More

    ರೇಷನ್ ಕೊಂಡೊಯ್ಯಲು ಹರಸಾಹಸ

    ಜೊಯಿಡಾ: ಸರ್ಕಾರವು ಜನರಿಗೆ ಅನುಕೂಲವಾಗಲಿ ಎಂದು ಎರಡು ತಿಂಗಳ ಪಡಿತರ ಧಾನ್ಯವನ್ನು ಒಟ್ಟಿಗೆ ನೀಡುತ್ತಿದೆ. ಆದರೆ, ತಾಲೂಕಿನ ಹಲವು ಕುಗ್ರಾಮಗಳ ಜನರಿಗೆ ಅದನ್ನು ಕೊಂಡೊಯ್ಯುವುದು ಬಹು ಕಷ್ಟವಾಗಿದೆ. ಜನ ಹತ್ತಾರು ಕಿಮೀ ನಡೆದು, ಸೈಕಲ್ ತಳ್ಳಿಕೊಂಡು ಪಡಿತರ ಹೊತ್ತೊಯ್ಯಲು ಹರಸಾಹಸಪಡುತ್ತಿರುವ ದೃಶ್ಯ ಎಲ್ಲೆಡೆ ಕಾಣುತ್ತದೆ.

    ಜೊಯಿಡಾ ತಾಲೂಕು ಎಂದರೆ ಕಾಡು. ಹತ್ತಾರು ಕಿಮೀ ಅಂತರದಲ್ಲಿ ನಾಲ್ಕೈದು ಮನೆಗಳ ಒಂದೊಂದು ಊರುಗಳಿವೆ. ಗ್ರಾಮಗಳ ಜನ ತಾಲೂಕು ಕೇಂದ್ರಕ್ಕೆ ಬರಬೇಕು ಎಂದರೆ 80 ಕಿಮೀ ಕ್ರಮಿಸಬೇಕಾದ ಪರಿಸ್ಥಿತಿ ಕೆಲವು ಗ್ರಾಮಗಳದ್ದಿದೆ. ಪಡಿತರಕ್ಕೂ ಹತ್ತಾರು ಕಿಮೀ ನಡೆದು ಸಾಗಬೇಕಿದೆ. ಈ ಹಿಂದೆ ಖಾಸಗಿ ವಾಹನಗಳನ್ನು ನಂಬಿ ಜನ ಮನೆಗೆ ಪಡಿತರ ಕೊಂಡೊಯ್ಯುತ್ತಿದ್ದರು. ಆದರೆ, ಕರೊನಾ ಲಾಕ್ ಡೌನ್​ನಿಂದ ಖಾಸಗಿ ವಾಹನಗಳು ಸಿಗುತ್ತಿಲ್ಲ. ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಸರ್ಕಾರ ಹೇಳುತ್ತದೆ. ಆದರೆ, ಪಡಿತರ ಕೊಂಡೊಯ್ಯುವುದು ಹೇಗೆ ಎಂಬುದು ಜನರ ಪ್ರಶ್ನೆ.

    ತಾಲೂಕಿನ ಗಂಗೋಡಾ, ಬಾಜಾರಕುಣಂಗ, ಜಗಲಬೇಟ, ಅಸು ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಪಡಿತರ ಸರಿಯಾಗಿ ತಲುಪುತ್ತಿಲ್ಲ. ತೊಂದರೆ ಇದ್ದಲ್ಲಿ ಆಯಾ ಗ್ರಾಮಗಳಿಗೇ ಪಡಿತರ ತಲುಪಿಸುವುದಾಗಿ ಜಿಲ್ಲಾಧಿಕಾರಿ ನೀಡಿದ ಭರವಸೆಯೂ ಇಲ್ಲಿ ಜಾರಿಗೆ ಬಂದಿಲ್ಲ. ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶ.

    ‘ನಮಗೆ ರೇಷನ್ ಸರಬರಾಜು ಸರಿಯಾಗಿಲ್ಲ. ಬೇಡಿಕೆ ಸಲ್ಲಿಸಲಾಗಿದೆ. ಸೀಮೆ ಎಣ್ಣೆ ಮತ್ತು ಗೋಧಿ ಸರಬರಾಜು ಆಗಿಲ್ಲ. ವಿತರಣೆಗೆ ಕಾರ್ವಿುಕರು ಸಿಗುತ್ತಿಲ್ಲ’ ಎಂದು ಜಗಲಬೇಟದಲ್ಲಿ ಪಡಿತರ ವಿತರಿಸುವ ಟಿಎಪಿಸಿಎಮ್​ಸ್ನ ರಾಹುಲ್ ನಾಯ್ಕ ಹೇಳುತ್ತಾರೆ. ‘ನಮ್ಮಲ್ಲಿ ಅಂಥ ಗಂಭೀರ ಸಮಸ್ಯೆ ಏನಿಲ್ಲ. ಈ ಕುರಿತು ವಿತರಕರನ್ನು ವಿಚಾರಿಸುತ್ತೇನೆ’ ಎನ್ನುತ್ತಾರೆ ಜೊಯಿಡಾ ಆಹಾರ ನಿರೀಕ್ಷಕ ಸಂತೋಷ ಎಳಗದ್ದೆ. ಒಟ್ಟಾರೆ ಜನರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲವಾಗಿದೆ.

    ನಮ್ಮ ಊರು ಸಿಂದೊಳ್ಳಿಯಿಂದ ಮಗನ ಜೊತೆಗೆ 5 ಕಿಮೀ ನಡೆದು ಜಗಲಬೇಟಕ್ಕೆ ಬಂದು ರೇಷನ್ ಕೊಂಡೊಯ್ಯುತ್ತಿದ್ದೇನೆ. ಊರಿಗೇ ರೇಷನ್ ಪೂರೈಸುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹೇಳಿದರೂ ಸಹಾಯವಾಗಿಲ್ಲ. ರಾಧಿಕಾ ಮಸೂರ್ಕರ, ಸಿಂದೊಳ್ಳಿಯ ವೃದ್ಧೆ

    ಚಾಪೋಲಿ ಕಳಸಾಯಿ ಮತ್ತು ಗಂಗೋಡಾ ಜನರು ರೇಷನ್ ಪಡೆಯಲು 15 ಕಿಮೀ ದೂರದ ಜೊಯಿಡಾಕ್ಕೆ ನಡೆದುಕೊಂಡು ಬರಬೇಕು. ಮನೆ ಮನೆಗಳಿಗೆ ರೇಷನ್ ತಲುಪಿಸಲು ನಮ್ಮ ಗ್ರಾಮ ಪಂಚಾಯಿತಿಯಿಂದ ವಾಹನ ಮಾಡಿಕೊಡುವುದಾಗಿ ತಿಳಿಸಿದ್ದರೂ ರೇಶನ್ ಅಂಗಡಿಯವರು ಮತ್ತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸುನಂದಾ ಹೆಗಡೆ ಗಂಗೋಡಾ ಗ್ರಾಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts