More

    ರಾಜ್ಯಾದ್ಯಂತ 1000 ಜನೌಷಧ ಮಳಿಗೆ

    ಕೋಲಾರ: ಸಹಕಾರ ಮಹಾಮಂಡಳದಿಂದ ರಾಜ್ಯಾದ್ಯಂತ 1000 ಜನೌಷಧ ಮಳಿಗೆ ಸ್ಥಾಪಿಸಲು ನಿರ್ಧರಿಸಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮೊದಲ ಆದ್ಯತೆ ನೀಡುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

    ತಾಲೂಕಿನ ಅರಹಳ್ಳಿ ಸೊಸೈಟಿ ಆಶ್ರಯದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಿಂದ ಮಂಗಳವಾರ ಮಹಿಳಾ ಸಂಘಗಳಿಗೆ 3.42 ಕೋಟಿ ರೂ. ಸಾಲ ವಿತರಿಸಿ ಮಾತನಾಡಿ, ಅವಿಭಜಿತ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಸೊಸೈಟಿಗಳು ಬಲಿಷ್ಠವಾಗಿವೆ. ಮಹಿಳೆಯರಿಗೆ, ರೈತರಿಗೆ ಅತಿ ಹೆಚ್ಚು ಸಾಲ ನೀಡಿದೆ. ಇದರೊಂದಿಗೆ ಎರಡೂ ಜಿಲ್ಲೆಗಳಲ್ಲೇ ಅತಿ ಹೆಚ್ಚು ಜನೌಷಧ ಮಳಿಗೆ ಸ್ಥಾಪನೆಗೆ ನಿರ್ಧರಿಸಲಾಗಿದೆ ಎಂದರು.

    ನಿರುದ್ಯೋಗಿ ಯುವಕರು, ಒಬ್ಬ ಫಾರ್ಮಸಿಸ್ಟ್ ಶಿಕ್ಷಣ ಪಡೆದವರೊಂದಿಗೆ ಜನೌಷಧ ಮಳಿಗೆ ತೆರೆಯಲು ಅವಕಾಶ ನೀಡಲಾಗುವುದು. ಇದರಿಂದ ನಿರುದ್ಯೋಗ ಸಮಸ್ಯೆಗೂ ಪರಿಹಾರ, ಔಷಧ ಅತ್ಯಂತ ಕಡಿಮೆ ದರಕ್ಕೆ ಸಿಗುವುದರಿಂದ ಬಡವರ ಸೇವೆ ಮಾಡಿದಂತೆಯೂ ಆಗಲಿದೆ ಎಂದು ಅಭಿಪ್ರಾಯಪಟ್ಟರು.

    ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ದಿವಾಳಿಯಾಗಿದ್ದ ಬ್ಯಾಂಕನ್ನು ಇಂದು ರೈತರು, ಮಹಿಳೆಯರ ಆರ್ಥಿಕ ಪ್ರಗತಿಗೆ ದುಡಿಯುವ ಶಕ್ತಿ ಗಳಿಸುವಂತೆ ಮಾಡಿದ್ದರೂ ಟೀಕೆ ಕೇಳಿ ಬರುತ್ತಲೇ ಇದೆ. ಅದಕ್ಕೆ ನಾವು ಕೆಲಸಗಳಿಂದಲೇ ಉತ್ತರ ನೀಡುತ್ತಿದ್ದೇವೆ ಎಂದರು.

    ಬ್ಯಾಂಕ್‌ನಿಂದ ಎರಡೂ ಜಿಲ್ಲೆಗಳ ಎಲ್ಲಾ ಸೊಸೈಟಿಗಳ ಗಣಕೀಕರಣ ಮಾಡಲಾಗಿದೆ, ಮೈಕ್ರೋ ಎಟಿಎಂ ಜಾರಿ, ತಾಯಂದಿರು, ರೈತರ ಹಣಕ್ಕೆ ಖಾತ್ರಿ ನೀಡಲಾಗಿದೆ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗಿದೆ, ಇಷ್ಟರ ನಡುವೆಯೂ ಕೆಲವರು ಟೀಕೆ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅರ್ಥವಿಲ್ಲದ ಟೀಕೆಗಳಿಗೆ ಉತ್ತರ ನೀಡುವುದಿಲ್ಲ, ಬ್ಯಾಂಕ್ ಉಳಿಸಿ ಬೆಳೆಸಿರುವ ತಾಯಂದಿರು, ರೈತರ ಹಿತ ಕಾಯುವ ಸಂಕಲ್ಪದೊಂದಿಗೆ ನನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ ಎಂದರು.

    ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಮಾತ್ರವಲ್ಲ ಸೊಸೈಟಿಗಳು ಜೀವ ಕಳೆದುಕೊಂಡಿದ್ದವು. ಪಡಿತರಕ್ಕೆ ಸೀಮಿತವಾಗಿದ್ದ ಸೊಸೈಟಿಗಳು ಕೋಟಿಗಟ್ಟಲೆ ವಹಿವಾಟು ನಡೆಸುತ್ತಿವೆ. ಇದಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಪ್ರಾಮಾಣಿಕ ಶ್ರಮವೇ ಕಾರಣ ಎಂದರು.

    ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಅರಹಳ್ಳಿ ಸೊಸೈಟಿ ಅಧ್ಯಕ್ಷ ವೆಂಕಟೇಶಪ್ಪ, ನಿರ್ದೇಶಕರಾದ ಬಾಬುಮೌನಿ, ಚಲಪತಿ, ಲಕ್ಷ್ಮಮ್ಮ, ರೂಪಾ, ಮಾಜಿ ಅಧ್ಯಕ್ಷ ಕೃಷ್ಣಪ್ಪ, ಸಿಇಒ ಹರೀಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts