More

    ರಾಘವೇಶ್ವರ ಶ್ರೀಗಳಿಂದ ಆತ್ಮಲಿಂಗ ದರ್ಶನ

    ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಶುಕ್ರವಾರ ಸಂಜೆ ಪ್ರದೋಷ ಸಮಯದಲ್ಲಿ ಶ್ರೀ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗ ದರ್ಶನ ಪಡೆದುಕೊಂಡರು.

    ಚಾತುರ್ವಸ್ಯ ಪೂರ್ವಭಾವಿಯಾಗಿ ಶ್ರೀಗಳು ಆತ್ಮಲಿಂಗ ಪೂಜೆ ಮಾಡುವ ಪದ್ಧತಿಯಿದೆ. ಆದರೆ, ಸಾರ್ವಜನಿಕರಿಗೆ ಪೂಜಾವಕಾಶ ಮತ್ತು ಗರ್ಭಗೃಹ ಪ್ರವೇಶ ನಿಷೇಧಿಸಿರುವ ಹಿನ್ನೆಲೆಯಲ್ಲಿ ಶ್ರೀಗಳು ನಂದಿ ಮಂಟಪದಲ್ಲಿ ನಿಂತು ದರ್ಶನ ಪಡೆದು ಚಾತುರ್ವಸ್ಯದ ಸರ್ವ ಯಶಸ್ಸಿಗೆ ಪ್ರಾರ್ಥಿಸಿದರು.

    ವೇ. ಕೃಷ್ಣ ಭಟ್ಟ ಷಡಕ್ಷರಿ ಮಹಾಮಂಗಳಾರತಿ ಕೈಗೊಂಡು ಪ್ರಸಾದ ನೀಡಿದರು. ಆಡಳಿತ ಕಾರ್ಯದರ್ಶಿ ಜಿ.ಕೆ. ಹೆಗಡೆ ಇತರರಿದ್ದರು. ಇದೇ ವೇಳೆ ಶ್ರೀಗಳು ಮಹಾಗಣಪತಿ ಮತ್ತು ಪಾರ್ವತಿ ಮಂದಿರಗಳಲ್ಲಿಯೂ ಹೊರಗಿನಿಂದ ದೇವರ ದರ್ಶನ ಪಡೆದರು. ಜು. 5ರಂದು ಶ್ರೀಗಳು ಶ್ರೀಮಠದ ಮೂಲ ತಾಣ ಇಲ್ಲಿನ ಅಶೋಕೆಯಲ್ಲಿ ಚಾತುರ್ವಸ್ಯ ವ್ರತ ಧಾರಣೆ ಮಾಡಲಿದ್ದಾರೆ.

    ಪಾದಪೂಜೆಗೆ ಅವಕಾಶವಿಲ್ಲ
    ಹುಬ್ಬಳ್ಳಿ:
    ದೈವಜ್ಞ ಬ್ರಾಹ್ಮಣ ಸಮಾಜದ ಸಚ್ಚಿದಾನಂದ ಜ್ಞಾನೇಶ್ವರಿ ಭಾರತಿ ಸ್ವಾಮೀಜಿ ತಮ್ಮ ಶಾರ್ವರಿ ಸಂವತ್ಸರದ ಶ್ರೀವ್ಯಾಸ ಪೂಜೆ ಹಾಗೂ 35ನೇ ಚಾತುಮಾಸ್ಯ ವ್ರತವನ್ನು ಜು. 5ರಿಂದ ಸೆಪ್ಟೆಂಬರ್ 2ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರ್ಕಯ ಮೂಲಮಠದಲ್ಲಿ ಅನುಷ್ಠಾನಗೊಳಿಸಲು ನಿಶ್ಚಯಿಸಿದ್ದಾರೆ ಎಂದು ಶ್ರೀಮಠದ ಟ್ರಸ್ಟ್ ಕಮಿಟಿ ಸದಸ್ಯ ವಿಜಯ ವೆರ್ಣೆಕರ ತಿಳಿಸಿದರು.

    ನಗರದ ದೈವಜ್ಞ ಭವನದಲ್ಲಿ ಶುಕ್ರವಾರ ನಡೆದ ದೈವಜ್ಞ ಬ್ರಾಹ್ಮಣ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು. ದೇಶ ವಿದೇಶಗಳಲ್ಲಿರುವ ದೈವಜ್ಞ ಬ್ರಾಹ್ಮಣರ ಗುರುಪೀಠ ರ್ಕ. ಈ ಬಾರಿಯ ಚಾತುಮಾಸ್ಯವನ್ನು ಸರ್ಕಾರದ ನಿಯಮಗಳ ಪ್ರಕಾರ ಆಚರಿಸಲಾಗುವುದು. ಕೋವಿಡ್​-19 ಮಹಾಮಾರಿಯಿಂದ ವ್ರತಾಚರಣೆ ವೇಳೆ ಗುರುಗಳ ಮತ್ತು ಶಿಷ್ಯರ ಸುರಕ್ಷತೆ ಮುಖ್ಯವಾಗಿರುವುದರಿಂದ ಭಕ್ತರು ಕೆಲವೊಂದು ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು. ಪಾದಪೂಜೆ, ವಿಶೇಷ ಪೂಜೆ ಹಾಗೂ ಉತ್ಸವಗಳನ್ನು ಶ್ರೀಮಠದಲ್ಲಿ ಆಚರಿಸುವುದನ್ನು ನಿರ್ಬಂಧಿಸಲಾಗಿದೆ. ಶ್ರೀಗಳಿಂದ ತೀರ್ಥಪ್ರಸಾದ ಮಂತ್ರಾಕ್ಷತೆ ನೀಡಲಾಗುವುದಿಲ್ಲ. ಶ್ರೀಗಳಿಗೆ ಯಾವುದೇ ತರಹದ ಸನ್ಮಾನ ಮಾಡಲು ಅವಕಾಶವಿರುವುದಿಲ್ಲ ಎಂದು ಸಭೆಯಲ್ಲಿ ವೆರ್ಣೆಕರ ತಿಳಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ವೆರ್ಣೆಕರ್, ಯುವಕ ಸಂಘದ ಅಧ್ಯಕ್ಷ ಕುಂದನ್ ವೆರ್ಣೆಕರ, ಮಹಿಳಾ ಮಂಡಳದ ಅಧ್ಯಕ್ಷೆ ಶೈಲಾ ಶೇಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts