More

    ರಸಗೊಬ್ಬರ ಬೆಲೆ ಏರಿಕೆ ಕಸಿವಿಸಿ, ಕಂಗಾಲಾದ ಅನ್ನದಾತ, ಬೆಳೆಗಳಿಗೆ ಸಿಗದ ಪೂರಕ ಬೆಲೆ

    ವಿ.ಎಂ. ಕಿಶೋರ್ ಕುಮಾರ್ ವಿಜಯಪುರ
    ಅಗತ್ಯ ವಸ್ತುಗಳ ಬೆಲೆ ಏರಿಕೆ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಗಳು ಸಿಗದೆ ರೈತರನ್ನು ಕಂಗೆಡಿಸಿರುವ ಬೆನ್ನಲ್ಲೆ ರಸಗೊಬ್ಬರದ ದರಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಅನ್ನದಾತನ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಸರ್ಕಾರ, ರಸಗೊಬ್ಬರಗಳಿಗೆ ಸಬ್ಸಿಡಿ ನೀಡಿದರೂ ಬೆಲೆ ಏರಿಕೆಯಾಗುತ್ತಿರುವ ಕಾರಣ ರೈತರು, ದುಬಾರಿ ಹಣ ನೀಡಿ, ರಸಗೊಬ್ಬರ ಖರೀದಿ ಮಾಡಲು ಸಾಧ್ಯವಾಗದಂತಾಗಿದೆ. ಕಾಂಪ್ಲೆಕ್ಸ್ 1060 ರೂಪಾಯಿ ಇದ್ದದ್ದು 1500 ರೂಪಾಯಿಯಾಗಿದೆ. ಡಿಎಪಿ 1350 ರಿಂದ 2000 ರೂಪಾಯಿಯಾಗಿದೆ. ಜತೆಗೆ 5 ಕೆ.ಜಿ.ಬೇಸಾಯದ ಬ್ಯಾಗ್ ಪ್ರತ್ಯೇಕವಾಗಿ ಕೊಡ್ತಾರೆ, ಅದನ್ನೂ ತೆಗೆದುಕೊಳ್ಳಬೇಕು ಎಂಬ ಷರತ್ತು ವಿಧಿಸಲಾಗುತ್ತಿದೆ. ಎಂ-ಪೋಟಾಷ್ ಸಿಗುತ್ತಿಲ್ಲ.

    ಕಳೆನಾಶಕ ಔಷಧವೂ ಒಂದು ಲೀಟರ್‌ಗೆ 340 ರೂಪಾಯಿ ಇದ್ದದ್ದು, 450 ರೂಪಾಯಿಯಾಗಿದೆ. ಈ ಬೆಲೆಗಳು ಪ್ರತಿನಿತ್ಯ ಏರಿಕೆಯಾಗುತ್ತಲೇ ಇವೆ. ಕಾರಣ ಕೇಳಿದರೆ, ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವುದರಿಂದ ಬೆಲೆಗಳು ಏರಿಕೆಯಾಗುತ್ತಿವೆ ಎಂದು ಹೇಳುತ್ತಾರೆ ಎಂದು ರೈತ ಆರ್. ಮುನಿರಾಜು ಅಲವತ್ತುಕೊಂಡರು.

    ಕರೊನಾದಿಂದಾಗಿ 2 ವರ್ಷ ಸತತವಾಗಿ ನಷ್ಟ ಅನುಭವಿಸಿದ್ದೇವೆ. ದ್ರಾಕ್ಷಿ ಬೆಳೆ ಚರಂಡಿಗಳಿಗೆ ಸುರಿದಿದ್ದೇವೆ. ಇತ್ತೀಚೆಗೆ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದೇವೆ. ಭೂಮಿ ಉಳುಮೆ ಮಾಡಬೇಕಾದರೆ ಡೀಸೆಲ್ ಬೆಲೆ ಏರಿಕೆಯಾಗಿದೆ. ಈಗ ರಸಗೊಬ್ಬರ ಬೆಲೆ ಏರಿಕೆಯಾಗುತ್ತಲೇ ಇದೆ. ಕೃಷಿಗೆ ಬೇಕಾಗಿರುವ ಅಗತ್ಯ ವಸ್ತುಗಳ ಸಾಗಣೆಯೂ ಜಾಸ್ತಿಯಾಗಿದೆ. ಆದರೆ, ಬೆಳೆಗಳ ಬೆಲೆ ಮಾತ್ರ ಏರಿಕೆಯಾಗುತ್ತಿಲ್ಲ. ಕುಟುಂಬದಲ್ಲಿನ ಒಡವೆಗಳು, ಗಿರವಿ ಇಟ್ಟು, ಮನೆಗಳಲ್ಲಿನ ಕುರಿ, ಮೇಕೆಗಳನ್ನು ಮಾರಾಟ ಮಾಡಿದರೂ ತೋಟಗಳಿಗೆ ಬಂಡವಾಳ ಹೂಡಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ, ರೈತರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ರೈತ ನಾರಾಯಣಸ್ವಾಮಿ.
    ರಸಗೊಬ್ಬರ ದರ ಮಾರುಕಟ್ಟೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿರುವ ಉದಾಹರಣೆ ಇದುವರೆಗೂ ಇಲ್ಲ. ಜೂನ್‌ನಲ್ಲಿ ರಸಗೊಬ್ಬರ ಬೆಲೆ ಏರಿಕೆಯಾಗುತ್ತಿತ್ತು. ಆದರೆ ಇಷ್ಟು ದೊಡ್ಡ ಮೊತ್ತ ಏಕಾಏಕಿ ಏರಿಕೆ ಮಾಡಿದರೆ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಮಾರ್ಚ್, ಏಪ್ರಿಲ್ ತಿಂಗಳಲ್ಲೇ ಏರಿಸಲಾಗುತ್ತಿದೆ ಎಂದು ರೈತ ಮುರಳಿಮೋಹನ್ ತಿಳಿಸಿದರು.

    ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳು ಮಾರಾಟ ಮಾಡುವಂತಹ ಅಂಗಡಿಗಳ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವಂತೆ ಇಲಾಖೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುತ್ತದೆ. ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಅಗತ್ಯವಿರುವ ರಸಗೊಬ್ಬರ ಮಾತ್ರ ಖರೀದಿ ಮಾಡಿಕೊಳ್ಳುವಂತೆ ರೈತರಿಗೂ ತಿಳಿಸಿದ್ದೇವೆ. ದರಪಟ್ಟಿಯನ್ನು ಪ್ರದರ್ಶನ ಮಾಡಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಲಾಗುವುದು.
    ಕೆ.ಎಚ್.ವೀಣಾ, ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts