More

    ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಿ : ಡಿವೈಎಸ್‌ಪಿ ಜಿ.ಯು. ಸೋಮೇಗೌಡ ಸಲಹೆ

    ಚಾಮರಾಜನಗರ : ರಸ್ತೆ ಸುರಕ್ಷತಾ ವಿಷಯದಲ್ಲಿ ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಡಿವೈಎಸ್‌ಪಿ ಜಿ.ಯು. ಸೋಮೇಗೌಡ ಹೇಳಿದರು.

    ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ಎದುರು ಸೋಮವಾರ ರಸ್ತೆ ಸುರಕ್ಷತಾ ಸಪ್ತಾಹ ಅರಿವು ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಸ್ತೆಯಲ್ಲಿ ನಿತ್ಯ ನಡೆಯುವ ಸಾವು-ನೋವುಗಳಿಗೆ ತಪ್ಪುಗಳೇ ಕಾರಣವಾಗಿರುತ್ತವೆ. ತ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡುವುದು, ವೇಗದ ಚಾಲನೆ ಹೀಗೆ ಹಲವು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದಾಗ ಅಪಘಾತ ಸಂಭವಿಸುತ್ತದೆ ಎಂದರು.


    ಅಲ್ಲದೇ, ಕೆಲವರು ತಮ್ಮ ತಪ್ಪಿನಿಂದ ಎದುರು ಬರುವ ಅಥವಾ ಪಕ್ಕದಲ್ಲಿ ಬರುವ ಜೀವಗಳು ಬಲಿಯಾಗುತ್ತವೆ. ಚಾಲಕರು ವಾಹನದಲ್ಲಿ ಕುಳಿತುಕೊಂಡಾಗ ತಮ್ಮ ಮಡದಿ, ಮಕ್ಕಳು ಹಾಗೂ ಅವಲಂಬಿತರನ್ನು ನೆನಪಿಸಿಕೊಳ್ಳಬೇಕು. ಜೀವಕ್ಕಿಂತ ಏನೂ ಮುಖ್ಯವಲ್ಲ ಎಂಬುದನ್ನು ತಿಳಿದು ವಾಹನ ಚಾಲನೆ ಮಾಡಬೇಕು ಎಂದು ಮನವಿ ಮಾಡಿದರು.


    ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಮೊಬೈಲ್ ಹಿಡಿದು ಮಾತನಾಡುತ್ತ ಚಾಲನೆ ಮಾಡುವುದನ್ನು ನಿಲ್ಲಿಸಬೇಕು. ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಬಾರದು. ಈ ರೀತಿ ರಸ್ತೆ ಸಂಚಾರ ನಿಯಮಗಳನ್ನು ಅನುಸರಿಸಿದರೆ ಅಪಘಾತಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ತಿಳಿಸಿದರು.


    ಪಟ್ಟಣ ಪೊಲೀಸ್ ಠಾಣೆಯ ಪಿಎಸ್‌ಐ ಮಹೇಶ್ ಮಾತನಾಡಿ, ವಾಹನ ಚಾಲಕರು ಹಾಗೂ ಮಾಲೀಕರು ಜೋಪಾನವಾಗಿ ವಾಹನಗಳ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಚಾಲನಾ ಪರವಾನಿಗೆ, ಆರ್‌ಸಿ, ವಿಮೆ ಇತರ ದಾಖಲೆಗಳು ಇರಬೇಕು. ಇವೆಲ್ಲ ದಾಖಲೆಗಳು ಇಲ್ಲದೆ ವಾಹನ ಚಲಾಯಿಸಬಾರದು. ಒಂದು ವೇಳೆ ನಿಯಮ ಉಲಂಘಿಸಿದರೆ ದಂಡ ಕಟ್ಟ ಬೇಕಾಗುತ್ತದೆ ಎಂದರು.


    ಪಟ್ಟಣ ಪೊಲೀಸ್ ಠಾಣೆ ಮುಂಭಾಗದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿ ಬೈಕ್ ಜಾಥಾ ನಡೆಸಿ ಜಾಗೃತಿ ಮೂಡಿಸಿದರು. ಸಿಪಿಐ ಕೃಷ್ಣಪ್ಪ, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts