More

    ರಾಜಕಾಲುವೆಯಲ್ಲಿ ಮಾಂಸದ ತ್ಯಾಜ್ಯ

    ಹುಬ್ಬಳ್ಳಿ: ಬೆಳಂಬೆಳಗ್ಗೆ ಮನೆ ಬಾಗಿಲು ತೆರೆದರೆ ಮಾಂಸದ ತ್ಯಾಜ್ಯದ್ದೇ ದರ್ಶನ. ವಾಯುವಿಹಾರಕ್ಕೆ ಹೊರಟರೆ ಈ ತ್ಯಾಜ್ಯದ್ದೇ ದುರ್ನಾತ. ದೇವಸ್ಥಾನಕ್ಕೆ ಹೋದರೂ ಮೊದಲು ಕಾಣಿಸುವುದು ಮಾಂಸ, ಎಲುಬುಗಳ ತುಂಡು, ಕೋಳಿಗಳ ರೆಕ್ಕೆಪುಕ್ಕಗಳು!

    ಕೋಳಿ, ಕುರಿಗಳ ಮಾಂಸದ ತ್ಯಾಜ್ಯ, ದುರ್ನಾತದಿಂದಾಗಿ ಜನರು ಊಟ ಮಾಡಲೂ ಅಸಹ್ಯ ಪಟ್ಟುಕೊಳ್ಳುವಂತಾಗಿದೆ. ಇಲ್ಲಿನ ಜನರು ಮಹಾನಗರ ಪಾಲಿಕೆಗೆ ದೂರು ಕೊಟ್ಟರೂ ಫಲಿತಾಂಶ ಮಾತ್ರ ಶೂನ್ಯ.

    ಇದು ಹುಬ್ಬಳ್ಳಿಯ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ವಿದ್ಯಾನಗರ ಶಿರೂರ ರ್ಪಾನ ದುಸ್ಥಿತಿ. ಟೆಂಡರ್​ಶ್ಯೂರ್ ರಸ್ತೆ, ಬಡಾವಣೆಯಾದ್ಯಂತ ಕಾಂಕ್ರೀಟ್ ರೋಡ್ ಹೊಂದಿರುವ ಶಿರೂರ ಪಾರ್ಕ್ ಸ್ಮಾರ್ಟ್ ಸಿಟಿಯ ಐಕಾನ್ ಎಂದೇ ಹೇಳಲಾಗುತ್ತದೆ. ಆದರೆ, ಇಲ್ಲಿನ ಬಡಾವಣೆ ಒಳಹೊಕ್ಕರೆ ಸಾಕು ಕುರಿ, ಕೋಳಿ ಮಾಂಸದ ತ್ಯಾಜ್ಯ, ರೆಕ್ಕೆ ಪುಕ್ಕಗಳೇ ಕಾಣಿಸುತ್ತವೆ. ಸ್ಮಾರ್ಟ್ ಸಿಟಿಯ ನಿಜವಾದ ಹೂರಣವನ್ನು ಬಯಲಿಗೆಳೆಯಲು

    ಶಿರೂರ ಪಾರ್ಕ್​ನಲ್ಲಿನ ಮಾಂಸದ ತ್ಯಾಜ್ಯವಷ್ಟೇ ಸಾಕು!
    ಇದಕ್ಕೆಲ್ಲ ಕಾರಣ ಶಿರೂರ ರ್ಪಾನ ರಾಜಕಾಲುವೆ ಪಕ್ಕದಲ್ಲಿರುವ ಚಿಕನ್ ಸೆಂಟರ್​ಗಳು. ಕತ್ತಲೆಯಾಯಿತೆಂದರೆ ಸಾಕು, ಇಲ್ಲಿನ ಕೆಲ ಮಾಂಸದ ಅಂಗಡಿಗಳ ಮಾಲೀಕರು ಪಕ್ಕದ ರಾಜಕಾಲುವೆಗೆ ತ್ಯಾಜ್ಯ ಎಸೆಯುತ್ತಾರೆ. ಕಾಗೆ, ಹದ್ದು, ನಾಯಿ, ಹಂದಿಗಳು ಇವುಗಳನ್ನು ಕಚ್ಚಿಕೊಂಡು ಅಕ್ಕಪಕ್ಕದ ಬಡಾವಣೆಯ ಮನೆ, ದೇವಸ್ಥಾನದ ಅಂಗಳಗಳಲ್ಲಿ ಎಸೆಯುತ್ತವೆ. ಬೆಳಗಾಗುವುದರೊಳಗೆ ಮನೆಗಳ ಮಾಳಿಗೆಗಳ ಮೇಲೂ ಮಾಂಸದ ತುಣುಕುಗಳು ಬಿದ್ದಿರುತ್ತವೆ.

    ರಾತ್ರಿ ಸಮಯದಲ್ಲಿ ತ್ಯಾಜ್ಯವನ್ನು ತುಳಿದುಕೊಂಡೇ ಓಡಾಡಬೇಕಾದ ದುಸ್ಥಿತಿ. ಬೇಸಿಗೆಯಲ್ಲಿ ರಾಜಕಾಲುವೆ ನೀರು ಬರಿದಾಗುವುದರಿಂದ ದುರ್ವಾಸನೆ ಹೆಚ್ಚುತ್ತದೆ. ಇದರೊಂದಿಗೆ ಮಾಂಸದ ತ್ಯಾಜ್ಯದಿಂದಾಗಿ ದುರ್ನಾತ ಮತ್ತಷ್ಟು ಹೆಚ್ಚಾಗಿ ಉಸಿರಾಡುವುದೂ ಕಷ್ಟವಾಗುತ್ತದೆ.

    ಶಿರೂರ ರ್ಪಾನಲ್ಲಿನ 3 ದೇವಸ್ಥಾನ ಗಳಿಗೂ ಈ ತ್ಯಾಜ್ಯದ ಕಾಟ ತಪ್ಪಿಲ್ಲ. ದೇವಸ್ಥಾನದ ಪ್ರಾಂಗಣ, ಕೈಕಾಲು ತೊಳೆದುಕೊಳ್ಳಲು ಇಟ್ಟಿರುವ ನೀರಿನ ಸ್ಥಳಗಳಲ್ಲಿಯೂ ಕೋಳಿಯ ಕಟಾವು ಮಾಡಿದ ತಲೆ, ಮಾಂಸದ ತುಣುಕು, ಗರಿಗಳು ಬಿದ್ದಿರುತ್ತವೆ. ನಿತ್ಯ ಬೆಳಗ್ಗೆ ಸ್ವಚ್ಛತೆ ಕೈಗೊಳ್ಳುವ ಪಾಲಿಕೆ ಪೌರ ಕಾರ್ವಿುಕರು ಸಹ ಇಲ್ಲಿನ ಮಾಂಸದ ತ್ಯಾಜ್ಯ ತೆಗೆಯಲು ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ.

    ಈ ಪ್ರತಿಷ್ಠಿತ ಬಡಾವಣೆಯಲ್ಲಿ ಮಾಂಸದ ಅಂಗಡಿಗಳಿಗೆ ಲೈಸೆನ್ಸ್ ಕೊಡಿಸಲು ಪ್ರಭಾವಿ ವ್ಯಕ್ತಿಯ ಕೈವಾಡ, ಕಾಂಚಾಣ ಕೈಯಿಂದ ಕೈಗೆ ಹರಿದಾಡಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಈ ರಸ್ತೆಯಲ್ಲಿ ಓಡಾಡುತ್ತಿದ್ದರೂ ಮಾಂಸದ ಅಂಗಡಿಗಳ ನಿಯಮ ಉಲ್ಲಂಘನೆ ಕಂಡೂ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.ಇದೆಲ್ಲವನ್ನೂ ನಿಯಂತ್ರಿಸಬೇಕಿದ್ದ ಮಹಾನಗರ ಪಾಲಿಕೆ ತನಗೂ, ಇದಕ್ಕೂ ಸಂಬಂಧ ಇಲ್ಲವೆಂಬಂತೆ ವರ್ತಿಸುತ್ತಿದೆ.

    ಪ್ರತ್ಯೇಕ ಬೈಲಾ ಇಲ್ಲ: ಇಲ್ಲಿನ ಜನರು ಮಹಾನಗರ ಪಾಲಿಕೆಗೆ ದೂರು ನೀಡಿದಾಗಲೆಲ್ಲ ಬಡಾವಣೆಗೆ ಭೇಟಿ ನೀಡುವ ಪಾಲಿಕೆ ಸಿಬ್ಬಂದಿ, ಸ್ಥಳ ಪರಿಶೀಲನೆಯ ನಾಟಕವಾಡಿ ಮರಳುವುದು ಸಾಮಾನ್ಯ ಎಂಬಂತಾಗಿದೆ. ಇತ್ತೀಚೆಗೆ ಸೂರತ್​ನಲ್ಲಿ ಬಹಿರಂಗವಾಗಿ ಮಾಂಸದ ತ್ಯಾಜ್ಯ ಎಸೆದ ಅಂಗಡಿಯೊಂದಕ್ಕೆ ಅಲ್ಲಿನ ಮಹಾನಗರ ಪಾಲಿಕೆ 9 ಲಕ್ಷ ರೂ. ದಂಡ ವಿಧಿಸಿತ್ತು. ಆದರೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಹಿರಂಗವಾಗಿ ಮಾಂಸದ ತ್ಯಾಜ್ಯ ಚೆಲ್ಲುವವರಿಗೆ ವಿಧಿಸುವ ದಂಡ 500ರಿಂದ 1,000 ರೂ.ಗಳಷ್ಟೇ. ಇದು ಅಂಗಡಿ ಮಾಲೀಕರಿಗೆ ಲೆಕ್ಕಕ್ಕಿಲ್ಲ. ಮಾಂಸದ ಅಂಗಡಿಗಳಿಗೆ ಪ್ರತ್ಯೇಕ ಬೈಲಾ ಇರುತ್ತದೆ. ಆದರೆ, ಹು-ಧಾ ಮಹಾನಗರ ಪಾಲಿಕೆಯಲ್ಲಿ ಇದುವರೆಗೆ ಹಾಗೆ ಪ್ರತ್ಯೇಕ ಬೈಲಾವನ್ನೇ ರೂಪಿಸಿಲ್ಲ.

    ಮಾಂಸದ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಪಾಲಿಕೆ ತ್ಯಾಜ್ಯದ ವಾಹನಕ್ಕೆ ನೀಡಬೇಕು. ಖುಲ್ಲಾ ಜಾಗ, ನಾಲಾ, ಕೆರೆ, ಹಳ್ಳಗಳಲ್ಲಿ ಎಸೆಯಬಾರದೆಂಬ ನಿಯಮಗಳಿವೆ.

    ತ್ಯಾಜ್ಯ ಎಸೆಯುವ ಮಾಂಸದಂಗಡಿ ಮಾಲೀಕರ ವಿರುದ್ಧ ಏಕಿಲ್ಲ ಕ್ರಮ?
    ಶಿರೂರ ರ್ಪಾನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಟ್ರಸ್ಟ್​ನ ಆನಂದ ಗುರುಸ್ವಾಮಿ ನೇತೃತ್ವದಲ್ಲಿ ಹಲವು ಬಾರಿ ಮಹಾನಗರ ಪಾಲಿಕೆಗೆ ಮನವಿ ಕೊಡಲಾಗಿದೆ. ಮೂರ್ನಾಲ್ಕು ದಿನಗಳ ಹಿಂದೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ಧರಣಿ ನಡೆಸುವುದಾಗಿ ಎಚ್ಚರಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಬಹಿರಂಗವಾಗಿ ತ್ಯಾಜ್ಯ ಎಸೆಯುವ ಮಾಂಸದ ಅಂಗಡಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಲೈಸೆನ್ಸ್ ನೀಡಿದ ನಂತರ ತಮ್ಮ ಕೆಲಸ ಮುಗಿಯಿತೆಂಬಂತೆ ವರ್ತಿಸುತ್ತಿರುವ ಪಾಲಿಕೆ ಅಧಿಕಾರಿಗಳು, ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ಪರೀಕ್ಷಿಸುವ ಗೋಜಿಗೆ ಸಹ ಹೋಗುತ್ತಿಲ್ಲ.

    ಶಿರೂರ ರ್ಪಾನಲ್ಲಿರುವ ಎಲ್ಲ ಮಾಂಸದ ಅಂಗಡಿಗಳು, ನಾನ್​ವೆಜ್ ಹೋಟೆಲ್​ಗಳಿಗೆ ತಕ್ಷಣ ನೋಟಿಸ್ ನೀಡಲಾಗುವುದು. ನಾಲಾ ಸೇರಿ ಬಹಿರಂಗ ಸ್ಥಳದಲ್ಲಿ ಮಾಂಸದ ತುಣುಕುಗಳನ್ನು ಎಸೆಯುವವರ ಲೈಸೆನ್ಸ್ ರದ್ದುಪಡಿಸಲಾಗುವುದು.
    | ಡಾ. ಪ್ರಭು ಬಿರಾದಾರ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts