿ, ಇಲ್ಲದಿದ್ದರೆ ಬಿಡಿ’ ಎಂದು ಕಡ್ಡಿ ಮುರಿದಂತೆ ಹೇಳಿದರು. ಕೆಲವು ದಿನಗಳ ಹಿಂದೆ ಪ್ರತಿ ಕೆ.ಜಿ.ಗೆ 300 ರೂ. ಇದ್ದ ರೇಷ್ಮೆ ಗೂಡಿನ ಬೆಲೆ ಶನಿವಾರ ಏಕಾಏಕಿ 120 ರೂ. ಇಳಿಸಿದ್ದರಿಂದ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.

    ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಪಿಎಸ್​ಐ ಎಸ್.ಎಂ. ನಾಯಕ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.

    ರೈತರಾದ ಹೊನ್ನಪ್ಪ ಕಲಾದಗಿ, ಗೂಳಪ್ಪ ಕರಿಗಾರ, ಆನಂದ ಕಾರಕಟ್ಟಿ ಮಾತನಾಡಿ, ‘ರೇಷ್ಮೆ ನೂಲು ಬಿಚ್ಚಣಿಕೆದಾರರು ಮುನ್ಸೂಚನೆ ನೀಡದೆ ಏಕಾಏಕಿ ಖರೀದಿ ಸ್ಥಗಿತಗೊಳಿಸಿದ್ದಾರೆ. ದೂರದ ಊರುಗಳಿಂದ ಸಾವಿರಾರು ರೂ. ಖರ್ಚು ಮಾಡಿಕೊಂಡು ಗೂಡು ತಂದಿರುವ ನಮಗಾದ ನಷ್ಟ ಭರಿಸುವವರು ಯಾರು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನೂಲು ಬಿಚ್ಚಿಕೆದಾರರ ಸಂಘದ ಅಧ್ಯಕ್ಷ ಚಂದ್ರಕಾಂತ ಅಕ್ಕಿ ಮಾತನಾಡಿ, ‘ಕಳೆದೆರಡು ತಿಂಗಳಿಂದ ಲಕ್ಷಾಂತರ ರೂ. ಬಂಡವಾಳ ಹಾಕಿ ರೈತರಿಂದ ಗೂಡು ಖರೀದಿಸಿದ್ದೇವೆ. ಲಾಕ್​ಡೌನ್​ನಿಂದಾಗಿ ರೇಷ್ಮೆ ನೂಲು ಬೆಂಗಳೂರು, ರಾಮನಗರಕ್ಕೆ ಕಳುಹಿಸಲು ಸಾರಿಗೆ ವ್ಯವಸ್ಥೆ ಹಾಗೂ ಮಾರಾಟಕ್ಕೆ ಅವಕಾಶ ಇಲ್ಲದೇ ಹಾಗೆಯೇ ಬಿದ್ದಿದೆ. ಈ ಕುರಿತು ನಮ್ಮ ಸಂಘದ ರಾಜ್ಯಾಧ್ಯಕ್ಷರು ರೇಷ್ಮೆ ಸಚಿವರಿಗೆ ಮನವರಿಕೆ ಮಾಡಿ, ರೇಷ್ಮೆ ನೂಲನ್ನು ಸಿಲ್ಕ್ ಬೋರ್ಡ್​ನಿಂದ ಖರೀದಿಸಿ ಎಂದು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಾಂಕೇತಿಕವಾಗಿ ರೇಷ್ಮೆ ಗೂಡು ಖರೀದಿ ವಹಿವಾಟನ್ನು ಸ್ಥಗಿತಗೊಳಿಸಿದ್ದೇವೆ’ ಎಂದರು.

    ಇಬ್ಬರ ಸಮಸ್ಯೆ ಆಲಿಸಿ ಪ್ರತಿಕ್ರಿಯಿಸಿದ ತಹಸೀಲ್ದಾರ್, ಲಾಕ್​ಡೌನ್​ನಿಂದಾಗಿ ರೈತರ ಬೆಳೆ ಮಾರಾಟಕ್ಕೆ ತೊಂದರೆಯಾಗಿದೆ. ಈ ಕುರಿತು ಮೇಲಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು. ಮುಂದಿನ ನಡೆ ಕುರಿತು ಪತ್ರಿಕೆ ಮೂಲಕ ಸಂದೇಶ ನೀಡಲಾಗುತ್ತದೆ ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts