More

    ರಾಜಕೀಯ ದುರುದ್ದೇಶದಿಂದ ರೇವಣ್ಣರ ಬಂಧನ:ಕೆ.ಎಸ್.ಲಿಂಗೇಶ್ ಆರೋಪ

    ಹಾಸನ: ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರು ಹಾಗೂ ಜೆಡಿಎಸ್ ನಾಯಕರದ ಎಚ್.ಡಿ. ರೇವಣ್ಣ ಅವರನ್ನು ರಾಜಕೀಯ ದುರುದ್ದೇಶದಿಂದ ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಆರೋಪಿಸಿದರು.
    ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ನೇಮಕ ಮಾಡಿರುವುದು ಸ್ವಾಗತ, ಆದರೆ, ಸತ್ಯಾಸ್ಯತೆಯನ್ನು ಬಯಲು ಮಾಡುವ ಬದಲು, ಅವರ ತನಿಖೆ ದಿಕ್ಕು ತಪ್ಪುತ್ತಿದೆ. ವಿನಾಃಕಾರಣ ನಮ್ಮ ನಾಯಕರನ್ನು ಕಿಡ್ನಾಪ್ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ಮಾಡುವ ಮೂಲಕ ರಾಜಕೀಯ ಚಿತಾವಣಿ ನಡೆಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ತಪ್ಪಿತಸ್ಥರು ಯಾರೇ ಆಗಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ರೇವಣ್ಣ ಅವರನ್ನು ರಾಜಕೀಯವಾಗಿ ಮುಗಿಸಲು ಇಲ್ಲಸಲ್ಲದ ಪ್ರಕರಣಗಳನ್ನು ಹಾಕಿದ್ದಾರೆ. ಈಗಾಗಲೇ ನಮ್ಮ ಪಕ್ಷದ ವತಿಯಿಂದ ಸಭೆ ನಡೆಸಿ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ವರಿಷ್ಠರು ತೀರ್ಮಾನ ಕೈಗೊಂಡಿದ್ದಾರೆ. ಎಚ್.ಡಿ. ರೇವಣ್ಣ ಅವರು ಎಲ್ಲೂ ತಲೆಮರಿಸಿಕೊಂಡು ಹೋಗಿರಲಿಲ್ಲ. ದೇವೇಗೌಡರ ಮನೆಗೆ ಹೋಗಿದ್ದರು. ಆದರೆ ವಿನಾಃಕಾರಣ ಅದನ್ನು ವೈಭವೀಕರಿಸಲಾಗುತ್ತಿದೆ. ಒಬ್ಬರು ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು ಎಂಬಂತೆ ಹಲವರು ನಾನಾ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಎಸ್‌ಐಟಿಯ ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಸ್ಯತೆಯನ್ನು ಬಯಲಿಗೆ ಎಳೆಯಬೇಕು ಮತ್ತು ಈಗಾಗಲೇ ಹಲವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರನ್ನು ಕೂಡ ವಶಕ್ಕೆ ಪಡೆದುಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
    ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಪೆನ್ ಡ್ರೈವ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಈಗಾಗಲೇ ಗುಸುಗುಸು ಹರಿದಾಡುತ್ತಿದ್ದು, ಕೆಲವೇ ಹೆಣ್ಣು ಮಕ್ಕಳ ಚಿತ್ರ ಇದೆ ಎಂದು ಬಿಂಬಿಸಿ ಅವರಿಂದ ಹಣ ಕೇಳುವುದು ಮತ್ತು ಬೆದರಿಕೆ ಹಾಕುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಿಡುಗಡೆ ಮಾಡಿ, ತನಿಖೆಗೆ ಯಾವಾಗ ಬೇಕಾದರೂ ಬರುವಂತೆ ಹೇಳಬೇಕು. ಅಲ್ಲದೆ ಅವರು ಯಾವತ್ತೂ ಕೂಡ ಕಾನೂನು ವಿರುದ್ಧವಾಗಿ ರೇವಣ್ಣ ನಡೆದುಕೊಂಡವರಲ್ಲ. ಜೆಡಿಎಸ್ ಪಕ್ಷ ಮತ್ತು ರೇವಣ್ಣ ಅವರು ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.
    ಜಿಲ್ಲೆಯಲ್ಲಿ ಪೆನ್ ಡ್ರೈವ್ ಪ್ರಕರಣದ ಮೂಲ ಕರ್ತೃ ಮತ್ತು ಹಂಚಿದವರು ಹಾಗೂ ಯಾರು? ಯಾರಿಗೆ ಕೊಟ್ಟರು? ಎಂಬುದರ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಬೇಕು. ಮತ್ತು ಇದರ ಹಿಂದಿರುವ ಕೈವಾಡಗಳ ಬಗ್ಗೆ ಅಧಿಕಾರಿಗಳು ಬಯಲಿಗೆ ಎಳೆಯಬೇಕು. ಜಿಲ್ಲೆಯಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಹೆಣ್ಣು ಮಕ್ಕಳಿಗೆ ಸಾಂತ್ವಾನ ಹೇಳುವ ಕೆಲಸವನ್ನು ಕೂಡ ಜೆಡಿಎಸ್ ಪಕ್ಷದಿಂದ ಮಾಡಲಾಗುವುದೆಂದು ಹೇಳಿದರು.
    ಇನ್ನು ನಾಲ್ಕು ದಿನ ಕಾಲಾವಕಾಶವಿದ್ದು, ಆನಂತರ ಏನಾಗಲಿದೆ ಎಂಬ ಪರಿಸ್ಥಿತಿಯನ್ನು ಅರಿತು ಮತ್ತೆ ಮೇ 8ರಂದು ಸಭೆ ನಡೆಸಿ ನಮ್ಮ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದೆಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಎಚ್‌ಡಿಸಿಸಿ ಬ್ಯಾಂಕಿನ ಜಿಲ್ಲಾಧ್ಯಕ್ಷ ಸೋಮನಹಳ್ಳಿ ನಾಗರಾಜ್, ನಿರ್ದೇಶಕ ನಾಗರಾಜ್, ಜೆಡಿಎಸ್‌ನ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ರಘು ಹೊಂಗೆರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts