More

    ಯಕ್ಷಗಾನ ಪರಂಪರೆಯ ಮೌಲ್ಯಮಾಪನ ಅಸಾಧ್ಯ

    ಶೃಂಗೇರಿ: ಯಕ್ಷಗಾನ ಪರಂಪರೆಯ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಪರಿಮೂಡಿದ ಈ ಕಲೆಯನ್ನು ಉಳಿಸುವ ಗುರುತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.

    ಪಟ್ಟಣದ ಡಾ. ವಿ.ಆರ್ ಗೌರೀಶಂಕರ್ ಸಭಾಂಗಣದಲ್ಲಿ ಭಾರತೀ ತೀರ್ಥ ಸಾಂಸ್ಕೃತಿಕ ಟ್ರಸ್ಟ್, ಕಾಳಿಂಗ ನಾವಡ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷಗಾನ ಅಕಾಡೆಮಿ ಆಯೋಜಿಸಿದ್ದ ಎರಡು ದಿನಗಳ ಕಾಳಿಂಗ ನಾವಡ ರಾಷ್ಟ್ರೀಯ ವಿಚಾರಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.

    ಯಕ್ಷಗಾನ ಭಾಗವತಿಕೆಯ ಯುಗ ಪ್ರವರ್ತಕರು ಎಂದು ಕರೆಸಿಕೊಳ್ಳುವ ಗುಂಡ್ಮಿ ಕಾಳಿಂಗ ನಾವಡ ಅವರ ಬದುಕು ಹಾಗೂ ಸಾಧನೆಯನ್ನು ನಿರಂತರ ಸ್ಮರಿಸಬೇಕು. ಅವರು ಬದುಕಿದ್ದರೆ ಯಕ್ಷಗಾನಕ್ಕೆ ಹೊಸ ರೂಪ ನೀಡಿ ಕಡಲಿನ ಆಚೆಗೂ ಯಕ್ಷಗಾನದ ಕಂಪನ್ನು ಪಸರಿಸುತ್ತಿದ್ದರು ಎಂದರು.

    ಯಕ್ಷಗಾನ ಕಲಾವಿದ ದಿ. ನಲ್ಲೂರು ಮರಿಯಪ್ಪ ಆಚಾರ್ ಪರಂಪರೆ ದಾಖಲೀಕರಣದ ಸಿ.ಡಿ.ಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ.ಹೆಗಡೆ, ಸಣ್ಣ ವಯಸ್ಸಿನಲ್ಲಿ ಕುಂಜಾಲು ಶೈಲಿಯ ಪರಂಪರೆ ಅಳವಡಿಸಿಕೊಂಡು ಸಾಧನೆ ಮಾಡಿ ಅಮರವಾದ ಕಾಳಿಂಗ ನಾವಡರ ಕೀರ್ತಿ ಯುವ ಪೀಳಿಗೆಗೆ ಮಾದರಿ. ಅಕಾಡೆಮಿಯು ಯಕ್ಷಗಾನ ಪರಂಪರೆ ಉಳಿವಿಗೆ ವಿಚಾರ ಮಂಥನ, ದಾಖಲೀಕರಣ, ಸಮಗ್ರ ದರ್ಶನ ಅನಾವರಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಯಕ್ಷಗಾನ ತರಬೇತಿ ನೀಡುವ ಜತೆಗೆ ಪರಂಪರೆಯ ಮೌಲ್ಯ ವಿಸ್ತರಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts