More

    ರಸ್ತೆ ದುರಸ್ತಿಗೆ ಆಗ್ರಹಿಸಿ ನಂಜರಾಯಪಟ್ಟಣ ಗ್ರಾಮಸ್ಥರ ಪ್ರತಿಭಟನೆ

    ಕುಶಾಲನಗರ: ಕುಶಾಲನಗರ ತಾಲೂಕು ವ್ಯಾಪ್ತಿಯ ರಸುಲ್‌ಪುರದಿಂದ ದುಬಾರೆ ತನಕ ಹದಗೆಟ್ಟಿರುವ ರಾಜ್ಯ ಹೆದ್ದಾರಿ ದುರಸ್ತಿಗೆ ಒತ್ತಾಯಿಸಿ ಜನಪ್ರತಿನಿಧಿಗಳು, ನಂಜರಾಯಪಟ್ಟಣ ಗ್ರಾಮ ಸ್ಥರು ಗುರುವಾರ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.


    ರಾಜ್ಯ ಹೆದ್ದಾರಿ-91ರಲ್ಲಿ ಗುಡ್ಡೆಹೊಸೂರು-ಸಿದ್ದಾಪುರ ಮಾರ್ಗಮಧ್ಯೆ ರಸುಲ್‌ಪುರದ ಬಸವೇಶ್ವರ ದೇವಾಲಯ ಬಳಿಯಿಂದ ದುಬಾರೆತನಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ಬೃಹತ್ ಹೊಂಡಗಳು ನಿರ್ಮಾಣಗೊಂಡಿವೆ. ಈ ಮಧ್ಯೆ ಈ ಮಾರ್ಗದಲ್ಲಿ 3 ಕಿಮೀ ಉದ್ದದ ರಸ್ತೆಯನ್ನು 4 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಪಡಿಸಲು ಕಾಮಗಾರಿ ಆರಂಭಿಸಲಾಗಿತ್ತು. ನಾಲ್ಕು ಕಡೆಗಳಲ್ಲಿ ಕಲ್ವರ್ಟ್ ನಿರ್ಮಿಸಿದ ಬಳಿಕ ಕಾಮಗಾರಿ ಸ್ಥಗಿತಗೊಂಡು ತಿಂಗಳುಗಳೇ ಕಳೆದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.


    ಕಾಮಗಾರಿ ಗುತ್ತಿಗೆ ಪಡೆದವರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ವಾಹನ ಸಂಚಾರದಿಂದ ರಸ್ತೆ ಸಂಪೂರ್ಣ ಧೂಳುಮಯವಾಗಿದೆ. ಇದರಿಂದ ಪ್ರಯಾ ಣಿಕರು, ಪಾದಚಾರಿಗಳು, ರಸ್ತೆ ಬದಿ ನಿವಾಸಿಗಳಿಗೆ ತೀವ್ರ ಅನನುಕೂಲ ಉಂಟಾಗಿದೆ ಎಂದು ಆರೋಪಿಸಿ ಹೊಸಪಟ್ಟಣ ಗ್ರಾಮದ ಮುತ್ತಪ್ಪ ದೇವಾಲಯ ಬಳಿ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್.ವಿಶ್ವ ನೇತೃತ್ವದಲ್ಲಿ ಗ್ರಾ.ಪಂ. ಜನಪ್ರತಿ ನಿಧಿಗಳು, ಗ್ರಾಮಸ್ಥರು ರಸ್ತೆ ಸಂಚಾರ ತಡೆ ನಡೆಸಿದರು.


    ಕೂಡಲೇ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳುವಂತೆ ಒತ್ತಾಯಿಸಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಸಿ.ಎಲ್.ವಿಶ್ವ ಮಾಧ್ಯಮದೊಂದಿಗೆ ಮಾತನಾಡಿ, ಈ ಮಾರ್ಗ ಸಂಪೂರ್ಣ ದುಸ್ಥಿತಿಯಿಂದ ಕೂಡಿರುವ ಕಾರಣ ಪ್ರಯಾಣಿಕರಿಗೆ ಸಂಚಕಾರ ಎದುರಾಗಿದೆ. ಹಲವು ಮಂದಿ ದ್ವಿ ಚಕ್ರವಾಹನ ಸವಾರರು ಗುಂಡಿಗೆ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆದು ಸಾಗಲು ಸಾಧ್ಯವಾಗದ ಪರಿಸ್ಥಿತಿಯಿದೆ.


    ರಸ್ತೆ ನಿರ್ವಹಣೆ ಹೊಣೆ ಹೊತ್ತವರು ನಿರ್ಲಕ್ಷ್ಯ ವಹಿಸಿದ ಕಾರಣ ರಸ್ತೆ ಧೂಳುಮಯವಾಗಿದೆ. ಎಲ್ಲ ರಸ್ತೆಗಳ ಗುಂಡಿ ಮುಚ್ಚಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಶಾಸಕದ್ವಯರು ತಿಳಿಸಿದ್ದು, ಕೂಡಲೇ ಹೇಳಿದಂತೆ ನಡೆದುಕೊಳ್ಳಬೇಕಿದೆ. 15 ದಿನಗಳ ಒಳಗೆ ಪರಿಹಾರ ಲಭಿಸ ದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
    ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸಮೀರ, ಸದಸ್ಯರಾದ ಕುಸುಮಾಡಿ, ಜಾಜಿ ತಮ್ಮಯ್ಯ, ಮಾಜಿ ಅಧ್ಯಕ್ಷೆ ಶೈಲಜಾ, ಮಾಜಿ ಸದಸ್ಯ ಜೆ.ಸಿ.ತಮ್ಮಯ್ಯ, ಗ್ರಾಮಸ್ಥರಾದ ಕೆ.ಟಿ.ಹರೀಶ್, ಸುರೇಶ್, ಪ್ರಸನ್ನ, ಎಂ.ಎಚ್.ಉಂಬು, ವೇಲಾಯುಧ, ಸತೀಶ್, ಸನ್ನಿ, ಸುಬ್ಬಪ್ಪ, ಚಂದ್ರಶೇಖರ್, ಮನು, ಮಣಿ, ವಿದ್ಯಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts