More

    ರೇವೂರ ವಠಾರದಲ್ಲಿ ಶಾಲೆ ಆರಂಭಿಸಿದ ಶಿಕ್ಷಕಿಯರು

    ದೇವಲಗಾಣಗಾಪುರ: ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಕೋವಿಡ್- 19ರ ದುಷ್ಪರಿಣಾಮದಿಂದ ಶಿಕ್ಷಣ ಕ್ಷೇತ್ರಕ್ಕೆ ಆಘಾತವಾಗಿದ್ದು, ಮಕ್ಕಳ ಶಿಕ್ಷಣದ ಚಿಂತೆ ಎಲ್ಲರನ್ನು ಕಾಡುತ್ತಿದೆ. ಇದನ್ನು ಅರಿತು ರೇವೂರ (ಬಿ) ಗ್ರಾಮದ ಮೂರು ಶಿಕ್ಷಕಿಯರು ಸ್ವಯಂ ಪ್ರೇರಣೆಯಿಂದ ಮಕ್ಕಳ ವಠಾರಕ್ಕೆ ತೆರಳಿ ಅಲ್ಲೆ ಇರುವ ಮಕ್ಕಳಿಗೆ ಶಿಸ್ತುಬದ್ಧವಾಗಿ ಪಾಠ ಪ್ರಾರಂಭಿಸಿ ಪಾಲಕರ ಪ್ರೀತಿಗೆ ಪಾತ್ರರಾಗಿದ್ದಾರೆ.
    ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯರಾದ ಶೋಭಾ ಪಾಟೀಲ್, ಚಂದಮ್ಮ ಪಾಟೀಲ್ ಹಾಗೂ ರೇವೂರ (ಕೆ) ಶಿಕ್ಷಕಿ ಚನ್ನಮ್ಮ ಪಟ್ಟದಕಲ್ಲು ಶಿಕ್ಷಕಿಯರೇ ತಲಾ 10 ವಿದ್ಯಾರ್ಥಿಗಳಿಗೆ ಮಾಸ್ಕ್​ ಹಾಕಿಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಪಾಡಿ ವಠಾರದಲ್ಲೆ ಪಾಠ ಆರಂಭಿಸಿದ್ದಾರೆ.
    ರೇವೂರ ಸಿಆರ್ಪಿ ವಿಶ್ವನಾಥ ಗುಣಾರಿ ಮಾರ್ಗದರ್ಶನದಲ್ಲಿ ಹೊಸ ಆಲೋಚನೆ ಮಾಡಿ, ಮಕ್ಕಳಿಗೆ ಪಾಠ ಪ್ರಾರಂಭಿಸಿರುವುದು ಮಕ್ಕಳಿಗೂ ಸಂತಸ ಮೂಡಿಸಿದೆ. ಶಿಕ್ಷಕಿಯರೇ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ನಮ್ಮ ವಠಾರಕ್ಕೆ ಆಗಮಿಸಿ ಇಲ್ಲಿರುವ ಮಕ್ಕಳಿಗೆ ಶೈಕ್ಷಣಿಕ ಮಾರ್ಗದತ್ತ ಕರೆದುಕೊಂಡು ಹೋಗುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ಮಾದರಿಯ ಕೆಲಸ ಎಂದು ಪಾಲಕರಾದ ಮಲ್ಲಿನಾಥ, ಮಲ್ಲಿಕಾರ್ಜುನ ಸಂತಸ ವ್ಯಕ್ತಪಡಿಸಿದ್ದಾರೆ.
    ರೇವೂರ ಗ್ರಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಅವರು ಮಂಗಳವಾರ ಭೇಟಿ ನೀಡಿ ಶಿಕ್ಷಕಿಯರನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು. ಸಮನ್ವಯಾಧಿಕಾರಿ ಸುಧಾಕರ ನಾಯಕ, ಬಿಆರ್​ಪಿಗಳಾದ ಲಕ್ಷ್ಮೀಕಾಂತ ಪಾಟೀಲ್, ವಿಶ್ವನಾಥ ಗುಣಾರಿ, ಜಗನ್ನಾಥ ಉಟಗಿ, ಸಂತೋಷಕುಮಾರ ಬಿರಾದಾರ, ಚನ್ನಯ್ಯಸ್ವಾಮಿ ಉಪಸ್ಥಿತರಿದ್ದರು.

    ರೇವೂರ (ಬಿ) ಗ್ರಾಮ ದೊಡ್ಡದಿದೆ. ಈ ಗ್ರಾಮದಲ್ಲಿ ಶಿಕ್ಷಕಿಯರು ಸ್ವಯಂ ಪ್ರೇರಣೆಯಿಂದ ವಠಾರದತ್ತ ಶಾಲೆ ಆರಂಭಿಸಿರುವುದು ಸಂತಸ ತಂದಿದೆ. ಈ ಪಾಠಗಳಿಂದ ಮಕ್ಕಳಲ್ಲಿ ಹೊಸ ಉತ್ಸಾಹ ಉಂಟಾಗಿರುವುದು ಕಂಡು ಬಂದಿತು. ಎಒಪಿ ನಿಯಮದಡಿ ಪಾಠ ಮಾಡುತ್ತಿರುವುದು ಶಿಕ್ಷಕರ ಗೌರವ ಹೆಚ್ಚಿಸಿದೆ.
    ಚಿತ್ರಶೇಖರ ದೇಗಲಮಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಫಜಲಪುರ

    ಶಿಕ್ಷಕಿಯರ ಈ ಕಾರ್ಯ ಶ್ಲಾಘನೀಯ ಅವರ ಶ್ರಮ ಸಾರ್ಥಕವಾಗಲಿ. ಇದು ಇತರರಿಗೂ ಮಾದರಿಯಾಗಲಿ.
    ಸುಧಾಕರ ನಾಯಕ
    ಬಿಆರ್​ಸಿ ಸಮನ್ವಯಾಧಿಕಾರಿ
    ಅಫಜಲಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts