More

    ರಸ್ತೆ ವಿಸ್ತರಣೆಯಾಗದೆ ತೊಂದರೆ

    ಪಿರಿಯಾಪಟ್ಟಣ: ಪಟ್ಟಣದ ಬಿ.ಎಂ. ರಸ್ತೆ ಫುಟ್‌ಪಾತ್‌ವರೆಗೆ ವಿಸ್ತರಣೆ ಆಗದೆ ಪ್ರತಿನಿತ್ಯವೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

    ಸುಮಾರು 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 275 ಆಗಿರುವ ಬಿ.ಎಂ. ರಸ್ತೆಯು ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿದೆ. ಮೈಸೂರು- ಮಡಿಕೇರಿಯ ಮುಖ್ಯ ಸಂಪರ್ಕ ರಸ್ತೆ ಇದಾಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯ ಮೂಲಕವೇ ಸಾಗುತ್ತವೆ. ವಾರಾಂತ್ಯದ ದಿನಗಳಲ್ಲಿ ಮೈಸೂರು, ಬೆಂಗಳೂರು ಮತ್ತು ಇತರ ಜಿಲ್ಲೆಗಳಿಂದ ಕೊಡಗಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು ಈ ರಸ್ತೆಯಲ್ಲಿ ವಾಹನಗಳ ಮೂಲಕ ಸಾಗುತ್ತಾರೆ.

    ವಾರಾಂತ್ಯದ ದಿನಗಳಲ್ಲಿ ವಾಹನಗಳ ದಟ್ಟಣೆಯಿಂದ ಪಟ್ಟಣದ ಜನರು ಅನುಭವಿಸುವ ತೊಂದರೆ ಹೇಳತೀರದಾಗಿದೆ. ಈ ಮೊದಲು ಕೇವಲ ದ್ವಿಪಥ ರಸ್ತೆಯಾಗಿದ್ದ ಬಿ.ಎಂ. ರಸ್ತೆಯನ್ನು ಮುಖ್ಯರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮಾಲೀಕರು ಮತ್ತು ಕಟ್ಟಡಗಳ ಮಾಲೀಕರ ವಿರೋಧದ ನಡುವೆಯೂ 2007-08 ರಲ್ಲಿ ಚತುಷ್ಪಥ ರಸ್ತೆಯಾಗಿ ಪರಿವರ್ತಿಸಲಾಯಿತು. ಆ ಸಂದರ್ಭದಲ್ಲಿ ರಸ್ತೆ ವಿಸ್ತರಣೆಗಾಗಿ ಸಾರ್ವಜನಿಕರು ಹೋರಾಟದ ಹಾದಿಯನ್ನು ಹಿಡಿದು ಯಶಸ್ವಿಯೂ ಆಗಿದ್ದಾರೆ.

    ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಬಹುಮುಖ್ಯವಾಗಿ ನಿರ್ಮಿಸಬೇಕಿದ್ದ ರಸ್ತೆ ಬದಿಯ ಚರಂಡಿ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದ್ದು, ರಸ್ತೆಯ ಮುಖ್ಯಭಾಗದಿಂದ ಕನಿಷ್ಠ 10 ಮೀಟರ್ ದೂರವಿರಬೇಕಿದ್ದ ಚರಂಡಿಯು ಕೆಲವು ಕಡೆ 8 ಮೀಟರ್ ಗಳಿಗಿಂತಲೂ ಕಡಿಮೆ ದೂರುದಲ್ಲಿದೆ. ಮಳೆಗಾಲದಲ್ಲಿ ಮುಖ್ಯರಸ್ತೆಗೆ ಬಿದ್ದ ನೀರು ಚರಂಡಿ ಮೂಲಕ ಸರಾಗವಾಗಿ ಹರಿದು ಹೋಗಲು ಸಮರ್ಪಕವಾದ ವ್ಯವಸ್ಥೆ ಮಾಡಿಲ್ಲ. ಚತುಷ್ಪಥ ರಸ್ತೆ ನಿರ್ಮಾಣಗೊಂಡು 15 ವರ್ಷಗಳಾಗುತ್ತಾ ಬಂದರೂ ಕೆಲವು ಕಡೆ ಇನ್ನೂ ಚರಂಡಿ ವ್ಯವಸ್ಥಿತವಾಗಿ ನಿರ್ಮಾಣವಾಗಿಲ್ಲ. ನಿಯಮಿತವಾಗಿ ಚರಂಡಿಯ ಕಸ ತೆಗೆಯದಿರುವುದರಿಂದ ಚರಂಡಿಯು ಹಲವು ಕಡೆ ಕಸದ ತೊಟ್ಟಿಯಂತಾಗಿದೆ.

    ಪ್ರತ್ಯೇಕ ನಿಲ್ದಾಣ ವ್ಯವಸ್ಥೆ ಇಲ್ಲ: ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾದಂತೆ ವಾಹನಗಳ ಪಾರ್ಕಿಂಗ್ ಸಮಸ್ಯೆ ತೀವ್ರವಾಗಿ ಕಾಡತೊಡಗಿದೆ. ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರ ವಾಹನಗಳಿಗೆ ಪ್ರತ್ಯೇಕ ನಿಲ್ದಾಣದ ವ್ಯವಸ್ಥೆ ಇಲ್ಲದಿರುವುದರಿಂದ ಎಲ್ಲೆಂದರಲ್ಲಿ ವಾಹನಗಳು ನಿಂತಿರುತ್ತವೆ. ಸಾರ್ವಜನಿಕರ ಓಡಾಟಕ್ಕೆ ಸೀಮಿತವಾಗಿರಬೇಕಿದ್ದ ಫುಟ್‌ಪಾತ್‌ನಲ್ಲಿ ವಾಹನಗಳ ನಿಲುಗಡೆಯ ಜತೆಗೆ ತಳ್ಳುಗಾಡಿ ವ್ಯಾಪಾರಿಗಳು ವ್ಯಾಪಾರಕ್ಕೆ ತಮ್ಮ ಗಾಡಿಗಳನ್ನು ನಿಲ್ಲಿಸಿಕೊಳ್ಳುವುದರಿಂದ ಸಾರ್ವಜನಿಕರ ಓಡಾಟಕ್ಕೆ ಮೀಸಲಿರಬೇಕಿದ್ದ ಫುಟ್‌ಪಾತ್ ಪಟ್ಟಣದ ನಾಗರಿಕರಿಗೆ ಇಲ್ಲವಾಗಿದೆ. ರಸ್ತೆ ಬದಿಯಿಂದ ಫುಟ್‌ಪಾತ್‌ವರೆಗಿನ ಜಾಗ ಸಮರ್ಪಕವಾದ ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ರಸ್ತೆಯಲ್ಲಿ ಓಡಾಡುವುದೇ ಒಂದು ದುಸ್ಸಾಹಸವಾಗಿದೆ.

    ಕೊಟ್ಟ ಭರವಸೆ ಈಡೇರಿಲ್ಲ: ಪಟ್ಟಣ ವ್ಯಾಪ್ತಿಯಲ್ಲಿರುವ ಚತುಷ್ಪಥ ರಸ್ತೆಯ ಎರಡು ಬದಿಯನ್ನು ಚರಂಡಿಯವರೆಗೆ ವಿಸ್ತರಣೆ ಮಾಡಿ ಡಾಂಬರ್ ಹಾಕಿಸುವಂತೆ ಪುರಸಭೆ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಶಾಸಕರು ವಿಶೇಷ ಅನುದಾನ ತಂದು ಚರಂಡಿವರೆಗೆ ರಸ್ತೆ ವಿಸ್ತರಣೆ ಮಾಡಿ ಡಾಂಬರ್ ಹಾಕಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಈವರೆಗೂ ಈಡೇರಿಲ್ಲ.

    ಪುರಸಭೆ ವ್ಯಾಪ್ತಿಯಲ್ಲಿ ನಡೆದ ಹಲವು ಸಭೆಗಳಲ್ಲಿ ಸಂಸದ ಪ್ರತಾಪ್ ಸಿಂಹ ಸಹ ರಸ್ತೆ ವಿಸ್ತರಣೆಗೆ ವಿಶೇಷ ಅನುದಾನ ನೀಡುವುದಾಗಿ ತಿಳಿಸಿದ್ದರೂ ಅದೂ ಕಾರ್ಯಗತವಾಗಿಲ್ಲ. ಮಳೆಗಾಲದಲ್ಲಿ ಈ ರಸ್ತೆಯ ಬದಿಯ ಗುಂಡಿಗಳಲ್ಲಿ ಸಂಪೂರ್ಣ ನೀರು ತುಂಬಿ ಫುಟ್‌ಪಾತ್ ಕೆಸರುಮಯವಾಗಿರುತ್ತದೆ. ಸಾರ್ವಜನಿಕರು ಫುಟ್‌ಪಾತ್‌ನಲ್ಲಿಯೂ ಓಡಾಡುವಂತಿಲ್ಲ ಹಾಗೂ ವಾಹನ ದಟ್ಟಣೆ ಇರುವ ಮುಖ್ಯರಸ್ತೆಗೂ ಬರಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ.

    3 ತಿಂಗಳಾದರೂ ದುರಸ್ತಿಯಾಗದ ಸಿಗ್ನಲ್: ಪಟ್ಟಣದ ಬಿ.ಎಂ. ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಲು ವರ್ಷದ ಹಿಂದೆ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಇದರಿಂದಾಗಿ ನಾಲ್ಕು ದಿಕ್ಕುಗಳಿಂದ ಬಸವೇಶ್ವರ ಸರ್ಕಲ್ ಕಡೆಗೆ ಒಮ್ಮೆಲೇ ಬರುತ್ತಿದ್ದ ವಾಹನಗಳನ್ನು ನಿಯಂತ್ರಿಸಲು ಅನುಕೂಲವಾಗಿದೆ. ಯುಜಿಡಿ ಕಾಮಗಾರಿಗಾಗಿ ಬಸವೇಶ್ವರ ವೃತ್ತದಲ್ಲಿ ಗುಂಡಿ ತೆಗೆಯುತ್ತಿದ್ದ ಸಂದರ್ಭದಲ್ಲಿ ಟ್ರಾಫಿಕ್ ಸಿಗ್ನಲ್‌ನ ವೈರ್‌ಗಳಿಗೆ ಹಾನಿಯಾಗಿದ್ದು, ಇದರಿಂದಾಗಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

    ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಕೆಟ್ಟು ಹೋದ ಬಳಿಕ ಅಲ್ಲಿ ನಿಂತು ವಾಹನಗಳನ್ನು ನಿಯಂತ್ರಿಸಬೇಕಾದ ಪೊಲೀಸರು ಇತ್ತ ತಲೆಯೇ ಹಾಕುತ್ತಿಲ್ಲ. ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಪೊಲೀಸರಲ್ಲಿ ಕೇಳಿದರೆ ಅವರು ಪುರಸಭೆ ಮುಖ್ಯಾಧಿಕಾರಿಗಳತ್ತ ಕೈ ತೋರಿಸುತ್ತಾರೆ. ನಮ್ಮದೇನಿದ್ದರೂ ನಿಯಂತ್ರಣ ಕೆಲಸ ಮಾತ್ರ. ನಿರ್ವಹಣೆ ಪುರಸಭೆಯವರದ್ದು ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಬೆಳಗಿನ ವೇಳೆ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳ ಆರಂಭದ ಸಮಯ ಮತ್ತು ಸಂಜೆ ಸಮಯದಲ್ಲಿ ಬಸವೇಶ್ವರ ವೃತ್ತದಲ್ಲಿ ವಾಹನದ ಮೂಲಕ ಹಾದು ಹೋಗುವುದೇ ಒಂದು ಸಾಹಸದ ವಿಷಯವಾಗಿದೆ. ವಾರಾಂತ್ಯದ ದಿನಗಳಲ್ಲಿ ವಿಪರೀತ ವಾಹನಗಳ ದಟ್ಟಣೆಯಿಂದಾಗಿ ಟ್ರಾಫಿಕ್ ಅವ್ಯವಸ್ಥೆಯನ್ನು ಶಪಿಸಿ ಹೋಗುವವರೇ ಹೆಚ್ಚು. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಪಟ್ಟಣದ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸುತ್ತಾರೋ ಕಾದು ನೋಡಬೇಕಿದೆ.

    ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಯುಜಿಡಿ ಕಾಮಗಾರಿ ಸಂದರ್ಭದಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯ ಕೇಬಲ್‌ಗಳಿಗೆ ಹಾನಿಯಾಗಿತು.್ತ ಇದೀಗ ಅದನ್ನು ಸರಿಪಡಿಸಲಾಗಿದೆ. 15 ದಿನಗಳ ಹಿಂದೆಯೇ ದುರಸ್ತಿಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ಬಂದು ಸ್ಥಳೀಯ ಪೊಲೀಸರ ಉಸ್ತುವಾರಿಗೆ ನೀಡಲಾಗಿದೆ. ಆದರೆ ಪೊಲೀಸ್ ಸಿಬ್ಬಂದಿ ಅದನ್ನು ಚಾಲನೆ ಮಾಡುತ್ತಿಲ್ಲ. ಕಾರಣ ಏನೆಂಬುದು ತಿಳಿದಿಲ್ಲ. ಬಿ.ಎಂ. ರಸ್ತೆ ಚರಂಡಿಯವರೆಗೆ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.
    ಮಹೇಂದ್ರ, ಪುರಸಭೆ ಮುಖ್ಯಾಧಿಕಾರಿ, ಪಿರಿಯಪಟ್ಟಣ

    ಬಸವೇಶ್ವರ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಸರಿಪಡಿಸಲಾಗಿದೆ. ಹಲವು ಸಂದರ್ಭಗಳಲ್ಲಿ ಟ್ರಾಫಿಕ್ ಸಿಗ್ನಲ್‌ನಿಂದಾಗಿಯೇ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಾದ ಬಿ.ಎಂ. ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಟ್ರಾಫಿಕ್ ಸಿಗ್ನಲ್ ಚಾಲನೆ ಮಾಡದೆ ಹಾಗೆಯೇ ವಾಹನಗಳ ಓಡಾಟವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ.
    ಕೆ.ವಿ. ಶ್ರೀಧರ್, ಇನ್ಸ್‌ಪೆಕ್ಟರ್, ಪಿರಿಯಾಪಟ್ಟಣ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts