More

    ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ

    ಬೀದರ್: ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ, ಸಮಾನ ವೇತನ ಹಾಗೂ ಇತರೆ ಸೌಲಭ್ಯ ನೀಡಲು ಆಗ್ರಹಿಸಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಂಘದ ಜಿಲ್ಲಾ ಘಟಕದಿಂದ ಮಂಗಳವಾರ ಇಲ್ಲಿ ಧರಣಿ ನಡೆಸಲಾಯಿತು.
    ಇಲ್ಲಿನ ಈಶಾನ್ಯ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ನೌಕರರು, ವೇತನ ತಾರತಮ್ಯ ಸೇರಿ ಹಲವು ಸೌಲಭ್ಯಗಳಿಂದ ಸಾರಿಗೆ ಸಂಸ್ಥೆ ನೌಕರರು ವಂಚಿತಗೊಂಡಿದ್ದಾರೆ. ಸರ್ಕಾರಿ ನೌಕರರಂತೆ ಪರಿಗಣಿಸಿ ಎಲ್ಲ ಸೌಲಭ್ಯ ನೀಡಲು ಹಲವು ಬಾರಿ ಮನವಿ ಸಲ್ಲಿಸಿದರೂ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸರ್ಕಾರಿ ನೌಕರರಿಗಿಂತ ಸಾರಿಗೆ ನೌಕರರ ವೇತನ ಕಮ್ಮಿ ಇದೆ. ಕಳೆದ 25 ವರ್ಷದಿಂದ ಈ ತಾರತಮ್ಯ ಮುಂದುವರಿದಿದೆ. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿ, ಶೇ. 30ರಷ್ಟು ಮೂಲವೇತನ ಹೆಚ್ಚಿಸಲಾಗಿದೆ. ಶೇ. 45.25ರಷ್ಟು ತುಟ್ಟಿ ಭತ್ಯೆ ಮೂಲ ವೇತನದಲ್ಲಿ ವಿಲೀನಗೊಳಿಸಿ ಆರ್ಥಿಕ ಸೌಲಭ್ಯ ನೀಡಲಾಗಿದೆ. ಆದರೆ ಸಾರಿಗೆ ಸಂಸ್ಥೆಯ ನೌಕರರಿಗೆ ಈವರೆಗೆ ವೇತನ ಪರಿಷ್ಕರಣೆಯಾಗಿಲ್ಲ ಎಂದು ದೂರಿದ್ದಾರೆ.
    ಸಾರಿಗೆ ನೌಕರರಿಗೆ ಕೈಗಾರಿಕಾ ಒಪ್ಪಂದಗಳ ನಿಟ್ಟಿನಲ್ಲಿ ಕೊಡಬೇಕಿದ್ದ ಅನೇಕ ಸೌಲಭ್ಯ ನೀಡಿಲ್ಲ. ಬೇಡಿಕೆ ಈಡೇರಿಸುವಂತೆ ಎಲ್ಲ ನಾಲ್ಕು ನಿಗಮಗಳಿಂದ ಸತತ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ವೇತನ ಶ್ರೇಣಿಯನ್ನು ಕಳೆದ ಜನವರಿ 1ರಿಂದ ಅನ್ವಯಿಸುವಂತೆ ಮಾಡಿ, ಸರ್ಕಾರಿ ನೌಕರರೆಂದು ಘೋಷಿಸಿ ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷ ಕಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಜೀವನ್, ಪ್ರಮುಖರಾದ ಶಿವಕುಮಾರ, ನಾಗಶೆಟ್ಟಿ, ಅವಿನಾಶ, ಸೋಮನಾಥ ದಾಮಾ, ಸಂತೋಷ ಬಸವಕಲ್ಯಾಣ, ರಾಜಪ್ಪ ಹುಮನಾಬಾದ್, ಶಿವಯೋಗಿ, ಅನೀಲ ಪಾಟೀಲ್, ಆನಂದ ಸಾಗರ, ಅನಂತಕುಮಾರ, ಸಿದ್ಧಲಿಂಗ, ಗುರು ಬಾವಗಿ, ಪಂಚಯ್ಯ ಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts