More

    ರಾಜಕೀಯಕ್ಕೆ ಜೈ… ಕೂಲಿ ಕೆಲಸಕ್ಕೂ ಸೈ..

    ನರಗುಂದ: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಪತ್ನಿಯೊಂದಿಗೆ ನರೇಗಾ ಕೂಲಿ ಕೆಲಸದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
    ನರೇಗಾ ಕಾಮಗಾರಿಯಲ್ಲಿ ಪಾಲ್ಗೊಂಡ ತಾಲೂಕಿನ ಕೊಣ್ಣೂರ ಗ್ರಾಮದ 7ನೇ ವಾರ್ಡ್​ನ ಗ್ರಾಪಂ ಸದಸ್ಯ ಗೂಳಪ್ಪ ಬಸಪ್ಪ ಹುಜರತ್ತಿ ಜಾನಪದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಡೊಳ್ಳು ಕುಣಿತದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಗ್ರಾಮದ ಬೀರಲಿಂಗೇಶ್ವರ ಡೊಳ್ಳಿನ ಮೇಳದ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿ ಹಲವಾರು ಕಾರ್ಯಕ್ರಮ ನೀಡಿದ್ದಾರೆ. ಗ್ರಾಪಂ ಸದಸ್ಯರಾಗುವ ಮೊದಲೂ ಇವರು ನರೇಗಾ ಯೋಜನೆಯಡಿ ನಿರಂತರ ಕೂಲಿ ಮಾಡುತ್ತಿದ್ದರು. ಆದರೀಗ ತಾವೇ ಗ್ರಾಪಂ ಸದಸ್ಯರಾಗಿದ್ದರೂ ಪತ್ನಿ ರೇಣುಕಾ ಅವರೊಂದಿಗೆ ನರೇಗಾದಲ್ಲಿ ಪಾಲ್ಗೊಂಡಿದ್ದಾರೆ. ತನ್ನ ವಾರ್ಡ್​ನ ಜನತೆಗೆ ಎನ್​ಆರ್​ಇಜಿ ಕಾಮಗಾರಿಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
    ‘ಗ್ರಾಪಂ ಸದಸ್ಯತ್ವ ಕೇವಲ ಐದು ವರ್ಷ ಮಾತ್ರ. ಆದರೆ, ನಮಗೆ ಕೂಲಿ ಕಾಯಕವೇ ಜೀವನಕ್ಕೆ ದಾರಿದೀಪ. ಕಳೆದ ವರ್ಷ ಸಂಭವಿಸಿದ ಭೀಕರ ಪ್ರವಾಹ, ಲಾಕ್​ಡೌನ್​ನಿಂದಾಗಿ ನಮ್ಮೂರಿನ ಜನರ ಜೀವನ ಮಟ್ಟ ಇನ್ನೂ ಸುಧಾರಿಸಿಲ್ಲ. ಎನ್​ಆರ್​ಇಜಿ ಬಿಟ್ಟರೆ ಗ್ರಾಮೀಣ ಪ್ರದೇಶಗಳಲ್ಲಿ ಮಾಡಲು ಬೇರೆ ಯಾವುದೇ ಕೆಲಸಗಳಿಲ್ಲ. ನನ್ನ ಅಧಿಕಾರಾವಧಿಯಲ್ಲಿ ವಾರ್ಡ್​ನ ಜನರಿಗೆ ಏನಾದರೂ ಕೆಲಸ ನೀಡಬೇಕೆಂಬುದು ನನ್ನ ಬಯಕೆ. ಆದ್ದರಿಂದ ಈ ಹಿಂದಿನಕ್ಕಿಂತಲೂ ಅತಿ ಹೆಚ್ಚು ಉತ್ಸಾಹದಿಂದ ಪತ್ನಿ ಹಾಗೂ ವಾರ್ಡ್​ನ 40 ಕಾರ್ವಿುಕರೊಂದಿಗೆ ಪ್ರತಿನಿತ್ಯ ನರೇಗಾ ಕೂಲಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ’ ಎನ್ನುತ್ತಾರೆ ಗೂಳಪ್ಪ.
    ಪ್ರಸಕ್ತ ವರ್ಷ ಬದುವು ನಿರ್ವಣ, ದನದ ಕೊಟ್ಟಿಗೆ, ಕೆರೆ, ಕಾಲುವೆಗಳ ಹೂಳೆತ್ತುವುದು ಸೇರಿದಂತೆ ಇದುವರೆಗೆ ಒಟ್ಟು 12 ಕೂಲಿಗಳಾಗಿವೆ. ಪ್ರತಿ ದಿನಕ್ಕೆ 289 ರೂಪಾಯಿ ಕೂಲಿ ಪಡೆಯುತ್ತಿದ್ದೇನೆ ಎಂದು ಗೂಳಪ್ಪ ತಿಳಿಸಿದರು. ಇನ್ನೂ ಗ್ರಾಪಂ ಸದಸ್ಯರೇ ನರೇಗಾ ಕಾಮಗಾರಿಯಲ್ಲಿ ಭಾಗವಹಿಸುವಾಗ ನಾವೇಕೆ ಹೋಗಬಾರದು ಎಂದು ಗ್ರಾಮದ ಅನೇಕ ಯುವಕರು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ತೆರಳುತ್ತಿರುವುದು ಕಂಡು ಬರುತ್ತಿದೆ.

    ಗೂಳಪ್ಪ ಅವರು ಈ ಮೊದಲಿನಿಂದಲೂ ನರೇಗಾ ಕಾಮಗಾರಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಗ್ರಾಪಂ ಸದಸ್ಯರಾದ ಮೇಲೆಯೂ ಅತ್ಯಂತ ಕ್ರಿಯಾಶೀಲರಾಗಿ ನರೇಗಾ ಕೂಲಿ ಕೆಲಸದಲ್ಲಿ ಪಾಲ್ಗೊಳ್ಳುತ್ತಿರುವುದು ಇತರರಿಗೆ ಮಾದರಿಯಾಗಿದೆ.
    | ವೈ.ಬಿ. ಸಂಕನಗೌಡ್ರ ಕೊಣ್ಣೂರ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts