More

    ರಸ್ತೆ ಪಕ್ಕ ಮೀನು ಮಾರಾಟಕ್ಕೆ ವಿರೋಧ

    ಯಲ್ಲಾಪುರ: ಪಟ್ಟಣ ವ್ಯಾಪ್ತಿಯಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇದ್ದರೂ, ಕೆಲ ವ್ಯಾಪಾರಿಗಳು ಹೊರಗಡೆ ಮೀನು ಮಾರಾಟ ಮಾಡುತ್ತಿರುವ ಕುರಿತು ಮೀನು ಮಾರಾಟಗಾರರಿಂದ ವಿರೋಧ ವ್ಯಕ್ತವಾಗುತ್ತಿದೆ.

    ಕಳೆದ 3-4 ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯ ಪಕ್ಕ ಸಬಗೇರಿ ಬಳಿ, ತೋಟಗಾರಿಕೆ ಕಚೇರಿ ಬಳಿ, ಬಸ್ ನಿಲ್ದಾಣ ರಸ್ತೆಯಲ್ಲಿ ಹೀಗೆ ಕಂಡಕಂಡಲ್ಲಿ ಮೀನು ವ್ಯಾಪಾರಿಗಳು ಮೀನು ಮಾರುತ್ತಿದ್ದಾರೆ. ಆದರೆ ಪಪಂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಂಬ ಆಕ್ಷೇಪ ಕೇಳಿ ಬಂದಿದೆ. ಪಟ್ಟಣ ವ್ಯಾಪ್ತಿಯ ಕಾಯಂ ಮೀನು ವ್ಯಾಪಾರಿಗಳೂ ಕೆಲವರು ರಸ್ತೆಯ ಪಕ್ಕ ಕಂಡಕಂಡಲ್ಲಿ ಮೀನು ಮಾರುತ್ತಿರುವುದು ಕಂಡು ಬರುತ್ತಿದೆ. ಅಲ್ಲದೆ, ಅಂಕೋಲಾದಿಂದ ಕೆಲ ಮೀನು ವ್ಯಾಪಾರಿಗಳೂ ಹೊರಗಡೆ ಮೀನು ಮಾರುತ್ತಿದ್ದು, ಅದಕ್ಕೆ ಕೆಲ ಪಪಂ ಸದಸ್ಯರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

    ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ವ್ಯವಸ್ಥಿತವಾಗಿ ಅವಕಾಶ ಕಲ್ಪಿಸಲಾಗಿದೆ. ಅದನ್ನು ಬಿಟ್ಟು ಬೇರೆಡೆ ಅಕ್ರಮವಾಗಿ ಮೀನು ಮಾರಾಟವನ್ನು ಕೆಲವರು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಹೊರಗೆ ಮಾರುವ ಬದಲು ಮಾರುಕಟ್ಟೆಯಲ್ಲೇ ಅಧಿಕೃತ ಟೆಂಡರ್ ಪಡೆದು ಮಾರಾಟ ಮಾಡಲು ಅವಕಾಶವಿದೆ. ಹೀಗಿದ್ದೂ ಹೊರಗಡೆ ಮೀನು ಮಾರಾಟ ಮಾಡುವುದರಿಂದ ಮಾರುಕಟ್ಟೆಯಲ್ಲಿರುವ ವ್ಯಾಪಾರಸ್ಥರಿಗೆ ಹಾಗೂ ಪಪಂಗೆ ನಷ್ಟ ಉಂಟಾಗುತ್ತದೆ. ಕಾರಣ ಮಾರುಕಟ್ಟೆಯಿಂದ ಹೊರಗಡೆ ಮೀನು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

    | ಬಶೀರ್ ಸೈಯದ್ ಮೀನು ಮಾರಾಟಗಾರರ ಸಂಘದ ಕಾರ್ಯದರ್ಶಿ

    ಸ್ಥಳೀಯ ಕೆಲವರ ಅಸಹಕಾರ ಮತ್ತು ಒತ್ತಡದಿಂದಾಗಿ ಈ ರೀತಿಯ ಅವ್ಯವಸ್ಥೆಗೆ ಕಾರಣವಾಗುತ್ತಿದೆ. ತರಕಾರಿ ಅಥವಾ ಮೀನು-ಮಾಂಸಗಳನ್ನು ಹೊರಗಿನವರು ಬಂದು ಮಾರದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

    | ಅರುಣ ನಾಯ್ಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts