More

    ರೈತರ ದನಿಯಾಗಿ ಸದನದಲ್ಲಿ ಕೆಲಸ

    ಮದ್ದೂರು: ಸದನದ ಹೊರಗೆ ಮತ್ತು ಒಳಗೆ ರೈತರ ದನಿಯಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಕೆ.ಎಂ. ಉದಯ್ ರೈತರಿಗೆ ಭರವಸೆ ವ್ಯಕ್ತಪಡಿಸಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತ ಸಂಘದ ಕಾರ್ಯಕರ್ತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ರೈತರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಈಗಾಗಲೇ ಚರ್ಚಿಸಿದ್ದು, ಸರ್ಕಾರವೂ ಪೂರಕವಾಗಿ ಸ್ಪಂದಿಸಿದೆ. ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

    ಬರ ಪರಿಹಾರದ ಜತೆಗೆ ಬೆಳೆ ಪರಿಹಾರ ಕೊಡಿಸುವುದರ ಜತೆಗೆ ಸಂಕ್ರಾಂತಿ ವೇಳೆಗೆ ವಿಶ್ವೇಶ್ವರಯ್ಯ ನಾಲೆಗೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಕೊಡಿಸಬೇಕು. ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬನ್ನು ಪೂರ್ಣವಾಗಿ ಅರೆಯುವವರೆಗೂ ಕಾರ್ಖಾನೆ ಸ್ಥಗಿತಗೊಳಿಸಿದಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು. ರೈತರ ಎಲ್ಲ ರೀತಿಯ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿ ಹೊಸ ಸಾಲ ನೀಡಲು ಮುತುವರ್ಜಿ ವಹಿಸಬೇಕು ಎಂದು ರೈತರು ಶಾಸಕರ ಬಳಿ ಮನವಿ ಮಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಪಟ್ಟಣದ ಕೆಮ್ಮಣ್ಣು, ಬೈರನ್ ಸೇರಿದಂತೆ ತಾಲೂಕಿನ ಎಲ್ಲ ನಾಲೆಗಳ ಆಧುನಿಕರಣಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಚರ್ಚಿಸಿದ್ದು, ಶೀಘ್ರ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಅಲ್ಲದೇ, ಮುಂದಿನ ದಿನಗಳಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಕೆಲವೊಂದು ಸಮಸ್ಯೆಗಳು ಸರ್ಕಾರದ ಮಟ್ಟದಲ್ಲಿ ಬಗೆಹರಿಯ ಬೇಕಾಗಿರುವುದರಿಂದ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಗೂಳೂರದೊಡ್ಡಿ ರಾಮಕೃಷ್ಣ, ಕಾರ್ಯದರ್ಶಿ ವಿನೋದ್‌ಕುಮಾರ್, ಮುಖಂಡರಾದ ಗೊಲ್ಲರದೊಡ್ಡಿ ಅಶೋಕ, ಜಿ.ಎ.ಶಂಕರ, ಲಿಂಗಪ್ಪಾಜಿ, ವರದರಾಜು, ಪುಟ್ಟಸ್ವಾಮಿ, ಸಿದ್ದೇಗೌಡ, ಕೂಳಗೆರೆ ವೆಂಕಟೇಶ, ಸಾವಿತ್ರಮ್ಮ, ಸತ್ಯಭಾಮ, ರಮ್ಯಾ, ಚಿಕ್ಕತಾಯಮ್ಮ, ವೆಂಕಟೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts