More

    ಯೋಗ ಕ್ಷೇಮ: ಯೋಗ-ಮುದ್ರೆಗಳಿಂದ ಚರ್ಮದ ಅಲರ್ಜಿ ನಿಯಂತ್ರಣ

    ಯೋಗ ಕ್ಷೇಮ: ಯೋಗ-ಮುದ್ರೆಗಳಿಂದ ಚರ್ಮದ ಅಲರ್ಜಿ ನಿಯಂತ್ರಣ

    * ಋತುಸ್ರಾವದ ಸಂದರ್ಭದಲ್ಲಿ ಮಾಡಬಹುದಾದ ಹಾಗೂ ಮಾಡಬಾರದ ಆಸನಗಳು ಯಾವುವು? ಋತುಚಕ್ರ ಸಮತೋಲನ ಹಾಗೂ ಗರ್ಭಕೋಶದ ಆರೋಗ್ಯ ಕಾಪಾಡಲು ಇರುವ ಆಸನ ಮತ್ತು ಮುದ್ರೆಯ ಬಗ್ಗೆ ತಿಳಿಸಿ.

    | ರೂಪ 38 ವರ್ಷ, ಬೆಂಗಳೂರು

    ಋತುಸ್ರಾವದ ಸಂದರ್ಭದಲ್ಲಿ ವಿಶ್ರಾಂತಿ ಅಗತ್ಯ. ಆಸನಗಳ ಅಭ್ಯಾಸ ಬೇಡ. ಆದರೆ ಅಗತ್ಯ ಇದ್ದಲ್ಲಿ ಬದ್ಧಕೋಣಾಸನ, ವಜ್ರಾಸನ, ವೀರಾಸನ, ಶವಾಸನ ಮಾಡಬಹುದು. ಚಿಕ್ಕ ಧ್ಯಾನ, ಪ್ರಾಣಾಯಾಮ ಅಭ್ಯಾಸ ಮಾಡಿ. ಮುದ್ರೆಗಳನ್ನು ಮಾಡಿ. ಆದರೆ ಮಂತ್ರ ಬೇಡ. ವಿವಿಧ ಮುಟ್ಟಿನ ಸಮಸ್ಯೆಗಳಿಗೆ ಯೋಗ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಹಾಮೋನುಗಳು ಮತ್ತು ಮುಟ್ಟಿನ ಚಕ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮುಟ್ಟಿನ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಯೋಗ ನೆರವು ನೀಡುತ್ತದೆ.

    ಮುಟ್ಟಿನ ಚಕ್ರ ಸಮತೋಲನ ಹಾಗೂ ಗರ್ಭಕೋಶದ ಆರೋಗ್ಯಕ್ಕೆ ಸೂಚಿತ ಆಸನಗಳು, ಮುದ್ರೆಗಳು: ಅರ್ಧಚಕ್ರಾಸನ, ಪಾದಹಸ್ತಾಸನ, ಪ್ರಸಾರಿತ ಪಾದೋತ್ಥಾನಾಸನ, ವೀರಭದ್ರಾಸನ, ಬದ್ಧಕೋಣಾಸನ, ವಜ್ರಾಸನ, ಜಾನುಶೀರ್ಷಾಸನ, ಶಶಾಂಕಾಸನ, ಮಂಡೂಕಾಸನ, ಸರ್ವಾಂಗಾಸನ, ಹಲಾಸನ, ಭುಜಂಗಾಸನ, ಶಲಭಾಸನ, ಧನುರಾಸನ, ಚಕ್ರಾಸನ, ಶವಾಸನ. ತಲಾ ಹತ್ತು ನಿಮಿಷ ಪ್ರಾಣಮುದ್ರೆ, ಚಿನ್ಮುದ್ರೆ, ವರುಣಮುದ್ರೆ, ಯೋನಿಮುದ್ರೆ, ಹಾಕಿನಿಮುದ್ರೆ, ಕ್ಷೇಪನಾಮುದ್ರೆ ಅಭ್ಯಾಸ ಮಾಡಿ.

    * ಚರ್ಮದ ಅಲರ್ಜಿಗೆ ಯೋಗ / ಮುದ್ರೆಯೊಂದಿಗೆ ಚಿಕಿತ್ಸೆ ನೀಡಬಹುದೇ?

    | ಡಿಂಪಲ್ 29 ವರ್ಷ, ಮಂಗಳೂರು

    ಚರ್ಮವು ದೇಹದ ಅತೀ ದೊಡ್ಡ ಅಂಗವಾಗಿದೆ. ಇದು ವಿಭಿನ್ನ ಹಾನಿಕಾರಕ ಜೀವಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ಚರ್ಮದ ಅಲರ್ಜಿ ಸಮಸ್ಯೆಗೆ ಹಲವಾರು ಕಾರಣಗಳಿವೆ. ರೋಗನಿರೋಧಕ ಶಕ್ತಿಯ ಕೊರತೆ, ಕೆಲವು ಆಹಾರಗಳು, ರಾಸಾಯನಿಕಗಳು, ಹಾಮೋನು ವ್ಯತ್ಯಾಸ, ಸೂರ್ಯನ ಬೆಳಕಿಗೆ ಅತಿಯಾಗಿ ಮೈಯೊಡ್ಡುವುದು ಇತ್ಯಾದಿ ಕಾರಣಗಳಿವೆ. ಚರ್ಮದ ಸಮಸ್ಯೆಗಳನ್ನು ಎದುರಿಸಲು ಆಸನ, ಪ್ರಾಣಾಯಾಮ, ಯೋಗವು ಸಹಾಯ ಮಾಡುತ್ತದೆ. ಯೋಗದಿಂದ ರಕ್ತಪರಿಚಲನೆ ಸುಧಾರಣೆ, ಹಾಮೋನುಗಳನ್ನು ಸಮತೋಲನಗೊಳಿಸುವುದು, ಜೀವಕೋಶಗಳಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುವುದು, ಒತ್ತಡ ನಿಯಂತ್ರಣ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು. ಭಸ್ತ್ರಿಕಾ ಪ್ರಾಣಾಯಾಮ, ನಾಡೀಶುದ್ಧಿ, ಆಸನಗಳಲ್ಲಿ ಶೀರ್ಷಾಸನ, ಸರ್ವಾಂಗಾಸನ, ಹಲಾಸನ, ಮತ್ಸ್ಯಾಸನ, ಅಧೋಮುಖ ಶ್ವಾನಾಸನ, ಶಶಾಂಕಾಸನ, ಚಕ್ರಾಸನ ಸಹಕಾರಿಯಾಗುತ್ತದೆ. ಮುದ್ರೆಗಳಲ್ಲಿ ಭ್ರಮರಮುದ್ರಾ ಒಂದು ರೀತಿಯ ಕೈಮುದ್ರೆ ಚಿಕಿತ್ಸೆಯಾಗಿದೆ. ಈ ಕೈಮುದ್ರೆಯಲ್ಲಿ ಅಲರ್ಜಿ ಮತ್ತು ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಭ್ರಮರಮುದ್ರೆ ಎಲ್ಲ ರೀತಿಯ ಅಲರ್ಜಿಗಳ ತಡೆಗೆ ಬಹಳ ಪರಿಣಾಮಕಾರಿ ಮುದ್ರೆ. ಸುಮಾರು ಇಪ್ಪತ್ತರಿಂದ ನಲ್ವತ್ತು ನಿಮಿಷ ಅಭ್ಯಾಸ ಮಾಡಿ. ಕೊನೆಯಲ್ಲಿ ಹತ್ತು ನಿಮಿಷ ಪ್ರಾಣಮುದ್ರೆ ಮಾಡಿ. ಉತ್ತಮ ಪೋಷಕಾಂಶ ಆಹಾರ ಸೇವಿಸಿ, ಶುಚಿತ್ವಕ್ಕೆ ಆದ್ಯತೆ ನೀಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts