More

    ರಸ್ತೆ ಗುಂಡಿ ಮುಚ್ಚಿದ ಪತ್ರಕರ್ತರು

    ಬೆಳಗಾವಿ: ದೀಪದ ಕೆಳಗೆ ಕತ್ತಲು ಎಂಬಂತೆ ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ, ಆರ್‌ಸಿ ಕಚೇರಿ ಆವರಣದಲ್ಲಿಯೇ ದೊಡ್ಡ ದೊಡ್ಡ ತಗ್ಗು-ಗುಂಡಿಗಳು ಬಿದ್ದು ಅನಾಹುತಕ್ಕೆ ಅಹ್ವಾನ ನೀಡುತ್ತಿದ್ದರೂ, ಜಿಲ್ಲಾಡಳಿತದ ನಿರ್ಲಕ್ಷೃಕ್ಕೆ ಬೇಸತ್ತ ಪತ್ರಕರ್ತರು ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸಾಂಕೇತಿಕವಾಗಿ ಗುಂಡಿ ಮುಚ್ಚುವುದರ ಮೂಲಕ ಜಿಲ್ಲಾಡಳಿತದ ಗಮನ ಸೆಳೆದರು.

    ತಿಂಗಳಿಂದ ದೊಡ್ಡ, ದೊಡ್ಡ ಗುಂಡಿ ಬಿದ್ದು, ಮಳೆ ನೀರು ಸಂಗ್ರಹವಾಗಿ ಅನಾಹುತಕ್ಕೆ ಆಹ್ವಾನ ನೀಡುತ್ತಿತ್ತು. ಅಲ್ಲದೆ, ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದರು. ಆ ಮೂಲಕ ಸ್ಮಾರ್ಟ್ ಸಿಟಿ ಯೋಜನೆಯಡಿ ಉನ್ನತ ಗರಿಮೆ ಪಡೆದುಕೊಂಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಅಧಿಕಾರಿಗಳ ಮುಖವಾಡವನ್ನು ಜಿಲ್ಲಾಡಳಿತದ ಆವರಣದಲ್ಲಿನ ರಸ್ತೆಯೇ ಕಳಿಚಿತ್ತು.

    ದುರಂತವೆಂದರೆ ಇದೇ ರಸ್ತೆಯಲ್ಲಿ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾ ಪಂಚಾಯತಿ ಸಿಇಒ, ಉಪಕಾರ್ಯದರ್ಶಿಗಳು, ಉಪವಿಭಾಗಾಧಿಕಾರಿ, ತಹಸೀಲ್ದಾರ್, ಗ್ರಾಮೀಣ ಎಸಿಪಿ, ಲೋಕಾಯುಕ್ತ ಕಚೇರಿ, ತಾಪಂ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿನಿತ್ಯ ಸಂಚರಿಸುತ್ತಿದ್ದರೂ ಗುಂಡಿಗಳನ್ನು ಮುಚ್ಚು ಕ್ರಮಕ್ಕೆ ಮುಂದಾಗದಿರುವುದರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಪತ್ರಕರ್ತರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
    ಹಿರಿಯ ಪತ್ರಕರ್ತ ಕೇಶವ ಆದಿ ಮಾತನಾಡಿ, ಇದು ಯಾವುದೇ ಅಧಿಕಾರಿಗಳು, ಇಲಾಖೆ ವಿರೋಧಿಸುವ ಕಾರ್ಯವಲ್ಲ.

    ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ಸ್ಮಾರ್ಟ್‌ಸಿಟಿ ಎಂದು ಹೇಳುತ್ತಾರೆ, ಆದರೆ, ಎಲ್ಲಿ ಸ್ಮಾರ್ಟ್‌ಸಿಟಿ ಇದೆ ಎನ್ನುವುದನ್ನು ಹುಡುಕಬೇಕಿದೆ. ಪ್ರತಿ ನಿತ್ಯ ಈ ರಸ್ತೆಯಲ್ಲಿ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿ ಹಿರಿಯ ಅಧಿಕಾರಿಗಳು ಓಡಾಡುತ್ತಾರೆ. ಆದರೂ, ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಕರ್ತರಾದ ನೌಶಾದ್ ಬಿಜಾಪುರ, ವಿಲಾಸ್ ಜೋಶಿ, ಸುರೇಶ ನೇರ್ಲಿ, ರವಿ ಗೋಸಾವಿ, ಶಿವಾನಂದ ಕಲ್ಲೂರ, ಜಗದೀಶ ವಿರಕ್ತಮಠ, ರಾಜಶೇಖರಯ್ಯ ಹಿರೇಮಠ, ಸುನೀಲ ಪಾಟೀಲ, ಕೀರ್ತಿಶೇಖರ ಕಾಸರಗೂಡು, ಸುನೀತಾ ದೇಸಾಯಿ, ಹೀರಾಮನಿ ಕಂಗ್ರಾಳ್ಕರ, ಅಂಜರ ಅಥಣಿಕರ್, ಗೋಪಾಲ ಖಟವಾಕರ, ವಿಶ್ವಪ್ರತಾಪ ಪಾಟೀಲ ಹಾಗೂ ಲಕ್ಷ್ಮಣ ಇತರರು ಇದ್ದರು.

    ಕಾಮಗಾರಿಗೆ ಮೂರು ತಿಂಗಳು ಬೇಕು!

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಮುಚ್ಚುವ ಕಾರ್ಯ ಕೈಗೊಳ್ಳುತ್ತಿದ್ದಂತೆ, ಎಚ್ಚೆತ್ತ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಮುಂದಿನ ಮೂರು ತಿಂಗಳಲ್ಲಿ ಇಲ್ಲಿನ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿ ಮಾಡಲಾಗುತ್ತದೆ. ಈ ಬಗ್ಗೆ ಟೆಂಡರ್ ಆಹ್ವಾನಿಸಿ ತ್ವರಿತವಾಗಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts