More

    ರಾಮದುರ್ಗಕ್ಕೆ ಆನೆಕಾಲು ರೋಗ ಬಾಧೆ

    ಬೆಳಗಾವಿ: ಇನ್ನೇನು ಕರೊನಾ ಹಾವಳಿ ತಗ್ಗಿತು ಎಂದು ಜನರು ನಿಟ್ಟುಸಿರು ಬಿಡುವ ಹೊತ್ತಿನಲ್ಲೇ, ಜಿಲ್ಲೆಗೆ ಆನೆಕಾಲು ರೋಗ ಬಾಧಿಸುತ್ತಿದೆ. ಜಿಲ್ಲೆಯಲ್ಲಿ ಹೊಸದಾಗಿ 21 ಪ್ರಕರಣ ಬೆಳಕಿಗೆ ಬಂದಿದ್ದು, ಎಲ್ಲ ರೋಗಿಗಳೂ ರಾಮದುರ್ಗ ತಾಲೂಕಿನವರೇ ಆಗಿದ್ದಾರೆ.

    ಜಿಲ್ಲೆಯಲ್ಲಿ ಈ ಮೊದಲು ಒಟ್ಟು 52 ಜನರು ಆನೆಕಾಲು ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಈಗ 21 ಹೊಸ ಪ್ರಕರಣ ಪತ್ತೆಯಾಗಿದ್ದು, ರೋಗಿಗಳನ್ನು ಪತ್ತೆ ಹಚ್ಚುವುದೇ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

    ಮುನ್ನೆಚ್ಚರಿಕೆ ಕ್ರಮ: ಉತ್ತರ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿಯೇ ಈ ರೋಗ ಹೆಚ್ಚು ಪತ್ತೆಯಾಗುತ್ತಿದೆ. ಬಾಗಲಕೋಟೆ, ಜಮಖಂಡಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಆನೆಕಾಲು ರೋಗಗಳು ಕಾಣಿಸಿಕೊಂಡಿವೆ. ಈ ಗಡಿ ಜಿಲ್ಲೆಗಳಿಗೆ ಹೋಗಿ ಬಂದಿರುವ ಬೆಳಗಾವಿ ಜಿಲ್ಲೆಯ ಜನರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದ್ದು, ಅಂತಹವರ ಮೇಲೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ವಹಿಸಿದೆ. ಕಾಲ ಕಾಲಕ್ಕೆ ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ರೋಗ ಶಮನಕ್ಕೆ ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.

    ರೋಗ ಲಕ್ಷಣ: ಸೊಳ್ಳೆ ಕಚ್ಚುವುದರಿಂದ ಆನೆಕಾಲು ರೋಗ ಬರುತ್ತದೆ. ಮೇಲಿಂದ ಮೇಲೆ ಜ್ವರ ಬರುವುದು ಈ ರೋಗದ ಪ್ರಮುಖ ಲಕ್ಷಣ. ಸೊಳ್ಳೆ ಕಚ್ಚಿದಾಗ ‘ಮೈಕ್ರೋಪೈಲೇರಿಯಾ’ ಎಂಬ ಕ್ರಿಮಿ ರಕ್ತಸೇರಿ, ಕಾಲುಗಳು ಬಾವು ಬರುತ್ತವೆ. ಕ್ರಿಮಿ ರಕ್ತ ಸೇರಿ 6 ತಿಂಗಳ ಬಳಿಕ ಈ ರೋಗ ಪತ್ತೆಯಾಗುತ್ತದೆ. ಇದರಿಂದ ರೋಗಿಗಳು ಬಹಳ ಯಾತನೆ ಅನುಭವಿಸುತ್ತಾರೆ. ನಡೆಯಲೂ ಆಗದಷ್ಟು ರೋಗವು ಬಾಧಿಸುತ್ತದೆ. ಅಂಗವಿಕಲತೆ ಉಂಟಾಗುವ ಸಾಧ್ಯತೆ ಹೆಚ್ಚು.

    ರಕ್ತ ತಪಾಸಣೆಗೆ ಮನವಿ

    ಹೊರ ರಾಜ್ಯಕ್ಕೆ ಯಾರು ಹೋಗಿ ಬರುತ್ತಿದ್ದಾರೆಯೋ ಅಂತಹವರು ರಕ್ತ ತಪಾಸಣೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ರೋಗ ನಿರ್ಮೂಲನೆಗೆ ಈಗಾಗಲೇ ಚಿಕ್ಕೋಡಿ, ರಾಯಬಾಗ, ಅಥಣಿ, ರಾಮದುರ್ಗದ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತಲೇಪನ ಪರೀಕ್ಷೆ ನಡೆಸಲಾಗುತ್ತಿದೆ. ಜ. 4ರಿಂದ ಜ. 6ರ ವರೆಗೆ ರಾಮದುರ್ಗ, ಖಾನಾಪುರ ತಾಲೂಕಿನ ಪಾರಿಶ್ವಾಡ ಹಾಗೂ ಚಿಕ್ಕೋಡಿಯಲ್ಲಿ ರಕ್ತಲೇಪನ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಪಾಲ್ಗೊಂಡು ಸಂಶಯ ನಿವಾರಿಸಿಕೊಳ್ಳುವಂತೆ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.

    ಬೆಳಗಾವಿ ಜಿಲ್ಲೆಯಲ್ಲಿ ಆನೆಕಾಲು ರೋಗ ಶಮನಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ರೋಗ ಕಾಣಿಸಿಕೊಂಡವರಿಗೆ ಮಾತ್ರೆ ಸೇರಿ ಅಗತ್ಯ ಔಷಧೋಪಚಾರ ಕೈಗೊಂಡಿದ್ದೇವೆ. ಹೊರ ರಾಜ್ಯಕ್ಕೆ ಹೋದವರು ಚಾಚೂ ತಪ್ಪದೆ ರಕ್ತ ತಪಾಸಣೆ ಮಾಡಿಕೊಂಡು ರೋಗ ಬಾರದಂತೆ ಜಾಗ್ರತೆ ವಹಿಸಬೇಕು. 2022ರ ಡಿಸೆಂಬರ್ ವೇಳೆಗೆ ಜಿಲ್ಲೆಯಲ್ಲಿ ಈ ರೋಗವನ್ನು ಸಂಪೂರ್ಣ ನಿವಾರಿಸುವುದಕ್ಕೆ ಕಾರ್ಯ ಪ್ರವೃತ್ತರಾಗಿದ್ದೇವೆ.
    | ಡಾ. ಎಂ.ಎಸ್. ಪಲ್ಲೇದ ಬೆಳಗಾವಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts