More

    ರಾಜಕೀಯದ ಜತೆ ಕೃಷಿಯಲ್ಲೂ ಎಚ್‌ಡಿಕೆ ಆಸಕ್ತಿ: ಸಂಶೋಧನಾ ಕೇಂದ್ರದಂತಾಗುತ್ತಿರುವ ಕೇತಿಗಾನಹಳ್ಳಿ ತೋಟ ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ಪ್ರವಾಸ

    ಬಿಡದಿ : ರಾಜಕೀಯ ಕೃಷಿಯೊಂದಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೇಸಾಯದಲ್ಲೂ ತೊಡಗಿದ್ದು, ಬಿಡದಿ ಬಳಿಯ ಕೇತಿಗಾನಹಳ್ಳಿಯಲ್ಲಿರುವ ಅವರ 45 ಎಕರೆ ತೆಂಗಿನ ತೋಟವೀಗ ಕೃಷಿ ಸಂಶೋಧನಾ ಕೇಂದ್ರದಂತೆ ರೂಪುಗೊಳ್ಳುತ್ತಿದೆೆ.

    ಮುಖ್ಯಮಂತ್ರಿಯಾಗಿದ್ದ ವೇಳೆ ಆಧುನಿಕ ಕೃಷಿ ಬೇಸಾಯಕ್ಕೆ ಒತ್ತು ನೀಡಿ ರೈತನ ಬದುಕನ್ನು ಹಸನಾಗಿಸಬೇಕೆಂಬ ಉದ್ದೇಶ ಇರಿಸಿಕೊಂಡು ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್ ಪ್ರವಾಸ ನಡೆಸಿದ್ದ ಕುಮಾರಸ್ವಾಮಿ, ಇದೀಗ ಅವರ ತೋಟದಲ್ಲಿ ಅಂತರ್ಜಲ ವೃದ್ಧಿಗೆ ಪೂರಕ ವಾಗುವಂತೆ ಮೂರು ಬೃಹತ್ ಹೊಂಡಗಳನ್ನು ನಿರ್ಮಿಸಿ ಮೀನು ಸಾಕಣೆ ಜತೆಗೆ ಹಸು ಸಾಕಾಣಿಕೆ, ಆಧುನಿಕ ಕೃಷಿ ಪದ್ಧತಿ, ನೀರಿನ ಮರುಪೂರಣದಂತಹ ಹಲವು ಕೃಷಿ ಸಂಬಂಧಿತ ಕಾರ್ಯಗಳ ಬಗ್ಗೆ ಆಸಕ್ತಿ ತೋರಿದ್ದಾರೆ.ಇತ್ತೀಚೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತೋಟದಲ್ಲಿ ತೆಂಗಿನ ಸಸಿ ನೆಟ್ಟು, ಟ್ರ್ಯಾಕ್ಟರ್‌ಗೆ ಪೂಜೆ ನೆರವೇರಿಸಿ ಪುತ್ರನ ಕೃಷಿ ಚಟುವಟಿಕೆಗೆ ಬೆನ್ನು ತಟ್ಟಿದ್ದಾರೆ.

    ಕಪಿಲ, ಸ್ವರ್ಣ ಮತ್ತು ಗಿರ್ ತಳಿಯ ಗೋವುಗಳ ಪಾಲನೆ, ಮೀನು ಮರಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಮೇಕೆ ಶೆಡ್ಡುಗಳ ನಿರ್ಮಾಣ ಭರದಿಂದ ಸಾಗಿದೆ. ವಿಶೇಷ ಎಂದರೆ ತೋಟದಲ್ಲಿ ಬೀಳುವ ಮಳೆ ನೀರು ಹೊಂಡಗಳಿಗೆ ಹರಿಯುವಂತೆ ವ್ಯವಸ್ಥೆ ಮಾಡಿ ಮರುಪೂರಣದಂತಹ ಕಾರ್ಯವೂ ನಡೆದಿದೆ.

    ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದಂತೆ ಕುಮಾರಸ್ವಾಮಿ ಅವರು ಕೇತಿಗಾನಹಳ್ಳಿಯ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಜತೆಗೆ ಭೂಮಿ ಉಳುಮೆ ಮಾಡಿ, ಟಿಲ್ಲರ್ ನೆರವಿನಿಂದ ಸ್ವತಃ ಕಳೆ ತೆಗೆಯುವುದು, ಮೀನು ಸಾಕಣೆಗಾಗಿ ಕೃಷಿ ಹೊಂಡಕ್ಕೆ ಮೀನು ಮರಿಗಳನ್ನು ಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಸ್ವತಃ ಕುಮಾರಸ್ವಾಮಿ ಅವರೇ ಚನ್ನಪಟ್ಟಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡದಿ ಕೇತಿಗಾನಹಳ್ಳಿ ತೋಟವನ್ನು ಕೃಷಿ ಸಂಶೋಧನಾ ಕೇಂದ್ರವಾಗಿ ಮಾರ್ಪಡಿಸಿ, ಕೃಷಿ ಪದವೀಧರರಿಗೆ ಅನುಕೂಲ ಮಾಡಿ ಕೊಡಲಾಗುವುದು ಎಂದು ಹೇಳಿದ್ದರು.ಹಾಗಾಗಿ ಜೆಡಿಎಸ್ ಸಂಘಟನೆ ಹಾಗೂ ಬಿಡುವಿಲ್ಲದ ರಾಜಕೀಯದ ನಡುವೆ ಅವರು ಕೃಷಿ ಕಾರ್ಯ ದಲ್ಲಿ ತೊಡಗುವ ಮೂಲಕ ಸುದ್ದಿಯಲ್ಲಿದ್ದು, ಕೇತಿಗಾನ ಹಳ್ಳಿ ತೋಟದ ಮನೆ ಇದೀಗ ಮಹತ್ವ ಪಡೆದುಕೊಂಡಿದೆ.

    ರಾಜಕೀಯ ಶಕ್ತಿ ಕೇಂದ್ರವೂ ಹೌದು : 
    ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಎಚ್.ಡಿ. ಕುಮಾರಸ್ವಾಮಿಯವರು ಬಿಡದಿಯ ತೋಟದ ಮನೆಯಲ್ಲಿಯೇ ವಾಸ್ತವ್ಯವಿದ್ದು ಹೆಚ್ಚಿನ ಸಮಯವನ್ನು ಇಲ್ಲಿಯೇ ಕಳೆಯುತ್ತಿದ್ದಾರೆ. ಅಲ್ಲದೆ ರಾಜ್ಯದ ಮುಖಂಡರನ್ನು ಸಹ ಇಲ್ಲಿಯೇ ಭೇಟಿ ಮಾಡುತ್ತಿದ್ದು ತೋಟವೀಗ ರಾಜಕೀಯ ಸಂಘಟನೆಯ ಶಕ್ತಿ ಕೇಂದ್ರವೂ ಆಗಿದೆ ಎಂದರೆ ತಪ್ಪಾಗಲಾರದು. ಕಳೆದ ವರ್ಷ ಕರೊನಾ ಆರಂಭದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಮದುವೆ ಸಮಾರಂಭವನ್ನು ಇಲ್ಲಿಯೇ ಸರಳವಾಗಿ ನೆರವೇರಿಸಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts