More

    ರಮೇಶ ಡಾಕುಳಗಿ ಔರಾದ್ ಜೆಡಿಎಸ್ ಅಭ್ಯರ್ಥಿ

    ಬೀದರ್: ದಲಿತ ಮುಖಂಡ, ಹುಮನಾಬಾದ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಔರಾದ್(ಎಸ್ಸಿ) ಮೀಸಲು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗುವುದು ಖಚಿತವಾಗಿದೆ.

    ಬರುವ ವಿಧಾನಸಭೆ ಚುನಾವಣೆ ಟಿಕೆಟ್ ಖಾತ್ರಿಯಾದ ಕಾರಣ ಡಾಕುಳಗಿ ತಮ್ಮ ಬೆಂಬಲಿಗರ ಜತೆಗೆ ಮಂಗಳವಾರ ಬೆಂಗಳೂರು ಸಮೀಪದ ಬಿಡದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ಹಿರಿಯ ಮುಖಂಡ ಬಂಡೆಪ್ಪ ಖಾಶೆಂಪುರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

    ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್ ವಾರ್ಡನ್ ಆಗಿದ್ದ ಡಾಕುಳಗಿ, ಈ ಹುದ್ದೆಗೆ ರಾಜೀನಾಮೆ ನೀಡಿ 2015 ರಲ್ಲಿ ಜರುಗಿದ್ದ ತಾಪಂ ಚುನಾವಣೆಯಲ್ಲಿ ಹುಮನಾಬಾದ್ ತಾಲೂಕಿನ ಸ್ವಗ್ರಾಮ ಡಾಕುಳಗಿ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದಿದ್ದರು. ಅದೃಷ್ಟವೆಂಬಂತೆ ಐದು ವರ್ಷ ತಾಪಂ ಅಧ್ಯಕ್ಷ ಭಾಗ್ಯ ಒಲಿಯಿತು. ಶಾಸಕ ರಾಜಶೇಖರ ಪಾಟೀಲ್ ಗರಡಿಯಲ್ಲಿ ಕಾಂಗ್ರೆಸ್​ನಲ್ಲಿ ಸಕ್ರಿಯವಾಗಿ ತೊಡಗಿದ್ದ ಡಾಕುಳಗಿ, ಇದೀಗ ಜೆಡಿಎಸ್​ನಿಂದ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ.

    ಔರಾದ್ ಕ್ಷೇತ್ರ ಮೇಲೆ ಕಣ್ಣಿಟ್ಟು ಕಳೆದೊಂದು ವರ್ಷದಿಂದ ಡಾಕುಳಗಿ ಕೆಲಸ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಸಿಗುವುದು ಅನುಮಾನವಿದ್ದ ಕಾರಣ ಜೆಡಿಎಸ್​ಗೆ ಜಿಗಿದಿದ್ದಾರೆ. 16ರಂದು ಔರಾದ್ ತಾಲೂಕಿನ ಸಂಗಮ ಹತ್ತಿರ ನಡೆಯಲಿರುವ ಜನತಾ ಜಲಧಾರೆ ಕಾರ್ಯಕ್ರಮ ವೇಳೆ ಡಾಕುಳಗಿ ಹೆಸರು ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ.

    ಇಲ್ಲಿತ್ತು ಜನತಾ ಪರಿವಾರ ಹವಾ: ಔರಾದ್ ಇತಿಹಾಸ ನೋಡಿದರೆ ಜನತಾ ಪರಿವಾರ ಇದ್ದಾಗ ಕ್ಷೇತ್ರದಲ್ಲಿ ಫುಲ್ ಹವಾ ಇತ್ತು. 1985, 1989, 1994ರಲ್ಲಿ ಜನತಾ ಪರಿವಾರದಿಂದ ದಿ. ಗುರುಪಾದಪ್ಪ ನಾಗಮಾರಪಳ್ಳಿ ಗೆದ್ದಿದ್ದರು. ನಂತರ ಅವರು ಕಾಂಗ್ರೆಸ್ ಸೇರಿದರು. ದಳ ಇಬ್ಭಾಗವಾದ ನಂತರ 2004ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ನಿಂದ ಗುಂಡಪ್ಪ ವಕೀಲ್ ಸ್ಪರ್ಧಿಸಿ ನಾಗಮಾರಪಳ್ಳಿ ಎದುರು ಸೋಲುಂಡರು. ಆ ಹೊತ್ತಿನಲ್ಲಿ ಜೆಡಿಎಸ್ ಚಿಗುರಲಾರಂಭಿಸಿತು. ಆದರೆ ನಂತರದ ಚುನಾವಣೆಗಳಲ್ಲಿ ಚೇತರಿಕೆ ಕಂಡಿಲ್ಲ. ಸ್ಪರ್ಧೆಗುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಈಗಿದೆ. ಇದೀಗ ಹೊಸ ಮುಖ ರಮೇಶ ಡಾಕುಳಗಿ ಪಕ್ಷ ಸೇರಿದ್ದು, ಯಾವ ರೀತಿ ಟಕ್ಕರ್ ನೀಡಲಿದೆ ಕಾದು ನೋಡಬೇಕು.

    ಕನ್ನಡ ಭಾಷೆ, ನೆಲ-ಜಲ ಸಂರಕ್ಷಣೆ ಸಂಕಲ್ಪ ಹೊಂದಿರುವ ಜೆಡಿಎಸ್ಗೆ ಅಪಾರ ಬೆಂಬಲಿಗರೊಂದಿಗೆ ಸೇರ್ಪಡೆಯಾಗಿರುವೆ. ಪಕ್ಷ ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಈ ಭಾಗದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಲಾಗುವುದು. ಔರಾದ್ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ.
    |ರಮೇಶ ಡಾಕುಳಗಿ, ಜೆೆಡಿಎಸ್ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts