More

    ಯೋಜನೆಗಳ ಸದ್ಬಳಕೆಗೆ ವಹಿಸಿ ನಿಗಾ -ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಸೂಚನೆ -ದಾವಣಗೆರೆಯಲ್ಲಿ ಪ್ರಗತಿ ಪರಿಶೀಲನಾ ಸಭೆ 

    ದಾವಣಗೆರೆ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ದುರ್ಬಳಕೆಯಾಗದಂತೆ ನಿಗಾ ವಹಿಸಬೇಕೆಂದು ಕೈಗಾರಿಕಾಭಿವೃದ್ಧಿ ಇಲಾಖೆ ಆಯುಕ್ತೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ನೋಂದಣಿ ಮಾಡಿಸಿ ಯೋಜನೆಗಳ ಹಣ ದುರುಪಯೋಗ ಮಾಡಲಾಗುತ್ತದೆ ಎಂದು ಮಹಾಲೇಖಪಾಲಕರ ವರದಿ ಇದೆ. ಗೃಹಲಕ್ಷ್ಮೀ ಮತ್ತು ಅನ್ನಭಾಗ್ಯ ಯೋಜನೆಯಡಿ ದುರ್ಬಳಕೆ ಆಗುವ ಸಂಭವವಿರುತ್ತದೆ. ಹಾಗಾಗಿ ಅಧಿಕಾರಿಗಳು ಪ್ರತಿಯೊಂದು ಖಾತೆ ಪರಿಶೀಲಿಸಿ, ಅರ್ಹರಿಗೆ ತಲುಪಿಸಬೇಕೆಂದು ಹೇಳಿದರು.
    ಜಿಲ್ಲೆಯಲ್ಲಿ ಈ ಬಾರಿ ಬರದ ಛಾಯೆ ಇದ್ದು ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಇಲಾಖಾ ಮಟ್ಟದ ಸಮಸ್ಯೆಗಳಿದ್ದಲ್ಲಿ ಡಿಸಿ ಅಥವಾ ನನ್ನ ಗಮನಕ್ಕೆ ತನ್ನಿ ಎಂದೂ ಹೇಳಿದರು.
    ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೆ, ಜೂನ್- ಆಗಸ್ಟ್‌ನಲ್ಲಿ ಮಳೆಯ ಕೊರತೆಯಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲಾಗುತ್ತಿದೆ. ಉಳಿದೆಡೆ ಮಳೆಯಾಶ್ರಿತ ಬೆಳೆಗಳಿದ್ದು ತಂಡಗಳನ್ನು ರಚಿಸಿ ಬರ ಸಮೀಕ್ಷೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
    ಶಕ್ತಿ ಯೋಜನೆಯಡಿ ದಾವಣಗೆರೆ ವಿಭಾಗದಿಂದ ಜೂನ್‌ನಿಂದ ಆಗಸ್ಟ್ 24 ರ ವರೆಗೆ ಒಟ್ಟು 78,15,550 ಪ್ರಯಾಣಿಕರು ಸಂಚರಿಸಿದ್ದು ನಿಗಮಕ್ಕೆ 19.43 ಕೋಟಿ ರೂ. ಆದಾಯವಾಗಿದೆ ಎಂದು ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದರು. ಜಗಳೂರಿಗೆ ಸಂಜೆ 7.30 ರ ವರೆಗೆ ಬಸ್‌ಗಳಿದ್ದು ಮುಂದಿನ ತಿಂಗಳು ನಿಗಮಕ್ಕೆ ಹೊಸ ಬಸ್‌ಗಳು ಬರಲಿದ್ದು, ಕೊರತೆ ಇರುವೆಡೆ ಕಲ್ಪಿಸಲಾಗುತ್ತದೆ ಎಂದರು.
    ಗೃಹಲಕ್ಷ್ಮೀ ಯೋಜನೆಯಡಿ 324046 ಮಹಿಳೆಯರು ನೋಂದಣಿಯಾಗಿದ್ದಾರೆ. ನೋಂದಣಿಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ತಿಳಿಸಿದರು.
    ಜಿಲ್ಲೆಯಲ್ಲಿ 5,89,364 ಬೆಸ್ಕಾಂ ಗ್ರಾಹಕರಿದ್ದು ಗೃಹಜ್ಯೋತಿಯಡಿ 405559 ಗ್ರಾಹಕರು ನೊಂದಾಯಿಸಿದ್ದಾರೆ. ಆ.15 ರ ವರೆಗೆ 3,52,131 ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗಿದೆ ಎಂದು ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.
    ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಮೌಲ್ಯದ ಹಣವನ್ನು ಪಡಿತರದಾರರಿಗೆ ನೀಡಲಾಗುತ್ತಿದೆ. ಜುಲೈನಲ್ಲಿ 2,88,207 ಕಾರ್ಡ್‌ನ 10,32,982 ಜನರಿಗೆ 16.67 ಕೋಟಿ ರೂ. ಜಮೆಯಾಗಿದೆ. ಆಗಸ್ಟ್‌ನಲ್ಲಿ 3,06,418 ಕಾರ್ಡ್‌ನ 11,12,634 ಜನರಿಗೆ 17.77 ಕೋಟಿ ರೂ. ಜಮೆ ಮಾಡಲು ಅನುದಾನ ಬಿಡುಗಡೆಯಾಗಿದೆ. ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದ 840, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದ 671, ಬ್ಯಾಂಕಿಂಗ್ ಇ-ಕೆವೈಸಿ ಪೂರ್ಣಗೊಳಿಸದ 9260, ಮೂರು ತಿಂಗಳಿನಿಂದ ಪಡಿತರ ಪಡೆಯದ 14,137 ಮತ್ತು ಬ್ಯಾಂಕ್ ಖಾತೆ ಹೊಂದದ 170 ಕಾರ್ಡ್‌ದಾರರಿಗೆ ನಗದು ಪಾವತಿಯಾಗಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಮಾಹಿತಿ ನೀಡಿದರು. ಉಳಿದ ಫಲಾನುಭವಿಗಳಿಗೂ ನಗದು ಜಮೆ ಮಾಡಲು ಕ್ರಮ ವಹಿಸಲು ಡಿಸಿ ಡಾ. ಎಂ.ವಿ.ವೆಂಕಟೇಶ್ ಸೂಚಿಸಿದರು.
    ಜಿಲ್ಲೆಯಲ್ಲಿ 288 ಮಂದಿ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಸಂತ್ರಸ್ತರಿದ್ದು ಇವರ ಮಕ್ಕಳಿಗೆ ನಿಯಮಾನುಸಾರ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದರು.
    ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸಾಂಸ್ಥಿಕ ಹೆರಿಗೆ ಮೂಲಕ ನವಜಾತ ಶಿಶು ಮತ್ತು ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸಬೇಕಿದೆ. ಜುಲೈನಲ್ಲಿ 8 ತಾಯಂದಿರ ಮರಣವಾಗಿದ್ದಕ್ಕೆ ಕಾರಣ ಕುರಿತು ಅಧ್ಯಯನ ಮಾಡಬೇಕೆಂದು ಜಿಲ್ಲಾಧಿಕಾರಿ ಪ್ರಸ್ತಾಪಿಸಿದರು.
    ಇವು ಬೇರೆ ಜಿಲ್ಲೆಗಳಿಂದ ರೆಫರೆಲ್ ಆಗಿ ಬಂದ ಪ್ರಕರಣಗಳು ಇದಾಗಿವೆ ಎಂದು ಡಿಎಚ್‌ಒ ನಾಗರಾಜ್ ಹೇಳಿದರು. ಪ್ರತಿಯೊಂದೂ ಪ್ರಕರಣಗಳು ಆಡಿಟ್ ಆಗಬೇಕೆಂದು ಕಾರ್ಯದರ್ಶಿ ಸೂಚನೆ ನೀಡಿದರು. ಭೂ ಮಾಪನಾ ಇಲಾಖೆಯಲ್ಲಿ 16918 ಅರ್ಜಿಗಳು ಬಾಕಿ ಇದ್ದು ಜನರೇ ಸರ್ವೆ ಮಾಡಿಕೊಳ್ಳುವ ಸ್ವಾವಲಂಬಿ ಆ್ಯಪ್ ಕುರಿತು ಹೆಚ್ಚು ಪ್ರಚಾರ ನೀಡಬೇಕೆಂದೂ ಹೇಳಿದರು.
    ಸಭೆಯಲ್ಲಿ ಜಿಪಂ ಸಿಇಒ ಸುರೇಶ್ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts