More

    ಯೋಧ ನಾಗರಾಜ್‌ಗೆ ತವರೂರಲ್ಲಿ ಸ್ವಾಗತ  -ಸೇನೆಗೆ ಸೇರಿ ದೇಶಸೇವೆ ಮಾಡಲು ಸಲಹೆ 

    ದಾವಣಗೆರೆ: ಗಡಿಭದ್ರತಾ ಪಡೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಶುಕ್ರವಾರ ತಾಯ್ನಡಿಗೆ ಮರಳಿದ ಯೋಧ ನಾಗರಾಜ್ ಅವರನ್ನು ಹುಟ್ಟೂರು, ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
    ಗ್ರಾಮದ ಕೂಲಿಕಾರ್ಮಿಕ ದಂಪತಿ ಸಿದ್ದಪ್ಪ-ಗಂಗಮಾಳಮ್ಮ ಅವರ ಪುತ್ರನಾದ ನಾಗರಾಜ್, 2003ರಲ್ಲಿ ಸೇನೆಗೆ ಆಯ್ಕೆಯಾಗಿದ್ದರು. ಸಿಕಂದರಾಬಾದ್‌ನಿಂದ ವೃತ್ತಿ ಜೀವನ ಆರಂಭಿಸಿ ಬಿಹಾರ್, ಜಾರ್ಖಂಡ್, ಪಂಜಾಬ್, ಜಮ್ಮು-ಕಾಶ್ಮೀರ, ಅಸ್ಸಾಂ ಮಣಿಪುರದ ಇಂಪಾಲ್, ದೆಹಲಿ, ಹೈದರಾಬಾದ್, ಬೆಂಗಳೂರು ಇತರೆಡೆಗಳಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
    ಈಶ್ವರ ದೇವಾಲಯ ಮುಂಭಾಗದಲ್ಲಿ ಗ್ರಾಮಸ್ಥರು, ಮುಖಂಡರು ಯೋಧ ನಾಗರಾಜ್ ಅವರಿಗೆ ಶಾಲು-ಹಾರ ಹೊದಿಸಿ ಗೌರವಿಸಿದರು. ಊರಿನ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲೇ ಮೆರವಣಿಗೆ ಮಾಡಲಾಯಿತು. ಶಾಲಾ ಮಕ್ಕಳು ‘ಭಾರತ್ ಮಾತಾ ಕೀ ಜೈ, ದೇಶ ಕಾಯುವ ವೀರಯೋಧರಿಗೆ ಜಯವಾಗಲಿ’ ಎಂದು ಘೋಷಣೆ ಕೂಗಿದರು.
    ಈ ಸಂದರ್ಭದಲ್ಲಿ ಮಾತನಾಡಿದ ನಾಗರಾಜ್, ಇಂದಿನ ಯುವಜನರು ಇಂಜಿನಿಯರ್, ಡಾಕ್ಟರ್, ಸರ್ಕಾರಿ ನೌಕರಿಯ ಸೀಮಿತ ಹುದ್ದೆಗಳನ್ನು ಬಯಸುತ್ತಿದ್ದಾರೆ. ಹಾಗಾದರೆ ದೇಶ ಕಾಯುವವರು ಯಾರು? ವೈಯಕ್ತಿಕ ಶಿಸ್ತು, ಕಟ್ಟುನಿಟ್ಟಿನ ಜೀವನಕ್ರಮ ಅನುಸರಿಸಿ ದೇಶಸೇವೆಗೆ ಮುಂದಾಗಬೇಕು ಎಂದು ಆಶಿಸಿದರು.
    ಹೆಚ್ಚು ಓದಲಾಗದಿದ್ದರೂ ದೇಶಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪೂರ್ವಜನ್ಮದ ಪುಣ್ಯ. ಗಡಿ ಭಾಗದಲ್ಲಿ ನಮ್ಮ ಸೈನಿಕರು ಉಗ್ರಗಾಮಿಗಳೆದುರು ಹೋರಾಟ ನಡೆಸುವಾಗ ಮೈ ಜುಂ ಎನಿಸುತ್ತಿತ್ತು. ಯುದ್ಧದಲ್ಲಿ ಕೆಲವರು ಗುಂಡೇಟಿಗೆ ಒಳಗಾದರೂ ಎದೆಗುಂದದೆ ಮುನ್ನುಗ್ಗುತ್ತಿದ್ದರು. ನಮ್ಮೊಳಗೆ ದೇಶಸೇವೆ ತುಡಿತ ಮಾತ್ರ ಇರುತ್ತಿತ್ತು ಎಂದು ಕರ್ತವ್ಯ ನಿರ್ವಹಣೆಯ ಕ್ಷಣಗಳನ್ನು ಮೆಲುಕು ಹಾಕಿದರು.
    ಗ್ರಾಪಂ ಅಧ್ಯಕ್ಷೆ ಶಿಲ್ಪಾ ಶಿವಮೂರ್ತಿ, ಉಪಾಧ್ಯಕ್ಷೆ ಪಾರ್ವತಮ್ಮ ಅಡಿವೆಪ್ಪ, ಪಿಡಿಒ ಅಶ್ವಿನಿ, ಕಾರ್ಯದರ್ಶಿ ಸುರೇಶ್, ಸದಸ್ಯರಾದ ಮೂರ್ತೆಪ್ಪ, ಅಭಿಷೇಕ್, ಓಬಳೇಶ್, ಉಮೇಶ್, ನಾಗಮ್ಮ ನಿಜಲಿಂಗಪ್ಪ, ಮಾಜಿ ಅಧ್ಯಕ್ಷ ಶಿವಮೂರ್ತಿ, ಎಸ್.ಎಸ್. ರವಿಕುಮಾರ್, ಪೂಜಾರ ಆನಂದ್, ಚೌಟಗಿ ಹನುಮಂತಪ್ಪ, ಭೀಮಪ್ಪ, ರೇವಣ್ಣ, ಪರಸಪ್ಪ ಗ್ರಂಥಪಾಲಕ ಮಂಜಪ್ಪ, ಪತ್ರಕರ್ತ ಪುರಂದರ ಲೋಕಿಕೆರೆ ಹಾಗೂ ಯೋಧನ ಕುಟುಂಬದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts