More

    ರಾಜ್ಯದಲ್ಲಿ 20 ಪ್ರಕರಣ ಪಾಸಿಟಿವ್

    ಗದಗ: ರಾಜ್ಯದಲ್ಲಿ ಕರೊನಾ ವೈರಸ್​ಗೆ ಸಂಬಂಧಿಸಿದಂತೆ 20 ಪ್ರಕರಣಗಳ ವೈದ್ಯಕೀಯ ವರದಿ ಪಾಸಿಟಿವ್ ಬಂದಿದ್ದು, ಇದರಲ್ಲಿ ಮೂರು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಮತ್ತಿಬ್ಬರು ಗುಣಮುಖರಾಗಲಿದ್ದಾರೆ ಎಂದರು.

    ಕರೊನಾ ನಿಯಂತ್ರಣಕ್ಕೆ ಸರ್ಕಾರ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಮುಖ್ಯಮಂತ್ರಿ ಅವರು ಅಗತ್ಯ ಅನುದಾನ ಮಾಡಿದ್ದಾರೆ. ಕರೊನಾ ತಡೆಗಟ್ಟಲು ಹಣಕಾಸಿನ ಯಾವುದೇ ತೊಂದರೆ ಇಲ್ಲ. ವೆಂಟಿಲೇಟರ್, ಆಕ್ಸಿಜನ್ ಬೆಡ್ ಎಲ್ಲವನ್ನೂ ಒದಗಿಸಲಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಸಲಕರಣೆಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ಇದಲ್ಲದೆ, ರಾಜ್ಯದಲ್ಲಿ ಕರೊನಾ ವೈರಸ್ ಎರಡನೆ ಹಂತದಲ್ಲಿದ್ದು, ಇದೇ ಹಂತದಲ್ಲಿ ನಿಲ್ಲಿಸಿ ಹತೋಟಿಗೆ ತರಬೇಕು ಎಂದು ಪ್ರಯತ್ನಿಸಲಾಗುತ್ತಿದೆ. ಕರೊನಾ ನಿಯಂತ್ರಿಸುವ ಸಲುವಾಗಿ ಇದರ ಉಸ್ತುವಾರಿಗಾಗಿ ಬೇರೆ ಇಲಾಖೆಯ ಹಿರಿಯ ಐಎಎಸ್ ಅಧಿಕಾರಿಗಳ ಹೆಚ್ಚುವರಿ ಸೇವೆಯನ್ನೂ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

    ಜನತಾ ಕರ್ಫ್ಯೂಗೆ ಸ್ಪಂದಿಸಲು ಮನವಿ: ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದ್ದು, ಮುಂಬರುವ ಎರಡು ವಾರಗಳ ಕಾಲ ಅತ್ಯಂತ ಜಾಗರೂಕಗಾಗಿ ಇರಬೇಕಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಭಾನುವಾರದ ಜನತಾ ಕಫ್ಯೂಗೆ ಎಲ್ಲರೂ ಸ್ಪಂದಿಸಬೇಕು. ದೇಶದ ಹಿತಕ್ಕಾಗಿ ಎಲ್ಲರೂ ಕೈಜೋಡಿಸಿ ಕರೊನಾ ವಿರುದ್ಧ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಯಾರೂ ಹೊರಗೆ ಬರಬಾರದು, ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನರು ಸಹಕಾರ ನೀಡಬೇಕು ಎಂದರು.

    ಕಲಬುರಗಿಯಲ್ಲಿ ಕರೊನಾ ವೈರಸ್​ನಿಂದ ಮೃತಪಟ್ಟ ವ್ಯಕ್ತಿಯ ಜತೆಗಿದ್ದವರನ್ನು ಆರೋಗ್ಯ ಕಾಪಾಡಲು ಸಾಕಷ್ಟು ಕಾಳಜಿ ವಹಿಸಲಾಗಿದೆ. ನಂತರ ಮಂಗಳೂರಿನಲ್ಲಿ ಸಹ ಕಾಸರಗೋಡಿನಿಂದ ಬಂದು ಹೋಗಿದ್ದರಿಂದ ಅಲ್ಲಿ ಸಹ ವಿಶೇಷ ನಿಗಾ ಇರಿಸಲಾಗಿದೆ. ಬೆಳಗಾವಿಯ ಗಡಿ ಪ್ರದೇಶದಲ್ಲಿ ಮಹಾರಾಷ್ಟ್ರದಿಂದ ಜನರು ಬರುತ್ತಿದ್ದಾರೆ. ಅವರನ್ನು ತಪಾಸಣೆ ಒಳಪಡಿಸುವ ಕೆಲಸ ನಡೆದಿದೆ. ಗಡಿಭಾಗದಲ್ಲಿ ಬೇರೆ ರಾಜ್ಯದಿಂದ ಆಗಮಿಸುವ ವಾಹನಗಳನ್ನು ನಿಷೇಧಿಸಲಾಗಿದೆ ಎಂದು ಅವರು ವಿವರಿಸಿದರು. ಕರೊನಾ ಬಂದರೆ ನಿರ್ಲಕ್ಷ್ಯ ವಹಿಸಬಾರದು. ಕರೊನಾ ಬಗ್ಗೆ ಭಯಬೇಡ, ಕರೊನಾ ವೈರಸ್ ದೇಹ ಸೇರಿದರೆ ಸಾಯುವುದಿಲ್ಲ. ಈ ವೈರಸ್​ಗೆ ಔಷಧ ಕಂಡು ಹಿಡಿಯುವ ಕೆಲಸ ಮುಂದುವರಿದಿದೆ. ಜರ್ಮನ್ ದೇಶ ಕರೊನಾ ನಿಯಂತ್ರಣಕ್ಕೆ ಔಷಧ ಕಂಡುಹಿಡಿದಿದ್ದು, ಔಷಧ ಕಂಡು ಹಿಡಿದ ತಂಡದಲ್ಲಿ ಕರ್ನಾಟಕ ವೈದ್ಯರೊಬ್ಬರು ಇರುವುದು ಹೆಮ್ಮೆಯ ಸಂಗತಿ ಎಂದರು.

    ಸುಳ್ಳು ಸುದ್ದಿ ಹರಡುವವರು ಸಿಕ್ಕಿಬಿದ್ದರೆ ಕ್ರಿಮಿನಲ್ ಕೇಸ್: ಭಾನುವಾರ ಜನತಾ ಕರ್ಫ್ಯೂ ಕುರಿತು ಗಾಳಿ ಸುದ್ದಿ ಹಬ್ಬಿಸುವುದು, ಜನರನ್ನು ಭಯಪಡಿಸುವ ಕಿಡಿಗೇಡಿತನ ಮಾಡಿದರೆ ಅಂತಹ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಜನತಾ ಕರ್ಫ್ಯೂನಲ್ಲಿ ಜನರನ್ನು ಮನೆಯಲ್ಲಿ ಕೂರಿಸಿ ಹೆಲಿಕಾಪ್ಟರ್ ಮೂಲಕ ಔಷಧ ಸಿಂಪಡಣೆ ಮಾಡುತ್ತಾರೆ ಎಂಬುದು ಗಾಳಿ ಸುದ್ದಿ. ಇದೊಂದು ಸುಳ್ಳು ಸುದ್ದಿ. ಈ ಸುದ್ದಿಯನ್ನು ಹರಡಿದವರು ಯಾರು ಎಂಬುದನ್ನು ಹುಡುಕಾಟ ಆರಂಭಿಸಲಾಗಿದ್ದು, ಫೇಕ್ ನ್ಯೂಸ್ ಹಾಕಿದವರು ಸಿಕ್ಕಿದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅವರನ್ನು ಜೈಲಿಗೆ ಕಳಿಸಲಾಗುವುದು ಎಂದು ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts