More

    ರೂ. 28 ಲಕ್ಷ ನೀರಿನಲ್ಲಿ ಹೋಮ

    ಕಾರವಾರ: ಮೂರು ದಶಕಗಳ ಹಿಂದೆಯೇ ಲಕ್ಷಾಂತರ ಖರ್ಚು ಮಾಡಿ ಕಾಮಗಾರಿ ಮಾಡಲಾಗಿದೆ. ಆದರೆ, ಇದುವರೆಗೂ ಹನಿ ನೀರೂ ಜಮೀನಿಗೆ ಹರಿದಿಲ್ಲ. ಆದರೂ ಇಲಾಖೆ ನಿರ್ವಹಣೆ ಬಿಟ್ಟಿಲ್ಲ.!!

    ಇದು ಜೊಯಿಡಾ ತಾಲೂಕಿನ ಅಣಶಿ ಗ್ರಾಪಂ ವ್ಯಾಪ್ತಿಯ ಬಾರಾಡಿ ಏತ ನೀರಾವರಿ ಯೋಜನೆಯ ಕರ್ಮಕಾಂಡ.

    ಪ್ರಭಾಕರ ರಾಣೆ ಅವರು ಕಾರವಾರ – ಜೊಯಿಡಾ ಕ್ಷೇತ್ರದ ಶಾಸಕರಾಗಿದ್ದಾಗ ಸುಮಾರು 28 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಾಮಗಾರಿ ಪ್ರಾರಂಭಿಸಲಾಯಿತು ಎಂಬುದು ಗ್ರಾಮಸ್ಥರು ನೀಡುವ ಮಾಹಿತಿ. ಬಾರಾಡಿ ಪಕ್ಕದ ಹಳ್ಳದಿಂದ ನೀರೆತ್ತಿ ಅದನ್ನು ಸುಮಾರು 4 ಕಿಮೀ ಮೂಲಕ ಕಾಲುವೆಯಲ್ಲಿ ಹರಿಸಿ ಬಾರಾಡಿ ಹಾಗೂ ಬಾಡಪೋಲಿಯ 30ಕ್ಕೂ ಹೆಚ್ಚು ರೈತರ ಸುಮಾರು 50 ಎಕರೆಯಷ್ಟು ಗದ್ದೆಗೆ ನೀರು ಹರಿಸುವ ಯೋಜನೆ ಇದಾಗಿದೆ.

    ಬಾರಾಡಿಯ ಕಾಡಿನಲ್ಲಿ ಮರ ಕಡಿದು ರಸ್ತೆ ಮಾಡಲಾಗಿದೆ. ವಿದ್ಯುತ್ ಕಂಬ ನಿಲ್ಲಿಸಿ ತಂತಿ ಎಳೆಯಲಾಗಿದೆ. ಕಾಲುವೆ ತೆಗೆಯಲಾಗಿದೆ. ಕೆಲವೆಡೆ ಪೈಪ್ ಅಳವಡಿಸಲಾಗಿದೆ. ನದಿ ಸಮೀಪ ಪಂಪ್ ಅಳವಡಿಸಲಾಗಿದೆ. ಆದರೆ, ಎಲ್ಲವೂ ಪಾಳು ಬಿದ್ದು ಹೋಗಿದೆ.

    ಆದರೂ ಯೋಜನೆ ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಒಂದೆರಡು ಬಾರಿ ರಿಪೇರಿಯನ್ನೂ ಮಾಡಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ಯೋಜನೆ ಏಕೆ ಸಮರ್ಪಕವಾಗಿಲ್ಲ ಎಂಬುದರ ಬಗ್ಗೆ ಸಣ್ಣ ನೀರಾವರಿ ಇಲಾಖೆ ಹಳಿಯಾಳದ ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಮುಂದಿನ ಬಾರಿ ಅದಕ್ಕೆ ಹಣ ಹಾಕಿ ರಿಪೇರಿ ಮಾಡುತ್ತೇವೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ.

    ನೀರಿನ ಕೊರತೆ: ಗ್ರಾಮದಲ್ಲಿ ಮಳೆಗಾಲದಲ್ಲಿ ನೀರಿಗೆ ಸಮಸ್ಯೆ ಇಲ್ಲ. ಆದರೆ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಗದ್ದೆಗಳು ಒಣಗುತ್ತವೆ. ಮಳೆ ನೀರಿನಿಂದ ವರ್ಷದಲ್ಲಿ ಒಂದು ಬೆಳೆ ಮಾತ್ರ ಸಾಧ್ಯ. ಏತ ನೀರಾವರಿ ಯೋಜನೆ ಜಾರಿಯಾದರೆ, ಕಾರು ಗದ್ದೆ ಮಾಡಬಹುದು ಎಂಬುದು ಗ್ರಾಮಸ್ಥರ ಆಸೆ. ಬೇಸಿಗೆಯಲ್ಲಿ ಬಾರಾಡಿ ಗ್ರಾಮದಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗುತ್ತದೆ. ಒಂದು ಬಾವಿಯಿಂದ 25 ಮನೆಯ ಜನರು ಪಡೆಯಬೇಕಿದೆ. ಏತ ನೀರಾವರಿ ಯೋಜನೆ ಜಾರಿಯಾದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ನೀಗಬಹುದು ಎಂಬುದು ಇಲ್ಲಿನ ಜನರ ನಿರೀಕ್ಷೆಯಾಗಿದೆ.

    ತುಂಬ ವರ್ಷದ ಹಿಂದೆ ಆದ ಯೋಜನೆ. ಜನರಿಗೆ ನೀರು ದೊರೆಯದೇ ಇರುವ ಕುರಿತು ಇಲಾಖೆ ಗಮನಕ್ಕಿದೆ. ಈ ವರ್ಷ ಅದನ್ನು ರಿಪೇರಿ ಮಾಡಿಸಿ ಜನರಿಗೆ ನೀರು ಒದಗಿಸುವ ಕಾರ್ಯ ಮಾಡಲಾಗುವುದು. | ಕೆ.ಎಲ್.ಕಟ್ಟಿಮನಿ ಸಣ್ಣ ನೀರಾವರಿ ಇಲಾಖೆ ಎಇಇ, ಹಳಿಯಾಳ ಉಪ ವಿಭಾಗ

    ನಾನು ಚಿಕ್ಕವನಿದ್ದಾಗಲೇ ಇಲ್ಲಿ ಕಾಮಗಾರಿ ಮಾಡಿ ಹೋದರು. ಆದರೆ, ಒಂದು ದಿನವೂ ನೀರು ಹರಿದಿಲ್ಲ. ಇದನ್ನು ರಿಪೇರಿ ಮಾಡಿ ಗದ್ದೆಗಳಿಗೆ ನೀರು ಕೊಡಿಸುವ ವ್ಯವಸ್ಥೆ ಮಾಡಬೇಕು. | ರಘುನಾಥ ವೇಳೀಪ ಬಾರಾಳಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts