More

    ರಾಜ್ಯಾದ್ಯಂತ ‘ನೆರೆ’ವು ಅಕ್ರಮ ಪತ್ತೆಗೆ ಸೂಚನೆ

    ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿನ ‘ನೆರೆ’ವು ಅಕ್ರಮ ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದ್ದು, ಹಾವೇರಿ ಜಿಲ್ಲೆಯಲ್ಲಿನ ಪರಿಶೀಲನೆಯ ಮಾದರಿಯ ನಮೂನೆಯೊಂದಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಅಕ್ರಮ ಪರಿಶೀಲನೆಗೆ ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ರವಾನಿಸಿದೆ.

    ಫೆ. 26ರಂದು ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ ಕೆ. ಉಮಾಪತಿ ಅವರು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿರುವ ಬೆಳೆ ಹಾನಿ ವಿವರಗಳನ್ನು ಪರಿಶೀಲಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಸುತ್ತೋಲೆ ಹೊರಡಿಸಿದ್ದಾರೆ.

    ‘2019ರಲ್ಲಿ ಪ್ರವಾಹ, ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ನೀಡಲಾಗಿರುವ ಇನ್​ಪುಟ್ ಸಬ್ಸಿಡಿ ಕುರಿತು ಭೂಮಿ ಉಸ್ತುವಾರಿ ಕೇಂದ್ರದಿಂದ ಜಿಲ್ಲಾವಾರು, ರೈತವಾರು ತಯಾರಿಸಿ ಕಳಿಸಿರುವ ಪಟ್ಟಿಯಲ್ಲಿನ ಪ್ರಕರಣಗಳ ಬಗ್ಗೆ ಕಂದಾಯ ಇಲಾಖೇತರ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ನಿಯಮಾನುಸಾರ ಪರಿಶೀಲಿಸಿ, ಈ ಸುತ್ತೋಲೆಯೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಸರ್ಕಾರಕ್ಕೆ ವರದಿ ನೀಡಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

    ಹಾವೇರಿ ಪರಿಶೀಲನೆ ಮಾದರಿ ಫಾರ್ವೆಟ್ ರವಾನೆ: ಸುತ್ತೋಲೆಯೊಂದಿಗೆ ಹಾವೇರಿ ಜಿಲ್ಲೆಯ ಅಧಿಕಾರಿಗಳು ಅಕ್ರಮದ ಪರಿಶೀಲನೆ ನಡೆಸಿದ ಫಾರ್ವೆಟ್​ನ ಮಾದರಿಯೊಂದನ್ನು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗಿದೆ. ಹೀಗಾಗಿ ಹಾವೇರಿ ಜಿಲ್ಲೆಯ ಮಾದರಿಯಲ್ಲಿಯೇ ಎಲ್ಲ ಜಿಲ್ಲೆಗಳಲ್ಲಿಯೂ ಪರಿಶೀಲನೆ ಆರಂಭಗೊಳ್ಳುತ್ತಿರುವುದು ವಿಶೇಷವಾಗಿದೆ.

    ಬಗೆದಷ್ಟು ಆಳವಾಗಿರುವ ಗೋಲ್​ವಾಲ್: ಜಿಲ್ಲೆಯಲ್ಲಿನ ಬೆಳೆ ಹಾನಿ ಪರಿಹಾರದ ಅಕ್ರಮವು ಬಗೆದಷ್ಟು ಆಳವಾಗಿದೆ. ಸರ್ಕಾರದ ಹೆಸರಿನಲ್ಲಿರುವ 21 ಖಾತೆಗಳಿಗೂ ಪರಿಹಾರವನ್ನು ಜಮೆ ಮಾಡಿರುವುದು ಎಡಿಸಿ ಅವರ ಪರಿಶೀಲನೆ ಸಮಯದಲ್ಲಿ ಕಂಡುಬಂದಿದೆ. ಬಂಕಾಪುರ ಸರ್ಕಲ್​ನಲ್ಲಿ ಲಾಗಿನ್ ಆಗಿರುವ ವ್ಯಕ್ತಿಯೊಬ್ಬರು ಪೂರ್ಣ ಶಿಗ್ಗಾಂವಿ ತಾಲೂಕಿನ ಅನೇಕರನ್ನು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಿರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಸದ್ಯದ ಪರಿಶೀಲನೆ ವೇಳೆಯಲ್ಲಿ 18 ಗ್ರಾಮಲೆಕ್ಕಾಧಿಕಾರಿಗಳು ಅಕ್ರಮದಲ್ಲಿ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

    ತಂತ್ರಾಂಶದಲ್ಲಿ ಪರಿಹಾರಕ್ಕೆ ಫಲಾನುಭವಿಯ ಹೆಸರು ನಮೂದಿಸುವಾಗ ಆರ್​ಟಿಸಿಯಲ್ಲಿನ ಮಾಲೀಕನ ಹೆಸರು, ಬ್ಯಾಂಕ್ ಖಾತೆ ಹೊಂದಿರುವವರ ಹೆಸರಿನ ಆಧಾರ್ ಕಾರ್ಡ್ ನಂಬರ್ ಒಂದೇ ಆಗಿರಬೇಕು. ಹಾಗೆ ಇದ್ದರೆ ಮಾತ್ರ ತಂತ್ರಾಂಶದಲ್ಲಿ ಮ್ಯಾಚ್ ಸ್ಕೋರ್ ಬರುತ್ತದೆ. ಜಿಲ್ಲೆಯಲ್ಲಿ ಸಾವಿರಾರು ಪ್ರಕರಣಗಳಲ್ಲಿ ಮ್ಯಾಚ್​ಸ್ಕೋರ್ ಬಾರದೇ ಇದ್ದರೂ ಅದನ್ನು ಚೆಕ್​ಲಿಸ್ಟ್​ಗೆ ಅಳವಡಿಸದೇ ಗ್ರಾಮಲೆಕ್ಕಾಧಿಕಾರಿಗಳು ನೇರವಾಗಿ ಅನುಮೋದನೆ ನೀಡಿದ್ದಾರೆ. ಇದನ್ನೇ ತಹಸೀಲ್ದಾರರು ಅನುಮೋದಿಸಿದ್ದರಿಂದ ಅನರ್ಹರಿಗೆ ಪರಿಹಾರ ಜಮೆಯಾಗಿದೆ ಎನ್ನುತ್ತಾರೆ ಎಡಿಸಿ ಎಂ. ಯೋಗೇಶ್ವರ.

    ಪೊಲೀಸರಿಗೂ ತರಬೇತಿ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿನ ತಹಸೀಲ್ದಾರ್, ಗ್ರಾಮಲೆಕ್ಕಾಧಿಕಾರಿ, ಡಾಟಾ ಎಂಟ್ರಿ ಆಪರೇಟರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಇದರ ತನಿಖೆಗೆ ಪರಿಹಾರ ತಂತ್ರಾಂಶದ ಕಾರ್ಯವೈಖರಿಯ ಕುರಿತು ಎಡಿಸಿಯವರೇ ತನಿಖಾಧಿಕಾರಿಗಳಿಗೆ ತರಬೇತಿಯನ್ನು ನೀಡಿದ್ದಾರೆ.

    ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಗೋಲ್‍ಮಾಲ್ ನಡೆದಿರುವ ಕುರಿತು ರಾಜ್ಯದ ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿಯು ಫೆ. 8ರಿಂದ ಸರಣಿ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು. ಅದನ್ನು ಗಮನಿಸಿದ್ದ ಸಿಎಂ ನೆರೆವು ಅಕ್ರಮದ ತನಿಖೆಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

    ತಮ್ಮ ಖಾತೆಗೆ ಹಣ ಹಾಕಿ ಪರಿಶೀಲಿಸಿದ ಎಡಿಸಿ

    ಪರಿಹಾರ ತಂತ್ರಾಂಶದಲ್ಲಿ ಯಾವ ರೀತಿಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಪತ್ತೆ ಮಾಡಲು ಸರ್ಕಾರದ ಅನುಮತಿ ಪಡೆದು ಎಡಿಸಿ ಯೋಗೇಶ್ವರ ಅವರೇ ತಮ್ಮ ಖಾತೆಗೆ ಪರಿಹಾರದ ಹಣವನ್ನು ಜಮೆ ಮಾಡಿಕೊಂಡು ಪರಿಶೀಲಿಸಿದ್ದಾರೆ. ಪರಿಹಾರ ತಂತ್ರಾಂಶದಲ್ಲಿನ ಕೆಲವು ಲೋಪಗಳಿರುವುದು ಇದರಿಂದ ಸಾಬೀತಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಅನರ್ಹರಿಗೆ ಪರಿಹಾರ ಜಮೆ ಮಾಡಲಾಗಿದೆ.

    ಹಾವೇರಿ ಜಿಲ್ಲೆಯಲ್ಲಿ ಬೆಳೆ ಹಾನಿ ಪರಿಹಾರದಲ್ಲಿನ ಅಕ್ರಮದ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅಲ್ಲದೇ ಪ್ರಾದೇಶಿಕ ಆಯುಕ್ತರ ಸೂಚನೆಯಂತೆ ತನಿಖೆಗೆ ಪೊಲೀಸ್ ಇಲಾಖೆಗೆ ದೂರು ಸಹ ನೀಡಲಾಗಿದೆ. ಮೇಲ್ನೋಟಕ್ಕೆ ಅಕ್ರಮ ನಡೆಸಿರುವುದು ಸಾಬೀತಾಗಿರುವ 7 ಗ್ರಾಮಲೆಕ್ಕಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದ ಮಾದರಿಯಲ್ಲಿಯೇ ಎಲ್ಲ ಜಿಲ್ಲೆಗಳಲ್ಲಿ ತನಿಖೆಗೆ ಸರ್ಕಾರವು ಸೂಚಿಸಿದೆ.
    | ಎಂ. ಯೋಗೇಶ್ವರ, ಅಪರ ಜಿಲ್ಲಾಧಿಕಾರಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts