More

    ರಸ್ತೆ ದುರಸ್ತಿಗೆ ವಿದ್ಯಾರ್ಥಿಗಳ ಮನವಿ

    ಮಡಿಕೇರಿ: ಗುಂಡಿ ಬಿದ್ದಿರುವ ನಗರದ ರಸ್ತೆಗಳ ದುರಸ್ತಿ ಕಾರ್ಯದ ಬಗ್ಗೆ ನಾಗರಿಕ ವಲಯದಲ್ಲಿ ಸಂಶಯಗಳು ಮೂಡಿರುವ ಬೆನ್ನಲ್ಲೇ ಸಮಸ್ಯೆಯಿಂದ ಬೇಸತ್ತ ಮಕ್ಕಳು ಖುದ್ದು ನಗರಸಭಾ ಪೌರಾಯುಕ್ತರಿಗೆ ಮನವಿ ಸಲ್ಲಿಸಿ ಕಾಮಗಾರಿಯನ್ನು ತಕ್ಷಣ ಆರಂಭಿಸುವಂತೆ ಒತ್ತಾಯಿಸಿದ ಪ್ರಸಂಗ ಶುಕ್ರವಾರ ನಡೆದಿದೆ.

    ಮಕ್ಕಳ ಮನವಿಗೆ ಮಣಿದ ಪೌರಾಯುಕ್ತ ರಮೇಶ್, ಗೌಳಿಬೀದಿ ರಸ್ತೆಯನ್ನು ಪರಿಶೀಲಿಸಿ ಮುಂದಿನ ಹದಿನೈದು ದಿನಗಳೊಳಗೆ ದುರಸ್ತಿ ಕಾರ್ಯ ಕೈಗೊಳ್ಳುವ ಭರವಸೆ ನೀಡಿದರು.

    ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ದರ್ಬಾರ್‌ನಲ್ಲಿ ಕಾಲಕಳೆಯುತ್ತಿರುವ ನಗರಸಭೆಯ ನಿರ್ಲಕ್ಷೃದಿಂದ ನಗರದ ರಸ್ತೆಗಳೆಲ್ಲವೂ ಹದಗೆಟ್ಟು ಅದೆಷ್ಟೋ ತಿಂಗಳುಗಳೇ ಕಳೆದಿದ್ದರೂ ದುರಸ್ತಿ ಕಾರ್ಯಕ್ಕೆ ಮಾತ್ರ ಇನ್ನೂ ಕಾಲ ಕೂಡಿ ಬಂದಿಲ್ಲ. ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆಯ ಬಿಸಿ ಮುಟ್ಟಿಸಿದ್ದರೂ ನಿದ್ರಾವಸ್ಥೆಯಿಂದ ನಗರಸಭೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಖುದ್ದು ಜಿಲ್ಲಾಧಿಕಾರಿಯೇ ನಗರಸಭೆಯ ಆಡಳಿತಾಧಿಕಾರಿಯಾಗಿದ್ದರೂ ರಸ್ತೆಗಳ ಗುಂಡಿಗಳಿಗೆ ಮುಕ್ತಿ ದೊರೆತ್ತಿಲ್ಲ.

    ಹಳ್ಳ, ಕೊಳ್ಳಗಳಿಂದ ಕೂಡಿರುವ ರಸ್ತೆಗಳಿಂದ ವಾಹನ ಚಾಲಕರು ಹಾಗೂ ಪಾದಚಾರಿಗಳು ಪರದಾಡುತ್ತಲೇ ಇದ್ದಾರೆ. ಯಾರ ಮಾತಿಗೂ ನಗರಸಭೆಯ ಅಧಿಕಾರಿಗಳು ಬೆಲೆ ನೀಡುತ್ತಿಲ್ಲವೆಂದು ಮನಗಂಡ ಗೌಳಿಬೀದಿಯ ವಿದ್ಯಾರ್ಥಿಗಳು ತಾವೇ ಅಧಿಕಾರಿಗಳನ್ನು ಎಚ್ಚರಿಸುವ ಕಾರ್ಯಕ್ಕೆ ಶುಕ್ರವಾರ ಮುಂದಾದರು. ಪೌರಾಯುಕ್ತರ ಕಚೇರಿಗೆ ತೆರಳಿದ ಹತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಗೌಳಿಬೀದಿಯ ಕಲ್ಪವೃಕ್ಷ ಕಟ್ಟಡ ವ್ಯಾಪ್ತಿಯ ಒಳರಸ್ತೆಯನ್ನು ದುರಸ್ತಿ ಪಡಿಸುವಂತೆ ಒತ್ತಾಯಿಸಿದರು. ಸ್ಥಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿದರು.

    ಮಕ್ಕಳ ಮನವಿಗೆ ಮಣಿದ ಪೌರಾಯುಕ್ತ ರಮೇಶ್, ಇತರ ಅಧಿಕಾರಿಗಳೊಂದಿಗೆ ತೆರಳಿ ಹದಗೆಟ್ಟ ರಸ್ತೆಯನ್ನು ಪರಿಶೀಲಿಸಿದರು. ಗುಂಡಿ ಬಿದ್ದ ರಸ್ತೆಗಳಿಂದ ತಮಗಾಗುತ್ತಿರುವ ತೊಂದರೆಯನ್ನು ವಿದ್ಯಾರ್ಥಿಗಳು ವಿವರಿಸಿದರು. ಇದಕ್ಕೆ ಸ್ಪಂದಿಸಿದ ಪೌರಾಯುಕ್ತರು ಮುಂದಿನ ಹದಿನೈದು ದಿನಗಳೊಳಗೆ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಮತ್ತು ತಮ್ಮ ವಿನೂತನ ಪ್ರಯತ್ನಕ್ಕೆ ವಿದ್ಯಾರ್ಥಿಗಳು ಹೆಮ್ಮೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts