More

    ರಾಷ್ಟ್ರೀಯ ಪಕ್ಷಗಳಿಗೆ ಗ್ರಾಪಂ ಚುನಾವಣೆ ಪ್ರತಿಷ್ಠೆ

    ಕಾರವಾರ: ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯ ಪಕ್ಷಗಳ ಚಿನ್ಹೆಯಡಿ ನಡೆಯದಿದ್ದರೂ ಪಕ್ಷಗಳು ಈ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ, ಭಾರಿ ಸಿದ್ಧತೆ ನಡೆಸಿವೆ.

    ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಗ್ರಾಪಂ ಚುನಾವಣೆಗೆ ಸಿದ್ಧತೆ ನಡೆಸಿವೆ. ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು, ಮುಖಂಡರು ಜಿಲ್ಲೆಗೆ ಬಂದು ಸಮಾವೇಶ ನಡೆಸಿದ್ದಾರೆ. ಬೂತ್ ಮಟ್ಟದಲ್ಲಿ ತಮ್ಮ ಬೆಂಬಲಿಗರನ್ನು ಸ್ಪರ್ಧಿಸುವಂತೆ ಮಾಡಿ ಹೆಚ್ಚಿನ ಗ್ರಾಪಂಗಳು ವಶ ಮಾಡಿಕೊಳ್ಳಿ ಎಂದು ಮುಖಂಡರಿಗೆ ಆದೇಶ ಹೊರಡಿಸಿದ್ದಾರೆ. ಅಭ್ಯರ್ಥಿ ಆಯ್ಕೆ, ಪ್ರಚಾರ, ಹಣಕಾಸು ನೆರವು, ಈ ನಿಟ್ಟಿನಲ್ಲಿ ಪಕ್ಷಗಳ ಆಂತರಿಕ ವಿಭಾಗದಲ್ಲಿ ಕಾರ್ಯತಂತ್ರ ರೂಪುಗೊಳ್ಳುತ್ತಿದೆ.

    ಪ್ರತಿಷ್ಠೆಯ ಪ್ರಶ್ನೆ: ತಳಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಲು, ಪಕ್ಷದ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಗ್ರಾಪಂ ಚುನಾವಣೆ ಉತ್ತಮ ಅವಕಾಶ. ಎಂಪಿ ಚುನಾವಣೆಯಿಂದ ಹಿಡಿದು ಎಪಿಎಂಸಿ ಚುನಾವಣೆವರೆಗೂ ಜಿಲ್ಲೆಯಲ್ಲಿ ಕಮಲವನ್ನು ಅರಳಿಸಿರುವ ಕೇಸರಿ ನಾಯಕರಿಗೆ ಗ್ರಾಪಂನಲ್ಲೂ ತಮ್ಮದೇ ಪ್ರಾಬಲ್ಯ ಎಂದು ಹೇಳಿಕೊಳ್ಳುವ ಉತ್ಸಾಹವಿದೆ. ಅಲ್ಲದೆ, ಕೇಂದ್ರ ರಾಜ್ಯ, ಜಿಲ್ಲೆಯಲ್ಲಿ ಬಿಜೆಪಿಯದ್ದೇ ಆಡಳಿತವಾಗಿರುವುದರಿಂದ ಪಕ್ಷಕ್ಕೆ ಇದೊಂದು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.

    ಕಾಂಗ್ರೆಸ್ ಭದ್ರ ಕೋಟೆ ಎಂದು ಕರೆಸಿಕೊಂಡಿದ್ದ ಉತ್ತರ ಕನ್ನಡದಲ್ಲಿ ಹಂತ ಹಂತವಾಗಿ ಕೈ ಪ್ರಾಬಲ್ಯ ಕರಗಿದೆ. ಜಿಲ್ಲೆಯಲ್ಲಿ ಮುಳುಗುತ್ತಿರುವ ಕಾಂಗ್ರೆಸ್​ಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಆಶ್ರಯವಾಗಬಲ್ಲವು. ಇದರಿಂದ ಕಾಂಗ್ರೆಸ್ ಈ ಗ್ರಾಪಂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವುದು ಅನಿವಾರ್ಯವಾಗಿದೆ.

    ಮುಂದೆ ಅನುಕೂಲ: 2021 ರಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಮತ್ತೆರಡು ವರ್ಷದಲ್ಲೇ ಎಂಎಲ್​ಎ ಚುನಾವಣೆ ಕೂಡ ಇದೆ. ಇದರಿಂದ ನಾಯಕರು ತಮ್ಮ ಬೆಂಬಲಿಗರನ್ನು ಘಟ್ಟಿ ಮಾಡಿಕೊಳ್ಳುವುದು ಅನಿವಾರ್ಯ. ಈಗ ತಳ ಮಟ್ಟದ ರಾಜಕಾರಣವನ್ನು ಬೆಂಬಲಿಸಿದಲ್ಲಿ ಮುಂದೆ ತಮಗೆ ಗ್ರಾಮೀಣ ಭಾಗದಲ್ಲಿ ಅನುಕೂಲವಾಗಲಿದೆ ಎಂಬುದು ರಾಜಕಾರಣಿಗಳೆಲ್ಲರ ಮುಂದಾಲೋಚನೆ.

    ಗುಂಪಿಗಾಗಿ ಹುಡುಕಾಟ
    ಗ್ರಾಪಂ ಚುನಾವಣೆಯಲ್ಲಿ ಒಂದೇ ವಾರ್ಡ್ ನಲ್ಲಿ ವಿಭಿನ್ನ ಮೀಸಲಾತಿಯ ಎರಡು ಮೂರು ಸ್ಥಾನಗಳಿರುತ್ತವೆ. ಎರಡು ಮೂರು ಜನರ ಗುಂಪು ಮಾಡಿಕೊಂಡರೆ ಪ್ರಚಾರ ಸುಲಭ, ಖರ್ಚು ಕಡಿಮೆಯಾಗುತ್ತವೆ. ಇನ್ನು ಎರಡು ಮೂರು ಜನರ ಗುಂಪನ್ನು ಪಕ್ಷಗಳೂ ಬೆಂಬಲಿಸುವುದು ಜಾಸ್ತಿ ಇದರಿಂದ ಅಭ್ಯರ್ಥಿಗಳು ಸ್ಪರ್ಧಾಕಾಂಕ್ಷಿಗಳ ಗುಂಪು ಮಾಡಿಕೊಳ್ಳಲು ಹುಡುಕಾಟ ನಡೆಸಿದ್ದಾರೆ.

    ಗ್ರಾಪಂ ಚುನಾವಣೆ ಹೆಸರಿಗಷ್ಟೇ ಪಕ್ಷದ ಚಿನ್ಹೆ ರಹಿತವಾಗಿವೆ. ಅತಿ ಹೆಚ್ಚು ರಾಜಕೀಯ ಅಲ್ಲೇ ನಡೆಯುತ್ತದೆ. ಇದರಿಂದ ಗ್ರಾಪಂ ಚುನಾವಣೆಗೂ ಪಕ್ಷ ಅನ್ವಯಿಸುವುದು ಉತ್ತಮವಿತ್ತು. ಹಾಗಿದ್ದಲ್ಲಿಪಕ್ಷಗಳಿಗೂ ಅಭ್ಯರ್ಥಿಗಳಿಗೂ ಒಂದು ಹಿಡಿತ ಇರುತ್ತದೆ.
    | ರಾಜೇಶ ನಾಯಕ ಬಿಜೆಪಿ ಮುಖಂಡ

    ಸಂದಿಗ್ಧ ಸ್ಥಿತಿ: ಗ್ರಾಪಂನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಯಾವುದೇ ಪಕ್ಷದ ಅಧಿಕೃತ ಒಪ್ಪಿಗೆ ಪತ್ರ ಅಥವಾ ‘ಬಿ’ಫಾಮ್ರ್ ಬೇಕಿಲ್ಲ. ಚುನಾವಣೆ ಗೆದ್ದ ಮೇಲೂ ಆತ ಯಾವ ಪಕ್ಷಕ್ಕೆ ಬೇಕಾದರೂ ಬೆಂಬಲ ನೀಡಲು ಅಡ್ಡಿಯಿಲ್ಲ. ಈತ ತಮ್ಮ ಬೆಂಬಲಿತ ವ್ಯಕ್ತಿ ಎಂದು ಪಕ್ಷಗಳು ಹೇಳಿಕೊಳ್ಳಬಹುದೇ ಹೊರತು ಆತನನ್ನು ಕಟ್ಟಿ ಹಾಕಲು ಯಾವುದೇ ಕಾಯ್ದೆಯಿಲ್ಲ. ಹತ್ತು ಕೊಟ್ಟರೆ ಈ ಕಡೆ, 20 ಕೊಟ್ಟರೆ ಆ ಕಡೆ ಎಂಬ ಹಲವು ಜನರಿದ್ದಾರೆ. ಚುನಾವಣೆ ಕಾಸಿಗಾಗಿ ಒಂದು ಪಕ್ಷದ ಬೆಂಬಲ ಬೇಡಿ, ಗೆದ್ದ ನಂತರ ಬೇರೆಡೆ ಜಿಗಿಯುವ ಸಾಕಷ್ಟು ಉದಾಹರಣೆಗಳಿವೆ. ಇದರಿಂದ ಪಕ್ಷಗಳ ವರಿಷ್ಠರಿಗೆ ಈ ಆಟ ನಿಭಾಯಿಸುವುದು ದೊಡ್ಡ ಸವಾಲು ಹಾಗೂ ಸಂದಿಗ್ಧ ಸ್ಥಿತಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts