More

    ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ

    ಕಾರವಾರ: ಮೀನುಗಾರರು-ರೈತರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಲ್ಲಿ ಮೀನುಗಾರರಿಗೆ ಉಂಟಾಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಲಾಗುವುದು. ಜೈಲಿಗೆ ಹೋಗಲೂ ಸಿದ್ಧ ಎಂದು ರೈತ ಸಂಘ ನಂಜುಂಡಸ್ವಾಮಿ ಬಣದ ಅಧ್ಯಕ್ಷ ಹರ್ಲಾಪುರ ಮಂಜೇಗೌಡ ಹೇಳಿದರು.

    ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರರು ಜಿಲ್ಲಾಧಿಕಾರಿ ಕಚೇರಿಯ ಎದುರು ಕೈಗೊಂಡ ಧರಣಿ 8ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ರೈತರಿಗೆ ಬೆಳೆ ಬೆಳೆಯಲು ಜಮೀನಿದ್ದರೆ ಮೀನುಗಾರರಿಗೆ ಕಡಲು ಹಾಗೂ ಕಡಲ ತೀರವೇ ಜಮೀನು. ಅದರಲ್ಲಿ ಮೀನುಗಾರರ ಹಕ್ಕಿದೆ. ಕಡಲ ತೀರಕ್ಕೆ ಧಕ್ಕೆಯಾದಲ್ಲಿ ಮೀನುಗಾರರು ಎಲ್ಲಿಗೆ ಹೋಗಬೇಕು. ಜನರಿಂದ ಆಯ್ಕೆಯಾದ ಸರ್ಕಾರ ಜನರ ಧ್ವನಿಗೆ ಸ್ಪಂದಿಸಬೇಕು. ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಜಿಲ್ಲಾಧಿಕಾರಿ ಕಚೇರಿಯ ಗೇಟ್​ನ ಹೊರಗೆ ನಿಲ್ಲಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಸಂಘಟನೆಯ 30ಕ್ಕೂ ಹೆಚ್ಚು ಪದಾಧಿಕಾರಿಗಳು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದರು.

    ಜಯ ಕರ್ನಾಟಕ ಬೆಂಬಲ: ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ದಿಲೀಪ ಅರ್ಗೆಕರ್ ನೇತೃತ್ವದಲ್ಲಿ ಆಟೋ ಹಾಗೂ ಟೆಂಪೊ ಚಾಲಕರ, ಮಾಲೀಕರ ಸಂಘಟನೆಗಳ ಸದಸ್ಯರು ಆಗಮಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ದಿವ್ಯಾ ದೇವಿದಾಸ ನಾಯ್ಕ, ದೇವಿದಾಸ ನಾಯ್ಕ ಹಾಗೂ ಇತರರು ಇದ್ದರು.

    ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ., ಕಾಮಗಾರಿ ನಿಲ್ಲಿಸುವುದಾಗಿ ಎಲ್ಲಿಯೂ ಭರವಸೆ ನೀಡಿಲ್ಲ. ಮೀನುಗಾರ ಮುಖಂಡರ ಹೆಸರುಗಳನ್ನು ನೀಡಿದಲ್ಲಿ ಸಚಿವರ ಜತೆ ಮಾತುಕತೆಯ ದಿನಾಂಕವನ್ನು ತಕ್ಷಣ ನಿಗದಿ ಮಾಡುತ್ತೇನೆ ಎಂದು ಭರವಸೆ ನೀಡಿದರು. ಎಸ್​ಪಿ ಶಿವ ಪ್ರಕಾಶ ದೇವರಾಜು, ಡಿವೈಎಸ್​ಪಿ ಅರವಿಂದ ಕಲಗುಜ್ಜಿ ಇದ್ದರು.

    ಅಸ್ವಸ್ಥ: ಪ್ರತಿಭಟನಾ ಸ್ಥಳದಲ್ಲಿ ದಿಗಂಬರ ಎಂಬ ವ್ಯಕ್ತಿ ಅಸ್ವಸ್ಥರಾಗಿ ಕುಸಿದು ಬಿದ್ದರು. ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು.

    ಕಡಲ ತೀರಕ್ಕೆ ಹಾನಿಯಾಗದು: ಸಾಗರ ಮಾಲಾ ಯೋಜನೆಯಿಂದ ಮೀನುಗಾರರಿಗೆ ಹಾಗೂ ಕಡಲ ತೀರಕ್ಕೆ ಯಾವುದೇ ಹಾನಿಯಾಗದು ಎಂದು ಶಾಸಕಿ ರೂಪಾಲಿ ನಾಯ್ಕ ಪುನರುಚ್ಛರಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸೋಮವಾರ ಮೀನುಗಾರರ ಮುಖಂಡರ ಸಭೆ ನಡೆಸಿದ ಅವರು, ಹುಬ್ಬಳ್ಳಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೂ ಮನವಿ ಸಲ್ಲಿಸಿದ್ದು, ಯೋಜನೆಯಿಂದ ಹಾನಿಯುಂಟಾಗದಂತೆ ಕಾಮಗಾರಿ ಕೈಗೊಳ್ಳಲು ಮನವಿ ಮಾಡಿದ್ದೇನೆ ಎಂದರು. ನನ್ನನ್ನು ಬೈದಿದ್ದಕ್ಕೆ ಬೇಸರವಿಲ್ಲ. ಕೆಲವರು ಯೋಜನೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಅರಿವಿದೆ ಎಂದರು. ಮೀನುಗಾರರ ಮುಖಂಡರಾದ ಗಣಪತಿ ಮಾಂಗ್ರೆ, ಕೆ.ಟಿ. ತಾಂಡೇಲ, ರಾಜು ತಾಂಡೇಲ, ಪ್ರಸಾದ ಕಾರವಾರಕರ್ ಇತರು ಈ ಸಂದರ್ಭದಲ್ಲಿದ್ದರು.

    ಪ್ರತಿಭಟನೆಗೆ ಹೆದರಿ ಅಡಗಿಕೊಳ್ಳಲು ನಾನು ಹೇಡಿಯಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಯಾರನ್ನು ಬೇಕಾದರೂ ಬಳಸಿಕೊಳ್ಳುವುದಲ್ಲ. ಮಾಜಿ ಶಾಸಕ ಹಾಗೂ ಸಚಿವರು ಚುನಾವಣೆ ತಯಾರಿ ನಡೆಸಿ ಶಾಸಕರಾಗುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ, ಚುನಾವಣೆಗೆ ಇನ್ನೂ ಮೂರೂವರೆ ವರ್ಷವಿದೆ ಎಂಬುದನ್ನು ಅರಿತುಕೊಳ್ಳಲಿ. ನನ್ನ ಅಧಿಕಾರಾವಧಿಯನ್ನು ಜನಪರ ಕಾರ್ಯಗಳಿಗೆ ಮುಡಿಪಾಗಿಡುತ್ತೇನೆ. ರೂಪಾಲಿ ನಾಯ್ಕ ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts