More

    ರಾಷ್ಟ್ರೀಯ ಚಿಂತನೆ, ದೇಶಭಕ್ತಿ ಸೃಜಿಸಲಿ: ಬಿ.ಎಸ್.ಯಡಿಯೂರಪ್ಪ ಅಭಿಮತ

    ಶಿಕಾರಿಪುರ: ಭಾರತಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವಸಂತಗಳು ತುಂಬಿದ ಶುಭ ಸಂದರ್ಭ ಇದು. ನಮ್ಮಲ್ಲಿ ರಾಷ್ಟ್ರೀಯ ಚಿಂತನೆಗಳು, ದೇಶಭಕ್ತಿ ಸೃಜಿಸಬೇಕು. ಸೌಹಾರ್ದತೆ ನಮ್ಮ ಮೊದಲ ಆದ್ಯತೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳು. ಮಕ್ಕಳ ಹೃದಯದಲ್ಲಿ ನಾವು ದೇಶಭಕ್ತಿ, ಸಹಬಾಳ್ವೆ, ಸದ್ವಿಚಾರಗಳನ್ನು ಬಿತ್ತಬೇಕು. ಆ ಮಕ್ಕಳ ಪ್ರತಿ ಹೆಜ್ಜೆಗಳಲ್ಲಿ ನಮ್ಮ ದೇಶದ ಬಗ್ಗೆ ಅಭಿಮಾನ ಇರಬೇಕು. ಯುವಕರು ನಾಡು ಕಟ್ಟುವ ಕಲಿಗಳು, ಯುವಶಕ್ತಿಯ ಸದ್ಬಳಕೆಯಾಗಬೇಕು. ಸಹನೆ ಮತ್ತು ನೆಮ್ಮದಿಯ ಬದುಕಿನತ್ತ ನಾವು ಸಾಗಬೇಕು ಎಂದರು.
    ಸಹಸ್ರ ಸಹಸ್ರ ಸ್ವಾತಂತ್ರ್ಯ ಸೇನಾನಿಗಳ ಪ್ರಾಣ ಸಮರ್ಪಣೆಯ ಫಲವಾಗಿ ನಾವಿಂದು ಸ್ವತಂತ್ರ ಭಾರತದಲ್ಲಿ ಇದ್ದೇವೆ. ಆ ಹುತಾತ್ಮರನ್ನು, ಸ್ವಾತಂತ್ರ್ಯ ಸೇನಾನಿಗಳನ್ನು ನಾವು ಇಂದು ಸ್ಮರಣೆ ಮಾಡಕೊಳ್ಳಬೇಕು. ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ, ಹುತಾತ್ಮರು, ಸೇನಾನಿಗಳು, ಯೋಧರು ನಮಗೆ ಸದಾ ಪ್ರಾತಃ ಸ್ಮರಣೀಯರಾಗಿದ್ದಾರೆ. ಇಂದು ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮ ದಿನ. ಆದ್ದರಿಂದ ಎಲ್ಲರಿಗೂ ರಾಯಣ್ಣ ನ ಜನ್ಮದಿನದ ಶುಭಾಶಯಗಳು ಎಂದು ಹೇಳಿದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು. ಶಿಕಾರಿಪುರ ತಾಲೂಕನ್ನು ಮಾದರಿ ತಾಲೂಕನ್ನಾಗಿ ಮಾಡಬೇಕು ಎಂಬ ತಂದೆಯವರ ಕನಸು ನನಸಾಗುತ್ತಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭವಾಗಿದೆ. ಡಿಸೆಂಬರ್‌ನಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾದರೆ ಶಿಕಾರಿಪುರ ತಾಲೂಕು ಅಕ್ಷರಶಃ ಒಂದು ಪ್ರವಾಸಿ ತಾಣವಾಗಲಿದೆ. ಪ್ರತಿದಿನ ಪ್ರವಾಸಿಗರು ತಾಲೂಕಿಗೆ ಆಗಮಿಸಲಿದ್ದಾರೆ. ಶಿಕಾರಿಪುರ ಒಂದು ಪ್ರವಾಸಿ ತಾಣವಾಗಿ ಜನಮನ ಸೆಳೆಯಲಿದೆ ಎಂದರು.
    ಶರಣರ ನಾಡಾದ ಶಿಕಾರಿಪುರ ತಾಲೂಕಿನಲ್ಲಿ ಶರಣರ ಜನ್ಮಸ್ಥಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 60 ಕೋಟಿ ರೂಪಾಯಿ ವೆಚ್ಚದಲ್ಲಿ ಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುಗಣಿ ದೆಹಲಿಯ ಅಕ್ಷರಧಾಮದ ಮಾದರಿಯಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ. ಇಲ್ಲಿ ಶರಣರ ಪರಿಚಯಿಸುವ ಮಾಹಿತಿ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದ್ದು ಇದು ತಾಲೂಕಿನ ಪ್ರಮುಖ ಪ್ರವಾಸಿತಾಣವಾಗಲಿದೆ ಎಂದರು.
    ತಹಸೀಲ್ದಾರ್ ಎಂ.ಪಿ.ಕವಿರಾಜ್ ಧ್ವಜಾರೋಹಣ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts