More

    ರಾಣೆಬೆನ್ನೂರಲ್ಲಿ ಸ್ವಯಂ ಲಾಕ್​ಡೌನ್ ಇಂದಿನಿಂದ

    ರಾಣೆಬೆನ್ನೂರ: ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ನಗರದಲ್ಲಿ ಜು. 8ರಿಂದ ಎಲ್ಲ ವ್ಯಾಪಾರಸ್ಥರು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ವ್ಯಾಪಾರ-ವಹಿವಾಟು ನಡೆಸಿ, ನಂತರ ಸ್ವಯಂ ಪ್ರೇರಣೆಯಿಂದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಸಹಕಾರ ನೀಡಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಮನವಿ ಮಾಡಿದರು.

    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಈಗಾಗಲೇ ವ್ಯಾಪಾರಸ್ಥರು, ಹೋಟೆಲ್​ಗಳ ಮಾಲೀಕರು ಹಾಗೂ ವಿವಿಧ ಸಂಘ-ಸಂಸ್ಥೆಯವರೊಂದಿಗೆ ಸಭೆ ಸೇರಿ ಮನವಿ ಮಾಡಲಾಗಿದೆ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಲಾಕ್​ಡೌನ್​ಗೆ ಬೆಂಬಲ ನೀಡಬೇಕು ಎಂದರು.

    ಮೆಕ್ಕೆಜೋಳ ಬೆಳೆಗಾರರು ಅರ್ಜಿ ಸಲ್ಲಿಸಿ: ಲಾಕ್​ಡೌನ್ ಅವಧಿಯಲ್ಲಿ ಮೆಕ್ಕೆಜೋಳ ಬೆಳೆದು ತೊಂದರೆಗೆ ಒಳಗಾದ ತಾಲೂಕಿನ 19,972 ರೈತರಿಗೆ ತಲಾ 5 ಸಾವಿರ ರೂ.ನಂತೆ ಪರಿಹಾರಧನ ನೀಡಲಾಗಿದೆ. ಇನ್ನೂ ಜಂಟಿ ಖಾತೆಯಲ್ಲಿ ಜಮೀನು ಹೊಂದಿರುವ 4024 ಹಾಗೂ ಎಫ್​ಐಡಿ ಇಲ್ಲದ 14012 ಫಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾಪಂನಲ್ಲಿ ಪ್ರಕಟಿಸಿದ್ದು, ಅಗತ್ಯ ದಾಖಲೆ ಸಲ್ಲಿಸಿದರೆ ಖಾತೆಗೆ ಹಣ ಜಮಾ ಆಗಲಿದೆ ಎಂದರು.

    ಮುಂಗಾರು ಬೆಳೆಯ ವಿಮೆ ತುಂಬಲು ಉಳ್ಳಾಗಡ್ಡಿ, ಮೆಣಸಿನಕಾಯಿ, ಸೂರ್ಯಕಾಂತಿ ಬೆಳೆಗಳಿಗೆ ಜು. 14ರವರೆಗೆ, ಹೆಸರು ಬೆಳೆಗೆ ಜು. 15ರವರೆಗೆ ಹಾಗೂ ಶೇಂಗಾ, ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗಳಿಗೆ ಜು. 31ರವರಗೆ ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಡಿ. 25ಕ್ಕೆ 24*7 ನೀರು: ನಗರದಲ್ಲಿ ಈಗಾಗಲೇ 24*7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಡಿಸೆಂಬರ್ 25ಕ್ಕೆ ಪೂರ್ಣಗೊಳ್ಳಲಿದೆ. ಅದೇ ದಿನ ನಗರದ ಎಲ್ಲ ಬಡಾವಣೆಗೆ ನೀರು ಸರಬರಾಜು ಮಾಡಲು ಚಾಲನೆ ನೀಡಲಾಗುವುದು ಎಂದರು.

    ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ: ಕರೊನಾ ಸೋಂಕು ದಿನೇ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ನೀಡುವ ದೃಷ್ಟಿಯಿಂದ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 75 ಬೆಡ್​ಗಳ ಕೋವಿಡ್-19 ಆಸ್ಪತ್ರೆ ಸಿದ್ಧಪಡಿಸಲು ಜು. 8ರಂದು ಚಾಲನೆ ನೀಡಲಾಗುವುದು. ಜತೆಗೆ ರೋಗಿಗಳ ಗಂಟಲ ದ್ರವ ಪರೀಕ್ಷೆಯನ್ನು ತಾಲೂಕು ಆಸ್ಪತ್ರೆಯಲ್ಲೇ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅರುಣಕುಮಾರ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts