More

    ರಕ್ಷಕರೇ ಇಲ್ಲಿ ಭಕ್ಷಕರು!

    ಶಿವಪ್ರಭು ಈಸರಗೊಂಡ ಉಪ್ಪಿನಬೆಟಗೇರಿ

    ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕಾದವರೇ ಭಕ್ಷಿಸಿದರೆ ಹೇಗೆ? ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ? ಹೀಗಂತ ಬಹಿರಂಗ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ.

    ಕಳೆದ ನಾಲ್ಕೈದು ವರ್ಷಗಳ ಹಿಂದೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಮಾಡಿದವರಿಗೆ ಅಲ್ಲಿನ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಬಿಸಿ ಮುಟ್ಟಿಸುವ ಕೆಲಸ ಮಾಡಿತ್ತು. ಇಂಥ ಉದಾಹರಣೆ ಗೊತ್ತಿದ್ದರೂ ಉಪ್ಪಿನಬೆಟಗೇರಿ ಪಂಚಾಯಿತಿ ಅಧಿಕಾರಿಗಳೇ ತಮ್ಮ ಕೆಲ ಸಿಬ್ಬಂದಿಗೆ ಸರ್ಕಾರಿ ಜಾಗದಲ್ಲೇ ಮನೆ ಕಟ್ಟಿಸಿಕೊಳ್ಳಲು ಪರವಾನಗಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಗ್ರಾಮದಲ್ಲಿ ಎಲ್ಲೆಲ್ಲಿ ಸರ್ಕಾರಿ ಆಸ್ತಿ ಇದೆಯೋ ಅದು ಸರ್ಕಾರದ ಆಸ್ತಿ ಎಂದು ಅಲ್ಲಿ ಬೋರ್ಡ್ ಹಾಕಲಾಗಿದೆ. ಆದರೆ, ತೆರವು ಕಾರ್ಯ ಮಾತ್ರ ನಡೆದಿಲ್ಲ. ಗ್ರಾಮದ ಸರ್ವೆ ನಂಬರ್ 860ರಲ್ಲಿ ಬರುವ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ಈ ಜಾಗ ದಾಖಲೆ ಪತ್ರಗಳಲ್ಲಿ ಸರ್ಕಾರಿ ಕಿಲ್ಲೆ ಎಂದಿದೆ. ಆದರೆ, ಆ ಜಾಗವನ್ನು ಒತ್ತುವರಿ ಮಾಡಿ ಸಾಕಷ್ಟು ಮನೆಗಳನ್ನು ಹಾಕಿಕೊಳ್ಳಲಾಗಿದೆ. ಅದರಲ್ಲಿ ಪಂಚಾಯಿತಿ ಸಿಬ್ಬಂದಿಯೇ ಮನೆ ನಿರ್ವಿುಸಿಕೊಂಡಿರುವುದು ವಿಪರ್ಯಾಸ.

    ಕೆಲ ವರ್ಷಗಳ ಹಿಂದೆ ಮಾಹಿತಿ ಹಕ್ಕಿನಡಿ ಗ್ರಾಮದ ಕೃಷ್ಣಾ ಬುದ್ನಿ ಅವರು ಸರ್ಕಾರದ ಆಸ್ತಿ ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆಗ ಪಂಚಾಯಿತಿಯು ‘ಸಾಕಷ್ಟು ಸರ್ವೆ ನಂಬರ್​ಗಳಲ್ಲಿ ಸರ್ಕಾರಿ ಆಸ್ತಿ ಇದೆ. ಆದರೆ, ಆ ಜಾಗ ಎಲ್ಲವೂ ಒತ್ತುವರಿಯಾಗಿದೆ’ ಎಂಬ ಮಾಹಿತಿ ನೀಡಿತ್ತು.

    ಸುಪ್ರೀಂ ಕೋರ್ಟ್ ಕೂಡ 2018 ರಲ್ಲಿ ಒತ್ತುವರಿಯಾದ ಜಾಗದಲ್ಲಿ ನಿರ್ವಿುಸಲಾದ ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರಗಳನ್ನು ತೆರವುಗೊಳಿಸಬೇಕು ಎಂದು ಆದೇಶ ನೀಡಿದೆ. ಸ್ಥಳೀಯ ಪಂಚಾಯಿತಿಯವರು ಇದರ ಬಗ್ಗೆ ಗಮನ ನೀಡದೆ ಇರುವುದರಿಂದ ಸಾರ್ವಜನಿಕರು ಬೇಕಾಬಿಟ್ಟಿಯಾಗಿ ಮನೆಗಳನ್ನು ನಿರ್ವಿುಸಿಕೊಳ್ಳುತ್ತಿದ್ದಾರೆ.

    ಈ ಹಿಂದೆ ಗ್ರಾಮದಲ್ಲಿ ಒತ್ತುವರಿಯಾದ ಕೆಲ ಮನೆಗಳನ್ನು ತೆರವುಗೊಳಿಸಲು ಮುಂದಾದಾಗ ಕೆಲವರು ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದರು. ಹಲವಾರು ವರ್ಷಗಳಿಂದ ಈ ಜಾಗದಲ್ಲಿ ವಾಸವಿದ್ದು, ನಮಗೆ ಬೇರೆ ಕಡೆಗೆ ಮನೆ ನಿರ್ವಣಕ್ಕೆ ವ್ಯವಸ್ಥೆ ಮಾಡಿದರೆ ಇಲ್ಲಿಯ ಜಾಗ ತೆರವು ಮಾಡುವುದಾಗಿ ಬೇಡಿಕೆ ಇಟ್ಟಿದ್ದರು. ಒತ್ತುವರಿ ಮಾಡಿಕೊಂಡವರಿಗೆ ಪಂಚಾಯಿತಿಯು ಸರ್ಕಾರದ ಮಟ್ಟದಲ್ಲಿ ಬೇರೆ ವ್ಯವಸ್ಥೆ ಮಾಡಿ ಸರ್ಕಾರಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಇದುವರೆಗೂ ಗಮನಹರಿಸಿಲ್ಲ. ಪಂಚಾಯಿತಿ ಸಿಬ್ಬಂದಿ ಇಬ್ಬರು ಸುಮಾರು 10-15 ಲಕ್ಷ ರೂಪಾಯಿ ಖರ್ಚು ಮಾಡಿ ಪಂಚಾಯಿತಿ ಆಸ್ತಿಯಲ್ಲೇ ಮನೆ ನಿರ್ವಿುಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಸರ್ವೆ ನಂಬರ್ 860 ಮಾತ್ರ ಅಷ್ಟೇ ಅಲ್ಲ, ಇದೇ ರೀತಿ ಹಲವಾರು ಸರ್ವೆ ನಂಬರಿನ ಜಾಗವು ಅತಿಕ್ರಮಣವಾಗಿದೆ. ಆದರೆ, ಗ್ರಾಮ ಪಂಚಾಯಿತಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಸುಪ್ರೀಂ ಕೋರ್ಟ್ ಕೊಟ್ಟ ಆದೇಶವನ್ನು ಪಂಚಾಯಿತಿ ಅಕ್ಷರಶಃ ಗಾಳಿಗೆ ತೂರಿದೆ. ಇದರ ಬಗ್ಗೆ ಹಲವರು ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದ್ದಾರೆ. ಎಲ್ಲ ಮಾಹಿತಿಯಲ್ಲೂ ಸರ್ಕಾರಿ ಜಾಗ ಒತ್ತುವರಿಯಾದ ಬಗ್ಗೆ ಮಾಹಿತಿ ನೀಡಲಾಗಿದೆ.

    ಒತ್ತುವರಿಯಾದ ಜಾಗವನ್ನು ಪಂಚಾಯಿತಿಯವರು ತೆರವುಗೊಳಿಸಲು ಮುಂದಾದರೆ ಅವರು ಕೇವಲ ನಾಲ್ಕಾರು ಜನಕ್ಕೆ ಕೆಟ್ಟವರಾಗುತ್ತಾರೆ. ಇದರಿಂದ ಉಳಿದ ಜನಕ್ಕೆ ಒಳ್ಳೆಯದಾಗುತ್ತದೆ. ಆದರೆ, ಪಂಚಾಯಿತಿಯವರು ಇಂಥ ಸಾಹಸಕ್ಕೆ ಮುಂದಾಗುತ್ತಿಲ್ಲ. ಇನ್ನು ಪಂಚಾಯಿತಿ ಸಿಬ್ಬಂದಿಯೇ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ವಿುಸಿಕೊಳ್ಳುವಾಗ ಗ್ರಾಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ಯಾರೆ ಎಂದಿಲ್ಲ. | ಕೃಷ್ಣಾ ಬುದ್ನಿ ಮಾಹಿತಿ ಹಕ್ಕು ಹೋರಾಟಗಾರ

    ಬರುವ ಸಾಮಾನ್ಯ ಸಭೆಯಲ್ಲಿ ಸರ್ಕಾರಿ ಜಾಗ ಒತ್ತುವರಿ ಬಗ್ಗೆ ಕಮಿಟಿಯಲ್ಲಿ ರ್ಚಚಿಸಿ ಠರಾವು ಪಾಸು ಮಾಡಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಹಿಂದೆ ಇದ್ದ ಪಿಡಿಒ ತಮ್ಮ ಅವಧಿಯಲ್ಲಿ ಈ ಬಗ್ಗೆ ಠರಾವು ಪಾಸು ಮಾಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಕಮಿಟಿ ಸದಸ್ಯರು ಒಪ್ಪಿಗೆ ನೀಡಿರಲಿಲ್ಲ ಎಂಬ ಮಾಹಿತಿ ಇದೆ. | ಬಿ.ಎ. ಬಾವಾಖಾನವರ ಪಿಡಿಒ

    ====================

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts