More

    ರಸ್ತೆ ಕಾಮಗಾರಿಗಳಲ್ಲೂ ಅವ್ಯವಹಾರ!

    ಹಾವೇರಿ: ಜಿಲ್ಲೆಯಲ್ಲಿ ನೆರೆವು ಕನ್ನ ಕೇವಲ ಮನೆ ಹಾಗೂ ಬೆಳೆ ಹಾನಿಗೆ ವಿತರಿಸಿದ ಪರಿಹಾರದಲ್ಲಿ ನಡೆಯುತ್ತಿಲ್ಲ. ನೆರೆ ಹಾಗೂ ಅತಿವೃಷ್ಟಿಯಿಂದ ಹಾಳಾದ ರಸ್ತೆಗಳ ದುರಸ್ತಿ ಕಾಮಗಾರಿಯಲ್ಲಿಯೂ ನಡೆಯುತ್ತಿರುವ ದೂರು ಕೇಳಿಬಂದಿದೆ.

    ನೆರೆ ಹಾಗೂ ಅತಿವೃಷ್ಟಿಯಂತಹ ಸಮಯದಲ್ಲಿ ಹಾಳಾದ ರಸ್ತೆ, ಸೇತುವೆ ನಿರ್ವಣಕ್ಕೆ ತುರ್ತು ಕಾಮಗಾರಿ ನಡೆಯಬೇಕಿತ್ತು. ಹೀಗಾಗಿ, ಈ ಸಮಯದಲ್ಲಿನ ಕಾಮಗಾರಿಗಳಿಗೆ ಟೆಂಡರ್ ಕರೆಯದೇ ತುಂಡು ಗುತ್ತಿಗೆ ಆಧಾರದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ಪ್ರವಾಹ ಬಂದು ಐದಾರು ತಿಂಗಳ ನಂತರ ಪಿಆರ್​ಇಡಿ ಮೂಲಕ ಹಾವೇರಿ ತಾಲೂಕಿನಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಕೈಗೊಳ್ಳುವ ಆದೇಶವನ್ನು ಬದಲಾಯಿಸಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್​ಐಡಿಎಲ್)ದಿಂದ ಅನುಷ್ಠಾನಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವರೇ ಸೂಚನಾದೇಶವನ್ನು ನೀಡಿದ್ದು, ಭಾರಿ ಚರ್ಚೆಗೆ ಹಾಗೂ ಸಂಶಯಕ್ಕೆ ಗ್ರಾಸವಾಗಿದೆ.

    ಟೆಂಡರ್ ಕರೆದ ನಂತರ ಬದಲಾವಣೆ: ಹಾವೇರಿ ತಾಲೂಕಿನಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆಗಳ ದುರಸ್ತಿಗೆ 2019-20ರ ಪೂರಕ ಅಂದಾಜು-2ರಲ್ಲಿ ಲೆಕ್ಕ ಶೀರ್ಷಿಕೆ 5054-03-337-0-75-059 ಅಡಿ 4 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಈ ಕಾಮಗಾರಿಯನ್ನು ಪಿಆರ್​ಇಡಿ ಮೂಲಕ ಅನುಷ್ಠಾನಗೊಳಿಸಲು ಆದೇಶಿಸಲಾಗಿತ್ತು. ಅದರಂತೆ ಟೆಂಡರ್ ಸಹ ಕರೆಯಲಾಗಿತ್ತು. ಪಿಆರ್​ಇಡಿಯಿಂದ 4 ಕೋಟಿ ರೂ. ಗಳ ಕಾಮಗಾರಿಗಳ ಟೆಂಡರ್ ಕರೆಯುತ್ತಿದ್ದಂತೆ ಕೆಲವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರ ಮೇಲೆ ಪ್ರಭಾವ ಬೀರಿದ್ದಾರೆ. ಇವರ ಪ್ರಭಾವಕ್ಕೆ ಮಣಿದ ಸಚಿವರು, ಟೆಂಡರ್ ಆಗಬೇಕಿದ್ದ ಕಾಮಗಾರಿಗಳನ್ನು ಪಿಆರ್​ಇಡಿಯಿಂದ ಕೆಆರ್​ಐಡಿಎಲ್​ಗೆ ವರ್ಗಾಯಿಸುವಂತೆ ಸೂಚನಾದೇಶ ನೀಡಿದ್ದಾರೆ. ಅದರಂತೆ ಫೆ. 7ರಂದು ಪಿಆರ್​ಇಡಿಯಿಂದ 4 ಕೋಟಿ ರೂ.ಗಳ ರಸ್ತೆ ದುರಸ್ತಿ ಕಾಮಗಾರಿಗಳನ್ನು ಕೆಆರ್​ಐಡಿಎಲ್​ಗೆ ವಹಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ಮೂಲ ಸೌಕರ್ಯ ನಿರ್ದೇಶಕ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಡಾ. ಬೂವನಳ್ಳಿ ನಾಗರಾಜ ಆದೇಶಿಸಿದ್ದಾರೆ.

    ಸರ್ಕಾರದ ಬೊಕ್ಕಸಕ್ಕೆ ಹಾನಿ: ಕೆಆರ್​ಐಡಿಎಲ್ ಬದಲಿಗೆ ಮೊದಲಿನಂತೆ ಪಿಆರ್​ಇಡಿ ಕರೆದಿದ್ದ ಟೆಂಡರ್ ಮೂಲಕ ಕಾಮಗಾರಿಗಳನ್ನು ನಿರ್ವಹಿಸಿದ್ದರೆ, ಈ ಕಾಮಗಾರಿಗಳಿಗೆ ಗುತ್ತಿಗೆದಾರರು ಸರ್ಕಾರ ನಿಗದಿಗೊಳಿಸಿದ ಮೊತ್ತಕ್ಕಿಂತ ಕಡಿಮೆ ಬಿಡ್ ಸಲ್ಲಿಸುತ್ತಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಣದ ಉಳಿತಾಯವಾಗುತ್ತಿತ್ತು. ಈಗ ಕೆಆರ್​ಐಡಿಎಲ್​ಗೆ ವಹಿಸಿರುವುದರಿಂದ ಸರ್ಕಾರ ಪೂರ್ಣ ಹಣವನ್ನು ನೀಡಬೇಕಿದೆ. ಕೆಆರ್​ಐಡಿಎಲ್ ಹೆಸರಿನಲ್ಲಿ ಗುತ್ತಿಗೆದಾರರೇ ಟೆಂಡರ್ ಇಲ್ಲದೇ ಗುತ್ತಿಗೆ ನಡೆಸಿ ಗೋಲ್ಮಾಲ್ ಮಾಡುವುದು ನಿಶ್ಚಿತವಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಒಂದೇ ಊರಿನ ಸುತ್ತ ಕಾಮಗಾರಿಗಳು: ಹಾವೇರಿ ತಾಲೂಕಿನಲ್ಲಿ 4 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 11 ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಅನುಮೋದನೆ ದೊರೆತಿದೆ. ಈ ಕಾಮಗಾರಿಗಳಲ್ಲಿ ಮೂರ್ನಾಲ್ಕು ಕಾಮಗಾರಿಗಳು ಒಂದೆರಡು ಗ್ರಾಮಗಳ ಸುತ್ತಲೇ ಗಿರಿಕಿ ಹೊಡೆದಿವೆ. ಇದರಲ್ಲಿ ಬಸಾಪುರದಿಂದ ಭರಡಿ ರಸ್ತೆ ಸುಧಾರಣೆಗೆ 50 ಲಕ್ಷ, ಭರಡಿ ಗ್ರಾಮದಿಂದ ಬಸಾಪುರ ರಸ್ತೆ ಸುಧಾರಣೆಗೆ 50 ಲಕ್ಷ, ಹಳೆರಿತ್ತಿಯಿಂದ ಬಸಾಪುರ ರಸ್ತೆ ಸುಧಾರಣೆಗೆ 50 ಲಕ್ಷ, ಬಸಾಪುರದಿಂದ ಹಳೆರಿತ್ತಿ ರಸ್ತೆ ಸುಧಾರಣೆಗೆ 40 ಲಕ್ಷ, ಗಣಜೂರಿನಿಂದ ಕರ್ಜಗಿ ಕೂಡು ರಸ್ತೆ, ಕರ್ಜಗಿಯಿಂದ ಗಣಜೂರವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಲಾ 37 ಲಕ್ಷ ರೂ. ನಿಗದಿಗೊಳಿಸಲಾಗಿದೆ. ಹೀಗೆ 11 ಕಾಮಗಾರಿಗಳಲ್ಲಿ ಅನೇಕ ಕಾಮಗಾರಿಗಳು ಒಂದೇ ಗ್ರಾಮದ ಸುತ್ತು ಗಿರಕಿ ಹೊಡೆದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಅಲ್ಲದೆ, ಬಸಾಪುರ ಬಳಿ ಪ್ರವಾಹವೇ ಬಂದಿಲ್ಲ. ಬದಲಾಗಿ ಅತಿವೃಷ್ಟಿಯಿಂದ ರಸ್ತೆ ಹಾಳಾಗಿವೆ. ಅಲ್ಲಿಯೇ 2 ಕೋಟಿ ರೂ.ಗಳಷ್ಟು ಕಾಮಗಾರಿಗೆ ಕ್ರಿಯಾಯೋಜನೆ ಮಾಡಿರುವುದು ಪ್ರಶ್ನಾರ್ಹವಾಗಿದೆ.

    ಗ್ರಾಮೀಣಾಭಿವೃದ್ಧಿ ಸಚಿವರ ಕಚೇರಿಯಲ್ಲಿಯೇ ಬದಲಾವಣೆ ನೆರೆ ಹಾಗೂ ಅತಿವೃಷ್ಟಿಯ ಕಾಮಗಾರಿಗಳನ್ನು ಪಿಆರ್​ಇಡಿಗೆ ವಹಿಸಿದರೆ ಅವರು ಟೆಂಡರ್ ಮೂಲಕ ಅನುಷ್ಠಾನಗೊಳಿಸುತ್ತಾರೆ. ಅದನ್ನು ಕೆಆರ್​ಐಡಿಎಲ್​ಗೆ ಕೊಟ್ಟರೆ, ಟೆಂಡರ್ ಕರೆಯುವ ಅವಶ್ಯಕತೆಯೇ ಇಲ್ಲ. ಕೆಆರ್​ಐಡಿಎಲ್​ನ ಹೆಸರಿನ ಮೂಲಕ ಶಾಸಕರು, ಸಚಿವರ ಹಿಂಬಾಲಕರು ಈ ಕಾಮಗಾರಿಗಳನ್ನು ನಿರ್ವಹಿಸುವ ತಂತ್ರ ಇದರ ಹಿಂದಿದೆ. ಇದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರ ಕಚೇರಿಯಲ್ಲಿಯೇ ಡೀಲ್ ನಡೆಯುತ್ತದೆಯಂತೆ. ಕಾಮಗಾರಿಯ ಒಟ್ಟು ಮೊತ್ತದ ಶೇ. 10ರಷ್ಟು ಕಮಿಶನ್ ಕೊಟ್ಟರೆ, ವಾರದಲ್ಲಿ ಕಾಮಗಾರಿ ಅನುಷ್ಠಾನದ ಏಜೆನ್ಸಿಯೇ ಬದಲಾವಣೆಯಾಗುತ್ತದೆ ಎಂಬ ದೂರು ಜಿಲ್ಲೆಯ ಗುತ್ತಿಗೆದಾರರಿಂದ ಕೇಳಿಬಂದಿದೆ.

    ಹಾವೇರಿ ತಾಲೂಕಿನಲ್ಲಿ 4 ಕೋಟಿ ರೂ.ಗಳ ವೆಚ್ಚದಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾಳಾದ ರಸ್ತೆ ದುರಸ್ತಿ ಕಾಮಗಾರಿಗಳ ಅನುಷ್ಠಾನವನ್ನು ನಮ್ಮ ಇಲಾಖೆಗೆ ವಹಿಸಲಾಗಿತ್ತು. ಅದರಂತೆ 11 ಕಾಮಗಾರಿಗಳಿಗೆ ಟೆಂಡರ್ ಕರೆದಿದ್ದೇವು. ಟೆಂಡರ್ ಕರೆದ ನಂತರ ಸರ್ಕಾರ ಅನುಷ್ಠಾನ ಏಜೆನ್ಸಿಯನ್ನು ಕೆಆರ್​ಐಡಿಎಲ್​ಗೆ ಬದಲಾಯಿಸಿದೆ. ನಾವು ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದೇವೆ.
    | ಕೆ.ವಿ. ಹಂಚಿನಮನಿ, ಇಇ ಪಿಆರ್​ಇಡಿ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts