More

    ರಾಸಾಯನಿಕ ತ್ಯಾಜ್ಯದಿಂದ ಮಾಣಿಕನಗರ ಹಳ್ಳದ ನೀರು ವಿಷ

    ಸಂಜೀವಕುಮಾರ ಜುನ್ನಾ ಹುಮನಾಬಾದ್: ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೇಶದ ಕೆಲವು ಕಾರ್ಖಾನೆಗಳು ರಾತ್ರಿ ಸಮಯದಲ್ಲಿ ವಿಷಪೂರಿತ ರಾಸಾಯನಿಕ ತ್ಯಾಜ್ಯವನ್ನು ಹೊರಗೆ ಹರಿಬಿಡುತ್ತಿದ್ದರಿಂದ ಮಾಣಿಕನಗರದ ಶ್ರೀ ಮಾಣಿಕಪ್ರಭು ದೇವಸ್ಥಾನ ಪಕ್ಕದ ಹಳ್ಳದ ನೀರು ಸಂಪೂರ್ಣ ಕಪ್ಪಾಗಿದೆ. ಕೆಮಿಕಲ್ ತ್ಯಾಜ್ಯದ ಕಾರಣದಿಂದ ಹಳ್ಳದ ನೀರು ವಿಷಪೂರಿತವಾಗಿದ್ದು, ಜೀವ ಸಂಕುಲಕ್ಕೆ ಕುತ್ತು ತಂದಿದೆ.

    ಕೆಲ ರಾಸಾಯನಿಕ ಕಾರ್ಖಾನೆಯವರು ಸರ್ಕಾರದ ಪರಿಸರ ಸಂರಕ್ಷಣಾ ನಿಯಮ ಉಲ್ಲಂಘಿಸಿ ರಾತ್ರಿಯಲ್ಲಿ ಹಳ್ಳಕ್ಕೆ ತ್ಯಾಜ್ಯ ಬಿಡುವ ಕೆಲಸದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಪರಿಸರ ಹದಗೆಡುವ ಮೂಲಕ ಭಕ್ತರಿಗೆ ಹಾಗೂ ಗ್ರಾಮಸ್ಥರಿಗೂ ರೋಗಗಳ ಭೀತಿ ಆವರಿಸಿದೆ. ಇದು ರಾಸಾಯನಿಕ ಕಾರ್ಖಾನೆಗಳು ಹಾಗೂ ಜಿಲ್ಲಾಡಳಿತ ವಿರುದ್ಧ ಸ್ಥಳೀಯರು ಆಕ್ರೋಶಗೊಳ್ಳುವಂತೆ ಮಾಡಿದೆ.

    ಒಂದೆರಡು ದಿವಸಗಳ ಹಿಂದೆ ಹಳ್ಳಕ್ಕೆ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ತ್ಯಾಜ್ಯ ಹರಿದುಬಂದಿದೆ. ಹೀಗಾಗಿ ಹಳ್ಳದಲ್ಲಿನ ನೀರು ಸಂಪೂರ್ಣ ಕುಲಷಿತಗೊಂಡು ಕಪ್ಪುಬಣ್ಣಕ್ಕೆ ತಿರುಗಿದೆ. ಇದರಿಂದ ಮೀನು ಸೇರಿ ಜಲಚರಗಳ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ಹಳ್ಳದ ನೀರು ಹರಿಯುತ್ತಿರುವುದರಿಂದ ಯಾರಿಗೂ ಗೊತ್ತಾಗುವುದಿಲ್ಲ ಎಂಬ ಭಾವನೆಯಿಂದ ಕೆಲ ಕಾರ್ಖಾನೆಯವರು ರಾಸಾಯನಿಕ ತ್ಯಾಜ್ಯ ಹರಿಬಿಡುತ್ತಿದ್ದಾರೆ. ಇದು ನಿರಂತರ ನಡೆಯುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡುತ್ತಾರೆ.

    ರಾಸಾಯನಿಕ ತ್ಯಾಜ್ಯ ಹಳ್ಳಕ್ಕೆ ಸೇರುತ್ತಿದ್ದರಿಂದ ಕಳೆದ 5-6 ವರ್ಷಗಳಿಂದ ರೈತರು ದನ-ಕರುಗಳನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಕೊಳವೆಬಾವಿ ಹಾಗೂ ತೋಟದ ಬಾವಿ ನೀರಿನಲ್ಲಿಯೂ ರಾಸಾಯನಿಕ ಮಿಶ್ರಿತಗೊಂಡಿರುವುದರಿಂದ ಮಾಣಿಕನಗರದ ಜತೆ ಗಡವಂತಿ, ಮೋಳಕೇರಾ, ಬಸಂತಪುರ ಇತರ ಗ್ರಾಮಗಳ ಜನರು ಚರ್ಮ ಸೇರಿ ಇತರ ರೋಗಕ್ಕೂ ತುತ್ತಾಗಿದ್ದಾರೆ. ಸಮಸ್ಯೆ ಹಾಗೂ ಸಂಬಂಧಿತರ ನಿರ್ಲಕ್ಷೃದ ವಿರುದ್ಧ ಸ್ಥಳೀಯರು ಹೋರಾಟ ನಡೆಸಿದರೂ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಹಾಗೂ ಕಾಖರ್ಾನೆಯವರು ಜನರ ಜೀವದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಇನ್ನಾದರೂ ಕಠಿಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

    ಕಾರ್ಖಾನೆ ಎದುರು ಮಂಡಿಯೂರಿದ ಆಡಳಿತ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೂ ಮತ್ತು ಇತ್ತೀಚೆಗೆ ಕೆಡಿಪಿ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ್ ರಾಸಾಯನಿಕ ಕಾಖರ್ಾನೆಗಳಿಂದ ಉಂಟಾಗುತ್ತಿರುವ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ವಿಷಯ ಗಂಭೀರ ಪರಿಗಣಿಸದಿದ್ದರೆ ಜನ ಹಿತದಿಂದ ಹೋರಾಟಕ್ಕಿಳಿಯುವ ಎಚ್ಚರಿಕೆ ನೀಡಿದ್ದರು. ಮೂರು ವರ್ಷ ಹಿಂದೆ ಶ್ರೀ ಮಾಣಿಕಪ್ರಭು ಸಂಸ್ಥಾನದ ಪ್ರಭುಗಳ ನೇತೃತ್ವದಲ್ಲಿ ಸುತ್ತಮುತ್ತಲ್ಲಿನ ಗ್ರಾಮಸ್ಥರು ಡಿಸಿ ಕಚೇರಿ ಎದುರು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಸಹ ನಡೆಸಿದ್ದರು. ಬಿಎಸ್ಎಸ್ಕೆ ಅಧ್ಯಕ್ಷ ಸುಭಾಷ ಕಲ್ಲೂರ ನೇತೃತ್ವದಲ್ಲಿಯೂ ಹೋರಾಟ ನಡೆಸಲಾಗಿತ್ತು. ಆದರೆ ಇಲ್ಲಿಯವರೆಗೂ ಕಾಖರ್ಾನೆಯವರು ಕುಲಷಿತ ನೀರು ಬಿಡುವುದು ಮಾತ್ರ ನಿಲ್ಲಿಸಿಲ್ಲ. ಜಿಲ್ಲಾಡಳಿತ ಕಾರ್ಖಾನೆಯವರ ಎದುರು ಮಂಡಿಯೂರಿದಂತೆ ಕಾಣುತ್ತಿದೆ ಎಂಬ ಅನುಮಾನ ಸ್ಥಳೀಯರದ್ದಾಗಿದೆ.

    ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಯವರು ವಿಷಪೂರಿತ ರಾಸಾಯನಿಕ ಹಳ್ಳಕ್ಕೆ ಹರಿಬಿಟ್ಟಿರುವುದು ಪರಿಸರ ಮಾಲಿನ್ಯದ ಜತೆಗೆ ಜನ-ಜಾನುವಾರುಗಲ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ. ಕುಡಿಯುವ ನೀರು ಸಂಪೂರ್ಣ ಕುಲಷಿತಗೊಂಡಿದೆ. ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸಮಗ್ರ ಚಿತ್ರಣಗಳೊಂದಿಗೆ ಟ್ವೀಟ್ ಮಾಡಿ ಗಮನ ಸೆಳೆದಿರುವೆ.
    | ಶ್ರೀ ಆನಂದರಾಜ ಪ್ರಭು, ಶ್ರೀ ಮಾಣಿಕಪ್ರಭು ಸಂಸ್ಥಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts