More

    ರಾಜ್ಯದಲ್ಲಿ ವಿದ್ಯುತ್ ಅಭಾವ; ಸಿಎಂಗೆ ಸಂಸದ ರಮೇಶ ಜಿಗಜಿಣಗಿ ಮನವಿ, ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಕೊಡಿ

    ವಿಜಯಪುರ: ಉತ್ತರ ಕರ್ನಾಟಕದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದಿರುವ ಬಗ್ಗೆ ಅಸಮಾಧಾನ ತೋಡಿಕೊಂಡಿರುವ ಸಂಸದ ರಮೇಶ ಜಿಗಜಿಣಗಿ ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ವಿಶೇಷ ಮುತುರ್ಜಿ ವಹಿಸಬೇಕೆಂದು ಮನವಿ ಮಾಡಿದ್ದಾರೆ.
    ರಾಜ್ಯದಲ್ಲಿ ಅತೀ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ಶೇ. 50 ರಷ್ಟು ಸಹ ವಿದ್ಯುತ್ ನಾವು ಬಳಕೆ ಮಾಡುತ್ತಿಲ್ಲ. ಅದಾಗ್ಯೂ ಕಡಿತ ಮಾಡುತ್ತಿರುವುದೇಕೆ. ಈ ಬಗ್ಗೆ ಕೂಡಲೇ ಅಧಿಕಾರಿಗಳ ಸಭೆ ಕರೆದು ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
    ರಾಜ್ಯದಲ್ಲಿ ರಾಯಚೂರನಿಂದ 1700 ಮೆಗಾ ವ್ಯಾಟ್, ಯರಮಾರ ವೈಟಿಪಿಸಿಯಿಂದ 1600 ಮೆ.ವ್ಯಾ, ಬಳ್ಳಾರಿಯಿಂದ 1700 ಮೆ.ವ್ಯಾ, ಕೂಡಗಿ ಎನ್‌ಟಿಪಿಸಿಯಿಂದ 2400 ಮೆ.ವ್ಯಾ., ಹೈಡ್ರೋ ಇಲೆಕ್ಟ್ರಿಸಿಟಿ ಎಲ್ಲ ಸೇರಿ 3500 ಮೆ.ವ್ಯಾ, ಸೋಲಾರದಿಂದ 6500 ಮೆ.ವ್ಯಾ, ವಿಂಡ್‌ಪಾವರ್‌ದಿಂದ 4500 ಮೆ.ವ್ಯಾ, ನ್ಯೂಕ್ಲಿಯರ್‌ನಿಂದ 2000 ಮೆ.ವ್ಯಾ, ಸಕ್ಕರೆ ಕಾರ್ಖಾನೆಯಿಂದ 750 ಮೆ.ವ್ಯಾ ಹೀಗೆ ಒಟ್ಟು 30 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ರಾಜ್ಯಕ್ಕೆ ಬೇಕಿರುವುದು ಕೇವಲ 14,500ಮೆ.ವ್ಯಾ ವಿದ್ಯುತ್. ಅಂದರೆ ಶೇ. 50 ರಷ್ಟು ವಿದ್ಯುತ್ ಸಹ ನಾವು ಪಡೆಯುತ್ತಿಲ್ಲ. ಆದರೂ ವಿದ್ಯುತ್ ಅಭಾವ ಏಕೆ? ಈ ಬಗ್ಗೆ ಕೆಇಬಿ ಅಧಿಕಾರಿಗಳ ಸಭೆ ಕರೆದು ಸಿಎಂ ಎಚ್ಚರಿಕೆ ಕೊಡಬೇಕು ಎಂದು ಜಿಗಜಿಣಗಿ ಆಗ್ರಹಿಸಿದರು.
    ರಾಜ್ಯಕ್ಕೆ 30 ಸಾವಿರ ಮೆ.ವ್ಯಾ ವಿದ್ಯುತ್ ವಿತರಣೆ ಮಾಡುವ ಸಾಮರ್ಥ್ಯ ಇದ್ದರೂ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಕೊಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ನಾನೊಬ್ಬ ಸಂಸದನಾಗಿ ಪ್ರಶ್ನೆ ಮಾಡುತ್ತೇನೆ. ಕೂಡಲೇ ರಾಜ್ಯ ಮಟ್ಟದ ಅಧಿಕಾರಿಗಳ ಸಭೆ ಕರೆಯಬೇಕು. ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ನೀಡಬೇಕೆಂದು ಮನವಿ ಮಾಡುವೆ ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ವಿಜಯ ಜೋಷಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts